الفرقان
ಕನ್ನಡ Translation with Arabic Quran Text
| ಕನ್ನಡ | العربية |
|---|---|
| 1 ಸತ್ಯಾಸತ್ಯ ವಿವೇಚಕ ಗ್ರಂಥವನ್ನು (ಕುರ್‌ಆನನ್ನು) ತನ್ನ ದಾಸನಿಗೆ (ಪ್ರವಾದಿಗೆ)—ಅವರು ಸರ್ವಲೋಕದವರಿಗೆ ಒಬ್ಬ ಮುನ್ನೆಚ್ಚರಿಕೆಗಾರನಾಗಲೆಂದು—ಅವತೀರ್ಣಗೊಳಿಸಿದ ಅಲ್ಲಾಹು ಸಮೃದ್ಧಪೂರ್ಣನಾಗಿದ್ದಾನೆ. | تَبَارَكَ ٱلَّذِى نَزَّلَ ٱلْفُرْقَانَ عَلَىٰ عَبْدِهِۦ لِيَكُونَ لِلْعَٰلَمِينَ نَذِيرًا. ﴿1﴾ |
| 2 ಅಂದರೆ ಭೂಮ್ಯಾಕಾಶಗಳ ಸಾರ್ವಭೌಮತ್ವವು ಯಾರಿಗೆ ಸೇರಿದೆಯೋ ಅವನು. ಅವನಿಗೆ ಯಾವುದೇ ಮಕ್ಕಳಿಲ್ಲ. ಸಾರ್ವಭೌಮತ್ವದಲ್ಲಿ ಅವನೊಂದಿಗೆ ಯಾವುದೇ ಸಹಭಾಗಿಗಳಿಲ್ಲ. ಅವನು ಎಲ್ಲಾ ವಸ್ತುಗಳನ್ನೂ ಸೃಷ್ಟಿಸಿ ಅದಕ್ಕೆ ನಿಖರವಾದ ನಿರ್ಣಯವನ್ನು ನಿಶ್ಚಯಿಸಿದ್ದಾನೆ. | ٱلَّذِى لَهُۥ مُلْكُ ٱلسَّمَٰوَٰتِ وَٱلْأَرْضِ وَلَمْ يَتَّخِذْ وَلَدًۭا وَلَمْ يَكُن لَّهُۥ شَرِيكٌۭ فِى ٱلْمُلْكِ وَخَلَقَ كُلَّ شَىْءٍۢ فَقَدَّرَهُۥ تَقْدِيرًۭا. ﴿2﴾ |
| 3 ಅವರು ಅವನನ್ನು ಬಿಟ್ಟು ಬೇರೆ ದೇವರುಗಳನ್ನು ಸ್ವೀಕರಿಸಿದ್ದಾರೆ. ಆದರೆ, ಆ ದೇವರುಗಳು ಯಾವುದೇ ವಸ್ತುವನ್ನು ಸೃಷ್ಟಿಸುವುದಿಲ್ಲ. ವಾಸ್ತವವಾಗಿ ಅವರೇ ಸೃಷ್ಟಿಗಳು. ಸ್ವಯಂ ತಮಗೂ ಕೂಡ ಯಾವುದೇ ತೊಂದರೆ ಅಥವಾ ಉಪಕಾರವನ್ನು ಮಾಡುವ ಸಾಮರ್ಥ್ಯವನ್ನು ಅವರು ಹೊಂದಿಲ್ಲ. ಮರಣ, ಜೀವನ, ಪುನರುತ್ಥಾನ ಮುಂತಾದ ಯಾವುದೂ ಅವರ ವಶದಲ್ಲಿಲ್ಲ. | وَٱتَّخَذُوا۟ مِن دُونِهِۦٓ ءَالِهَةًۭ لَّا يَخْلُقُونَ شَيْـًۭٔا وَهُمْ يُخْلَقُونَ وَلَا يَمْلِكُونَ لِأَنفُسِهِمْ ضَرًّۭا وَلَا نَفْعًۭا وَلَا يَمْلِكُونَ مَوْتًۭا وَلَا حَيَوٰةًۭ وَلَا نُشُورًۭا. ﴿3﴾ |
| 4 ಸತ್ಯನಿಷೇಧಿಗಳು ಹೇಳಿದರು: “ಈ ಕುರ್‌ಆನ್ ಸುಳ್ಳಿನ ಕಂತೆಯಾಗಿದೆ. ಅವನು (ಪ್ರವಾದಿ) ಇದನ್ನು ಸ್ವಯಂ ರಚಿಸಿದ್ದಾನೆ. ಬೇರೆ ಕೆಲವರು ಕೂಡ ಅದಕ್ಕೆ ಸಹಾಯ ಮಾಡಿದ್ದಾರೆ.” ಇವರು ಮಹಾ ಅನ್ಯಾಯವನ್ನು ಮತ್ತು ಸುಳ್ಳಾರೋಪವನ್ನು ಮಾಡಿದ್ದಾರೆ. | وَقَالَ ٱلَّذِينَ كَفَرُوٓا۟ إِنْ هَٰذَآ إِلَّآ إِفْكٌ ٱفْتَرَىٰهُ وَأَعَانَهُۥ عَلَيْهِ قَوْمٌ ءَاخَرُونَ ۖ فَقَدْ جَآءُو ظُلْمًۭا وَزُورًۭا. ﴿4﴾ |
| 5 ಅವರು ಹೇಳಿದರು: “ಇದು ಪ್ರಾಚೀನ ಕಾಲದ ಜನರ ಪುರಾಣಗಳು. ಅವನು (ಪ್ರವಾದಿ) ಇದನ್ನು ಸ್ವಯಂ ಬರೆಯುತ್ತಿದ್ದಾನೆ. ಮುಂಜಾನೆ ಮತ್ತು ಸಂಜೆ ಅವನಿಗೆ ಇದನ್ನು ಓದಿಕೊಡಲಾಗುತ್ತಿದೆ.” | وَقَالُوٓا۟ أَسَٰطِيرُ ٱلْأَوَّلِينَ ٱكْتَتَبَهَا فَهِىَ تُمْلَىٰ عَلَيْهِ بُكْرَةًۭ وَأَصِيلًۭا. ﴿5﴾ |
| 6 ಹೇಳಿರಿ: “ಭೂಮ್ಯಾಕಾಶಗಳಲ್ಲಿರುವ ರಹಸ್ಯಗಳನ್ನು ತಿಳಿದವನೇ ಇದನ್ನು ಅವತೀರ್ಣಗೊಳಿಸಿದ್ದಾನೆ. ನಿಶ್ಚಯವಾಗಿಯೂ ಅವನು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.” | قُلْ أَنزَلَهُ ٱلَّذِى يَعْلَمُ ٱلسِّرَّ فِى ٱلسَّمَٰوَٰتِ وَٱلْأَرْضِ ۚ إِنَّهُۥ كَانَ غَفُورًۭا رَّحِيمًۭا. ﴿6﴾ |
| 7 ಅವರು ಹೇಳುತ್ತಾರೆ: “ಇವನೆಂತಹ ಪ್ರವಾದಿ? ಇವನು ಆಹಾರ ಸೇವಿಸುತ್ತಾನೆ ಮತ್ತು ಪೇಟೆಗಳಲ್ಲಿ ಸಂಚರಿಸುತ್ತಾನೆ. ಇವನ ಜೊತೆಗೆ ಒಬ್ಬ ದೇವದೂತನನ್ನು ಏಕೆ ಕಳುಹಿಸಲಾಗಿಲ್ಲ? ಅವನು ಕೂಡ ಇವನ ಜೊತೆಗೆ ಸೇರಿ ಮುನ್ನೆಚ್ಚರಿಕೆ ನೀಡಬಹುದಿತ್ತಲ್ಲವೇ? | وَقَالُوا۟ مَالِ هَٰذَا ٱلرَّسُولِ يَأْكُلُ ٱلطَّعَامَ وَيَمْشِى فِى ٱلْأَسْوَاقِ ۙ لَوْلَآ أُنزِلَ إِلَيْهِ مَلَكٌۭ فَيَكُونَ مَعَهُۥ نَذِيرًا. ﴿7﴾ |
| 8 ಅಥವಾ ಇವನ ಬಳಿ ಒಂದು ನಿಧಿಯನ್ನು ಏಕೆ ಹಾಕಿಲ್ಲ? ಅಥವಾ ಇವನಿಗೆ ಹಣ್ಣುಗಳನ್ನು ತಿನ್ನಲು ಒಂದು ತೋಟವನ್ನು ಏಕೆ ಕೊಡಲಾಗಿಲ್ಲ?” ಆ ಅಕ್ರಮಿಗಳು ಹೇಳಿದರು: “ನೀವು ಮಾಟ ಮಾಡಲಾದ ವ್ಯಕ್ತಿಯನ್ನೇ ಅನುಸರಿಸುತ್ತಿದ್ದೀರಿ.” | أَوْ يُلْقَىٰٓ إِلَيْهِ كَنزٌ أَوْ تَكُونُ لَهُۥ جَنَّةٌۭ يَأْكُلُ مِنْهَا ۚ وَقَالَ ٱلظَّٰلِمُونَ إِن تَتَّبِعُونَ إِلَّا رَجُلًۭا مَّسْحُورًا. ﴿8﴾ |
| 9 ನೋಡಿ! ಅವರು ನಿಮ್ಮ ಬಗ್ಗೆ ಹೇಗೆಲ್ಲಾ ಮಾತನಾಡುತ್ತಿದ್ದಾರೆಂದು. Fದರಿಂದ ಸ್ವತಃ ಅವರೇ ದಾರಿತಪ್ಪುತ್ತಿದ್ದಾರೆ. ಅವರಿಗೆ ಯಾವುದೇ ರೀತಿಯಲ್ಲೂ ಸರಿದಾರಿಗೆ ಬರಲು ಸಾಧ್ಯವಾಗುವುದಿಲ್ಲ. | ٱنظُرْ كَيْفَ ضَرَبُوا۟ لَكَ ٱلْأَمْثَٰلَ فَضَلُّوا۟ فَلَا يَسْتَطِيعُونَ سَبِيلًۭا. ﴿9﴾ |
| 10 ಅಲ್ಲಾಹು ಸಮೃದ್ಧಪೂರ್ಣನು. ಅವನು ಇಚ್ಛಿಸಿದರೆ ನಿಮಗೆ ಅವರು ಹೇಳುವುದಕ್ಕಿಂತಲೂ ಶ್ರೇಷ್ಠವಾದುದನ್ನು, ಅಂದರೆ ತಳಭಾಗದಲ್ಲಿ ನದಿಗಳು ಹರಿಯುವ ತೋಟಗಳನ್ನು ದಯಪಾಲಿಸುವನು ಮತ್ತು ನಿಮಗೆ ಮಹಾ ಸೌಧಗಳನ್ನು ದಯಪಾಲಿಸುವನು. | تَبَارَكَ ٱلَّذِىٓ إِن شَآءَ جَعَلَ لَكَ خَيْرًۭا مِّن ذَٰلِكَ جَنَّٰتٍۢ تَجْرِى مِن تَحْتِهَا ٱلْأَنْهَٰرُ وَيَجْعَل لَّكَ قُصُورًۢا. ﴿10﴾ |
| 11 ಆದರೆ, ಅವರು ಅಂತ್ಯಸಮಯವನ್ನು ನಿಷೇಧಿಸಿದರು. ಅಂತ್ಯಸಮಯವನ್ನು ನಿಷೇಧಿಸಿದವರಿಗೆ ನಾವು ಧಗಧಗಿಸುವ ನರಕಾಗ್ನಿಯನ್ನು ಸಿದ್ಧಗೊಳಿಸಿದ್ದೇವೆ. | بَلْ كَذَّبُوا۟ بِٱلسَّاعَةِ ۖ وَأَعْتَدْنَا لِمَن كَذَّبَ بِٱلسَّاعَةِ سَعِيرًا. ﴿11﴾ |
| 12 ಅದು ಅವರನ್ನು ವಿದೂರ ಸ್ಥಳದಿಂದ ನೋಡುವಾಗಲೇ, ಅದು ರೋಷಾವೇಶದಿಂದ ಆರ್ಭಟಿಸುವುದನ್ನು ಅವರು ಕೇಳುವರು. | إِذَا رَأَتْهُم مِّن مَّكَانٍۭ بَعِيدٍۢ سَمِعُوا۟ لَهَا تَغَيُّظًۭا وَزَفِيرًۭا. ﴿12﴾ |
| 13 ಅವರನ್ನು ಸಂಕೋಲೆಗಳಿಂದ ಬಂಧಿಸಿ ನರಕದ ಒಂದು ಇಕ್ಕಟ್ಟಾದ ಸ್ಥಳದಲ್ಲಿ ಎಸೆಯಲಾದರೆ ಅವರು ಅಲ್ಲಿ ವಿನಾಶವನ್ನು ಕೂಗಿ ಕರೆಯುವರು. | وَإِذَآ أُلْقُوا۟ مِنْهَا مَكَانًۭا ضَيِّقًۭا مُّقَرَّنِينَ دَعَوْا۟ هُنَالِكَ ثُبُورًۭا. ﴿13﴾ |
| 14 (ಅವರೊಡನೆ ಹೇಳಲಾಗುವುದು).“ಇಂದು ನೀವು ಒಂದು ವಿನಾಶವನ್ನು ಕೂಗಿ ಕರೆಯಬೇಡಿ. ಹಲವಾರು ವಿನಾಶಗಳನ್ನು ಕೂಗಿ ಕರೆಯಿರಿ.” | لَّا تَدْعُوا۟ ٱلْيَوْمَ ثُبُورًۭا وَٰحِدًۭا وَٱدْعُوا۟ ثُبُورًۭا كَثِيرًۭا. ﴿14﴾ |
| 15 ಹೇಳಿರಿ: “ಅದು ಶ್ರೇಷ್ಠವೇ? ಅಥವಾ ದೇವಭಯವುಳ್ಳವರಿಗೆ ವಾಗ್ದಾನ ಮಾಡಲಾದ ಶಾಶ್ವತ ಸ್ವರ್ಗವು ಶ್ರೇಷ್ಠವೇ?” ಅದು ಅವರಿಗೆ ನೀಡಲಾಗುವ ಪ್ರತಿಫಲ ಮತ್ತು ಅವರ ಗಮ್ಯಸ್ಥಾನವಾಗಿದೆ. | قُلْ أَذَٰلِكَ خَيْرٌ أَمْ جَنَّةُ ٱلْخُلْدِ ٱلَّتِى وُعِدَ ٱلْمُتَّقُونَ ۚ كَانَتْ لَهُمْ جَزَآءًۭ وَمَصِيرًۭا. ﴿15﴾ |
| 16 ಅವರಿಗೆ ಅಲ್ಲಿ ಅವರು ಇಚ್ಛಿಸುವುದೆಲ್ಲವೂ ದೊರೆಯುತ್ತದೆ. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುತ್ತಾರೆ. ಅದು ನಿಮ್ಮ ಪರಿಪಾಲಕನ (ಅಲ್ಲಾಹನ) ಉತ್ತರದಾಯಿತ್ವವಿರುವ ವಾಗ್ದಾನವಾಗಿದೆ. | لَّهُمْ فِيهَا مَا يَشَآءُونَ خَٰلِدِينَ ۚ كَانَ عَلَىٰ رَبِّكَ وَعْدًۭا مَّسْـُٔولًۭا. ﴿16﴾ |
| 17 ಅವನು ಅವರನ್ನು ಮತ್ತು ಅಲ್ಲಾಹನನ್ನು ಬಿಟ್ಟು ಅವರು ಆರಾಧಿಸುತ್ತಿದ್ದ ದೇವರುಗಳನ್ನು ಒಟ್ಟುಗೂಡಿಸುವ ದಿನ! ಅವನು (ಆ ದೇವರುಗಳೊಡನೆ) ಕೇಳುವನು: “ನನ್ನ ಈ ದಾಸರನ್ನು ದಾರಿತಪ್ಪಿಸಿದ್ದು ನೀವೋ? ಅಥವಾ ಸ್ವತಃ ಅವರೇ ದಾರಿತಪ್ಪಿದರೋ?” | وَيَوْمَ يَحْشُرُهُمْ وَمَا يَعْبُدُونَ مِن دُونِ ٱللَّهِ فَيَقُولُ ءَأَنتُمْ أَضْلَلْتُمْ عِبَادِى هَٰٓؤُلَآءِ أَمْ هُمْ ضَلُّوا۟ ٱلسَّبِيلَ. ﴿17﴾ |
| 18 ಅವರು (ದೇವರುಗಳು) ಹೇಳುವರು: “ನೀನು ಪರಿಶುದ್ಧನು! ನಿನ್ನನ್ನು ಬಿಟ್ಟು ಬೇರೆಯವರನ್ನು ರಕ್ಷಕರಾಗಿ ಸ್ವೀಕರಿಸುವುದು ನಮಗೆ ಯೋಗ್ಯವಲ್ಲ. ಆದರೆ ನೀನು ಅವರಿಗೆ ಮತ್ತು ಅವರ ಪೂರ್ವಜರಿಗೆ ಸವಲತ್ತುಗಳನ್ನು ದಯಪಾಲಿಸಿದೆ. ಎಲ್ಲಿಯವರೆಗೆಂದರೆ ಅವರು ಉಪದೇಶವನ್ನು ಸಂಪೂರ್ಣ ಮರೆತು, ನಾಶವಾಗಿ ಹೋದ ಒಂದು ಜನತೆಯಾಗಿ ಮಾರ್ಪಡುವ ತನಕ.” | قَالُوا۟ سُبْحَٰنَكَ مَا كَانَ يَنۢبَغِى لَنَآ أَن نَّتَّخِذَ مِن دُونِكَ مِنْ أَوْلِيَآءَ وَلَٰكِن مَّتَّعْتَهُمْ وَءَابَآءَهُمْ حَتَّىٰ نَسُوا۟ ٱلذِّكْرَ وَكَانُوا۟ قَوْمًۢا بُورًۭا. ﴿18﴾ |
|
19
(ಅಲ್ಲಾಹು ಬಹುದೇವಾರಾಧಕರೊಡನೆ ಹೇಳುವನು): “ನೀವು ಏನು ಹೇಳುತ್ತಿದ್ದಿರೋ ಅದನ್ನು ಅವರು (ದೇವರುಗಳು) ನಿಷೇಧಿಸಿದ್ದಾರೆ. ಇನ್ನು ಶಿಕ್ಷೆಯನ್ನು ದೂರೀಕರಿಸಲು ಅಥವಾ ಯಾವುದೇ ಸಹಾಯ ಪಡೆಯಲು ನಿಮಗೆ ಸಾಧ್ಯವಿಲ್ಲ. ನಿಮ್ಮಲ್ಲಿ ಅಕ್ರಮವೆಸಗಿದವನು[1] ಯಾರೋ ಅವನಿಗೆ ನಾವು ಮಹಾ ಶಿಕ್ಷೆಯ ರುಚಿಯನ್ನು ತೋರಿಸುವೆವು.”
[1] ಅಂದರೆ ದೇವ ಸಹಭಾಗಿತ್ವ (ಶಿರ್ಕ್) ಮಾಡಿದವನು.
|
فَقَدْ كَذَّبُوكُم بِمَا تَقُولُونَ فَمَا تَسْتَطِيعُونَ صَرْفًۭا وَلَا نَصْرًۭا ۚ وَمَن يَظْلِم مِّنكُمْ نُذِقْهُ عَذَابًۭا كَبِيرًۭا. ﴿19﴾ |
| 20 (ಪ್ರವಾದಿಯವರೇ) ನಾವು ನಿಮಗಿಂತ ಮೊದಲು ಕಳುಹಿಸಿದ ಸಂದೇಶವಾಹಕರೆಲ್ಲರೂ ಆಹಾರವನ್ನು ಸೇವಿಸುತ್ತಿದ್ದರು ಮತ್ತು ಪೇಟೆಗಳಲ್ಲಿ ಸಂಚರಿಸುತ್ತಿದ್ದರು. ನಾವು ನಿಮ್ಮಲ್ಲಿ ಒಬ್ಬರನ್ನು ಇನ್ನೊಬ್ಬರಿಗೆ ಪರೀಕ್ಷೆಯನ್ನಾಗಿ ಮಾಡಿದ್ದೇವೆ. ನೀವು ತಾಳ್ಮೆಯಿಂದಿರುತ್ತೀರೋ ಎಂದು ನೋಡಲು. ನಿಮ್ಮ ಪರಿಪಾಲಕನು ಎಲ್ಲವನ್ನೂ ನೋಡುವವನಾಗಿದ್ದಾನೆ. | وَمَآ أَرْسَلْنَا قَبْلَكَ مِنَ ٱلْمُرْسَلِينَ إِلَّآ إِنَّهُمْ لَيَأْكُلُونَ ٱلطَّعَامَ وَيَمْشُونَ فِى ٱلْأَسْوَاقِ ۗ وَجَعَلْنَا بَعْضَكُمْ لِبَعْضٍۢ فِتْنَةً أَتَصْبِرُونَ ۗ وَكَانَ رَبُّكَ بَصِيرًۭا. ﴿20﴾ |
| 21 ನಮ್ಮನ್ನು ಭೇಟಿಯಾಗುವ ನಿರೀಕ್ಷೆಯಿಲ್ಲದವರು ಹೇಳಿದರು: “ನಮ್ಮ ಮೇಲೆ ದೇವದೂತರುಗಳನ್ನು ಏಕೆ ಇಳಿಸಲಾಗುವುದಿಲ್ಲ? ಅಥವಾ ನಮಗೇಕೆ ನಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ನೇರವಾಗಿ ನೋಡಲಾಗುವುದಿಲ್ಲ?” ಅವರು ಸ್ವಯಂ ಅವರ ಬಗ್ಗೆಯೇ ಅಹಂಕಾರಪಡುತ್ತಿದ್ದಾರೆ ಮತ್ತು ಕಡು ಧಿಕ್ಕಾರದಿಂದ ವರ್ತಿಸುತ್ತಿದ್ದಾರೆ. | ۞ وَقَالَ ٱلَّذِينَ لَا يَرْجُونَ لِقَآءَنَا لَوْلَآ أُنزِلَ عَلَيْنَا ٱلْمَلَٰٓئِكَةُ أَوْ نَرَىٰ رَبَّنَا ۗ لَقَدِ ٱسْتَكْبَرُوا۟ فِىٓ أَنفُسِهِمْ وَعَتَوْ عُتُوًّۭا كَبِيرًۭا. ﴿21﴾ |
|
22
ಅವರು ದೇವದೂತರುಗಳನ್ನು ನೋಡುವ ದಿನ![1] ಅಂದು ಅಪರಾಧಿಗಳಿಗೆ ಯಾವುದೇ ಸಿಹಿ ಸುದ್ದಿಯಿರುವುದಿಲ್ಲ. ಅವರು (ದೇವದೂತರುಗಳು) ಹೇಳುವರು: “ನಿಷಿದ್ಧವಾಗಿದೆ! ನಿಮಗೆ ಎಲ್ಲವನ್ನೂ ನಿಷೇಧಿಸಲಾಗಿದೆ!”[2]
[1] ಅಂದರೆ ಅವರು ಸಾವನ್ನಪ್ಪುವ ದಿನ. ಆಗ ಅವರು ದೇವದೂತರುಗಳನ್ನು ಕಣ್ಣಾರೆ ನೋಡುತ್ತಾರೆ. ಅದು ಅವರಿಗೆ ಖುಷಿ ಅಥವಾ ಸಂತೋಷದ ದಿನವಾಗಿರುವುದಿಲ್ಲ. [2] ಅಂದರೆ ನಿಮಗೆ ಸ್ವರ್ಗವು ನಿಷಿದ್ಧವಾಗಿದೆ ಮತ್ತು ಸತ್ಯವಿಶ್ವಾಸಿಗಳಿಗೆ ಸಿಗುವ ಸುಖ-ಸಂತೋಷಗಳೆಲ್ಲವೂ ನಿಮಗೆ ನಿಷೇಧಿಸಲಾಗಿದೆ.
|
يَوْمَ يَرَوْنَ ٱلْمَلَٰٓئِكَةَ لَا بُشْرَىٰ يَوْمَئِذٍۢ لِّلْمُجْرِمِينَ وَيَقُولُونَ حِجْرًۭا مَّحْجُورًۭا. ﴿22﴾ |
| 23 ಅವರು ಮಾಡಿದ ಕರ್ಮಗಳ ಬಳಿಗೆ ತೆರಳಿ ನಾವು ಅವುಗಳನ್ನು ಚದುರಿದ ಧೂಳಿಯಂತೆ ಮಾಡುವೆವು. | وَقَدِمْنَآ إِلَىٰ مَا عَمِلُوا۟ مِنْ عَمَلٍۢ فَجَعَلْنَٰهُ هَبَآءًۭ مَّنثُورًا. ﴿23﴾ |
| 24 ಅಂದು ಸ್ವರ್ಗವಾಸಿಗಳು ಅತ್ಯುತ್ತಮ ವಾಸಸ್ಥಳಗಳನ್ನು ಮತ್ತು ಅತ್ಯುತ್ತಮ ವಿಶ್ರಾಂತಿಧಾಮಗಳನ್ನು ಹೊಂದಿರುವರು. | أَصْحَٰبُ ٱلْجَنَّةِ يَوْمَئِذٍ خَيْرٌۭ مُّسْتَقَرًّۭا وَأَحْسَنُ مَقِيلًۭا. ﴿24﴾ |
| 25 ಆಕಾಶವು ಮೋಡಗಳ ಸಹಿತ ಒಡೆದು ಛಿದ್ರವಾಗುವ ಮತ್ತು ದೇವದೂತರುಗಳನ್ನು ನಿರಂತರವಾಗಿ ಇಳಿಸಲಾಗುವ ದಿನ! | وَيَوْمَ تَشَقَّقُ ٱلسَّمَآءُ بِٱلْغَمَٰمِ وَنُزِّلَ ٱلْمَلَٰٓئِكَةُ تَنزِيلًا. ﴿25﴾ |
| 26 ಅಂದು ನಿಜವಾದ ಸಾರ್ವಭೌಮತ್ವವು ಪರಮ ದಯಾಳುವಾದ ಅಲ್ಲಾಹನಿಗೆ ಮಾತ್ರ. ಅದು ಸತ್ಯನಿಷೇಧಿಗಳಿಗೆ ಸಂಬಂಧಿಸಿದಂತೆ ಅತ್ಯಂತ ದುಷ್ಕರ ದಿನವಾಗಿದೆ. | ٱلْمُلْكُ يَوْمَئِذٍ ٱلْحَقُّ لِلرَّحْمَٰنِ ۚ وَكَانَ يَوْمًا عَلَى ٱلْكَٰفِرِينَ عَسِيرًۭا. ﴿26﴾ |
| 27 ಅಂದು ಅಕ್ರಮವೆಸಗಿದವನು ತನ್ನ ಕೈಗಳನ್ನು ಕಚ್ಚುತ್ತಾ ಹೇಳುವನು: “ನಾನು ಸಂದೇಶವಾಹಕರ ಮಾರ್ಗವನ್ನು ಆರಿಸುತ್ತಿದ್ದರೆ ಎಷ್ಟು ಚೆನ್ನಾಗಿತ್ತು! | وَيَوْمَ يَعَضُّ ٱلظَّالِمُ عَلَىٰ يَدَيْهِ يَقُولُ يَٰلَيْتَنِى ٱتَّخَذْتُ مَعَ ٱلرَّسُولِ سَبِيلًۭا. ﴿27﴾ |
| 28 ಅಯ್ಯೋ ನನ್ನ ದುರ್ಗತಿಯೇ! ನಾನು ಇವನನ್ನು ಮಿತ್ರನಾಗಿ ಸ್ವೀಕರಿಸದಿದ್ದರೆ ಎಷ್ಟು ಚೆನ್ನಾಗಿತ್ತು! | يَٰوَيْلَتَىٰ لَيْتَنِى لَمْ أَتَّخِذْ فُلَانًا خَلِيلًۭا. ﴿28﴾ |
| 29 ನನ್ನ ಬಳಿಗೆ ಉಪದೇಶವು ಬಂದ ಬಳಿಕವೂ ಅವನು ನನ್ನನ್ನು ಅದರಿಂದ ತಪ್ಪಿಸಿದನು.” ಶೈತಾನನು ಮಾನವನಿಗೆ ದ್ರೋಹವೆಸಗುವವನೇ ಆಗಿದ್ದಾನೆ. | لَّقَدْ أَضَلَّنِى عَنِ ٱلذِّكْرِ بَعْدَ إِذْ جَآءَنِى ۗ وَكَانَ ٱلشَّيْطَٰنُ لِلْإِنسَٰنِ خَذُولًۭا. ﴿29﴾ |
| 30 ಸಂದೇಶವಾಹಕರು ಹೇಳುವರು: “ನನ್ನ ಪರಿಪಾಲಕನೇ, ನಿಶ್ಚಯವಾಗಿಯೂ ನನ್ನ ಸಮುದಾಯವು ಈ ಕುರ್‌ಆನನ್ನು ತೊರೆದು ಬಿಟ್ಟಿದೆ.” | وَقَالَ ٱلرَّسُولُ يَٰرَبِّ إِنَّ قَوْمِى ٱتَّخَذُوا۟ هَٰذَا ٱلْقُرْءَانَ مَهْجُورًۭا. ﴿30﴾ |
| 31 ಈ ರೀತಿ ನಾವುಎಲ್ಲಾ ಸಂದೇಶವಾಹಕರಿಗೂ ಕೆಲವು ಅಪರಾಧಿಗಳನ್ನು ಶತ್ರುಗಳಾಗಿ ಮಾಡಿದ್ದೇವೆ. ಸನ್ಮಾರ್ಗ ತೋರಿಸಲು ಮತ್ತು ಸಹಾಯ ಮಾಡಲು ನಿಮ್ಮ ಪರಿಪಾಲಕನೇ (ಅಲ್ಲಾಹನೇ) ಸಾಕು! | وَكَذَٰلِكَ جَعَلْنَا لِكُلِّ نَبِىٍّ عَدُوًّۭا مِّنَ ٱلْمُجْرِمِينَ ۗ وَكَفَىٰ بِرَبِّكَ هَادِيًۭا وَنَصِيرًۭا. ﴿31﴾ |
| 32 ಸತ್ಯನಿಷೇಧಿಗಳು ಕೇಳಿದರು: “ಕುರ್‌ಆನನ್ನು ಒಮ್ಮೆಲೇ ಸಂಪೂರ್ಣವಾಗಿ ಏಕೆ ಇಳಿಸಲಾಗಿಲ್ಲ?” ನಾವು ಈ ರೀತಿಯಲ್ಲಿ (ಹಂತ ಹಂತವಾಗಿ ಇಳಿಸಿದ್ದು ಏಕೆಂದರೆ) ಅದರ ಮೂಲಕ ನಿಮ್ಮ ಹೃದಯವನ್ನು ದೃಢವಾಗಿ ನಿಲ್ಲಿಸಲು. ನಾವು ಅದನ್ನು ಸ್ವಲ್ಪ ಸ್ವಲ್ಪವಾಗಿಯೇ ಪಠಿಸಿಕೊಡುತ್ತೇವೆ. | وَقَالَ ٱلَّذِينَ كَفَرُوا۟ لَوْلَا نُزِّلَ عَلَيْهِ ٱلْقُرْءَانُ جُمْلَةًۭ وَٰحِدَةًۭ ۚ كَذَٰلِكَ لِنُثَبِّتَ بِهِۦ فُؤَادَكَ ۖ وَرَتَّلْنَٰهُ تَرْتِيلًۭا. ﴿32﴾ |
|
33
ಅವರು ನಿಮ್ಮ ಬಳಿಗೆ ಯಾವುದೇ ಉದಾಹರಣೆಯನ್ನು ತಂದರೂ, ನಾವು ಅದರ ನಿಜವಾದ ಉತ್ತರವನ್ನು ಮತ್ತು ಅತ್ಯುತ್ತಮ ವಿವರಣೆಯನ್ನು ಖಂಡಿತ ತರುವೆವು.[1]
[1] ಕುರ್‌ಆನನ್ನು ಹಂತ ಹಂತವಾಗಿ ಇಳಿಸಿರುವುದರ ಹಿಂದಿರುವ ಇನ್ನೊಂದು ಜಾಣ್ಮೆಯೇನೆಂದರೆ, ಸತ್ಯನಿಷೇಧಿಗಳು ಯಾವುದೇ ತರ್ಕದೊಂದಿಗೆ ಬಂದರೂ ಅದಕ್ಕೆ ಕುರ್‌ಆನಿನ ಮೂಲಕವೇ ಸೂಕ್ತ ಮತ್ತು ಸ್ಪಷ್ಟ ಉತ್ತರವನ್ನು ನೀಡಲಾಗುತ್ತದೆ.
|
وَلَا يَأْتُونَكَ بِمَثَلٍ إِلَّا جِئْنَٰكَ بِٱلْحَقِّ وَأَحْسَنَ تَفْسِيرًا. ﴿33﴾ |
| 34 ಯಾರನ್ನು ಮುಖಗಳ ಮೇಲೆ ನರಕಕ್ಕೆ ಒಟ್ಟುಗೂಡಿಸಲಾಗುತ್ತದೋ ಅವರೇ ಅತಿ ನಿಕೃಷ್ಟ ಸ್ಥಳದಲ್ಲಿರುವವರು ಮತ್ತು ಅತ್ಯಧಿಕ ದಾರಿತಪ್ಪಿದವರು. | ٱلَّذِينَ يُحْشَرُونَ عَلَىٰ وُجُوهِهِمْ إِلَىٰ جَهَنَّمَ أُو۟لَٰٓئِكَ شَرٌّۭ مَّكَانًۭا وَأَضَلُّ سَبِيلًۭا. ﴿34﴾ |
| 35 ನಾವು ಮೂಸಾರಿಗೆ ಗ್ರಂಥವನ್ನು ನೀಡಿದೆವು ಮತ್ತು ಅವರ ಸಹೋದರ ಹಾರೂನರನ್ನು ಅವರ ಸಹಾಯಕರನ್ನಾಗಿ ಮಾಡಿದೆವು. | وَلَقَدْ ءَاتَيْنَا مُوسَى ٱلْكِتَٰبَ وَجَعَلْنَا مَعَهُۥٓ أَخَاهُ هَٰرُونَ وَزِيرًۭا. ﴿35﴾ |
| 36 ನಂತರ ನಾವು ಹೇಳಿದೆವು: “ನಮ್ಮ ವಚನಗಳನ್ನು ನಿಷೇಧಿಸಿದ ಜನರ ಬಳಿಗೆ ಹೋಗಿರಿ.” ನಂತರ ನಾವು ಅವರನ್ನು ಸಂಪೂರ್ಣ ನಾಶ ಮಾಡಿದೆವು. | فَقُلْنَا ٱذْهَبَآ إِلَى ٱلْقَوْمِ ٱلَّذِينَ كَذَّبُوا۟ بِـَٔايَٰتِنَا فَدَمَّرْنَٰهُمْ تَدْمِيرًۭا. ﴿36﴾ |
| 37 ನೂಹರ ಜನರನ್ನು ಕೂಡ. ಅವರು ಸಂದೇಶವಾಹಕರನ್ನು ನಿಷೇಧಿಸಿದಾಗ ನಾವು ಅವರನ್ನು ಮುಳುಗಿಸಿ ನಾಶ ಮಾಡಿದೆವು ಮತ್ತು ಅವರನ್ನು ಜನರಿಗೆ ದೃಷ್ಟಾಂತವನ್ನಾಗಿ ಮಾಡಿದೆವು. ನಾವು ಅಕ್ರಮಿಗಳಿಗೆ ಯಾತನಾಮಯ ಶಿಕ್ಷೆಯನ್ನು ಸಿದ್ಧಗೊಳಿಸಿದ್ದೇವೆ. | وَقَوْمَ نُوحٍۢ لَّمَّا كَذَّبُوا۟ ٱلرُّسُلَ أَغْرَقْنَٰهُمْ وَجَعَلْنَٰهُمْ لِلنَّاسِ ءَايَةًۭ ۖ وَأَعْتَدْنَا لِلظَّٰلِمِينَ عَذَابًا أَلِيمًۭا. ﴿37﴾ |
|
38
ಆದ್ ಗೋತ್ರವನ್ನು, ಸಮೂದ್ ಗೋತ್ರವನ್ನು, ಬಾವಿಗಳ ಜನರನ್ನು[1] ಮತ್ತು ಅದರ ಮಧ್ಯೆ ಬದುಕಿದ ಅನೇಕ ತಲೆಮಾರುಗಳನ್ನು ಕೂಡ (ನಾಶ ಮಾಡಿದೆವು).
[1] ಇವರು ಯಾರೆಂಬ ಬಗ್ಗೆ ವ್ಯಾಖ್ಯಾನಕಾರರಿಗೆ ಭಿನ್ನಾಭಿಪ್ರಾಯವಿದೆ. ಕೆಲವರು ಇರುವ ಸೂರ ಬುರೂಜ್‌ನಲ್ಲಿ ವಿವರಿಸಿದ ಹೊಂಡಗಳ ಜನರು ಎಂದು ಹೇಳಿದ್ದಾರೆ.
|
وَعَادًۭا وَثَمُودَا۟ وَأَصْحَٰبَ ٱلرَّسِّ وَقُرُونًۢا بَيْنَ ذَٰلِكَ كَثِيرًۭا. ﴿38﴾ |
| 39 ನಾವು ಅವರೆಲ್ಲರಿಗೂ ಉದಾಹರಣೆಗಳನ್ನು ವಿವರಿಸಿಕೊಟ್ಟಿದ್ದೆವು. ನಂತರ ಅವರೆಲ್ಲರನ್ನೂ ನಾವು ಸರ್ವನಾಶ ಮಾಡಿದೆವು. | وَكُلًّۭا ضَرَبْنَا لَهُ ٱلْأَمْثَٰلَ ۖ وَكُلًّۭا تَبَّرْنَا تَتْبِيرًۭا. ﴿39﴾ |
|
40
ಕೆಟ್ಟ ಮಳೆಯನ್ನು ಸುರಿಸಲಾದ ಆ ಊರಿನ ಮೂಲಕ ಇವರು (ಮಕ್ಕಾದ ಬಹುದೇವಾರಾಧಕರು) ಹಾದುಹೋಗುತ್ತಿದ್ದಾರೆ.[1] ಆದರೂ ಅವರು ಅದನ್ನು ನೋಡುವುದಿಲ್ಲವೇ? ವಾಸ್ತವವೇನೆಂದರೆ, ಇವರಿಗೆ ಪುನರುತ್ಥಾನದಲ್ಲಿ ಭರವಸೆಯೇ ಇಲ್ಲ.
[1] ಅಂದರೆ ಪ್ರವಾದಿ ಲೂತರ (ಅವರ ಮೇಲೆ ಶಾಂತಿಯಿರಲಿ) ಜನರು ವಾಸವಾಗಿದ್ದ ಸದೂಮ್ ನಗರ.
|
وَلَقَدْ أَتَوْا۟ عَلَى ٱلْقَرْيَةِ ٱلَّتِىٓ أُمْطِرَتْ مَطَرَ ٱلسَّوْءِ ۚ أَفَلَمْ يَكُونُوا۟ يَرَوْنَهَا ۚ بَلْ كَانُوا۟ لَا يَرْجُونَ نُشُورًۭا. ﴿40﴾ |
| 41 ಅವರು ನಿಮ್ಮನ್ನು ಕಾಣುವಾಗ ನಿಮ್ಮನ್ನು ಒಂದು ತಮಾಷೆಯ ವಸ್ತುವನ್ನಾಗಿ ಮಾಡುತ್ತಾ ಕೇಳುತ್ತಾರೆ: “ಅಲ್ಲಾಹು ಸಂದೇಶವಾಹಕನಾಗಿ ಕಳುಹಿಸಿದ್ದು ಇವನನ್ನೋ? | وَإِذَا رَأَوْكَ إِن يَتَّخِذُونَكَ إِلَّا هُزُوًا أَهَٰذَا ٱلَّذِى بَعَثَ ٱللَّهُ رَسُولًا. ﴿41﴾ |
| 42 ನಾವು ನಮ್ಮ ದೇವರುಗಳ ವಿಷಯದಲ್ಲಿ ಮನಸ್ಸು ಗಟ್ಟಿ ಮಾಡಿ ನಿಲ್ಲದಿರುತ್ತಿದ್ದರೆ ಇವನು ನಮ್ಮನ್ನು ಅವುಗಳಿಂದ ತಪ್ಪಿಸಿಬಿಡುತ್ತಿದ್ದನು.” ಅವರು ಶಿಕ್ಷೆಯನ್ನು ನೋಡುವಾಗ ಯಾರು ಹೆಚ್ಚು ದಾರಿತಪ್ಪಿದವರೆಂದು ಸ್ಪಷ್ಟವಾಗಿ ತಿಳಿದುಕೊಳ್ಳುವರು. | إِن كَادَ لَيُضِلُّنَا عَنْ ءَالِهَتِنَا لَوْلَآ أَن صَبَرْنَا عَلَيْهَا ۚ وَسَوْفَ يَعْلَمُونَ حِينَ يَرَوْنَ ٱلْعَذَابَ مَنْ أَضَلُّ سَبِيلًا. ﴿42﴾ |
|
43
ತನ್ನ ಸ್ವೇಚ್ಛೆಯನ್ನೇ ದೇವರಾಗಿ ಸ್ವೀಕರಿಸಿದವನನ್ನು[1] ನೀವು ನೋಡಿಲ್ಲವೇ? ನೀವೇನು ಅವನ ಹೊಣೆ ವಹಿಸುತ್ತೀರಾ?
[1] ಅಂದರೆ ತನಗೆ ಸರಿಯೆಂದು ಕಾಣುವುದನ್ನು ದೇವರು ಮತ್ತು ಧರ್ಮವಾಗಿ ಸ್ವೀಕರಿಸಿದವನನ್ನು.
|
أَرَءَيْتَ مَنِ ٱتَّخَذَ إِلَٰهَهُۥ هَوَىٰهُ أَفَأَنتَ تَكُونُ عَلَيْهِ وَكِيلًا. ﴿43﴾ |
| 44 ಅವರಲ್ಲಿ ಹೆಚ್ಚಿನವರು ಕಿವಿಗೊಡುತ್ತಾರೆ ಮತ್ತು ಆಲೋಚಿಸುತ್ತಾರೆಂದು ನೀವು ಭಾವಿಸಿದ್ದೀರಾ? ಅವರು ಕೇವಲ ಜಾನುವಾರುಗಳಂತೆ. ಅಲ್ಲ, ಅವರು ಅವುಗಳಿಗಿಂತಲೂ ಹೆಚ್ಚು ದಾರಿತಪ್ಪಿದ್ದಾರೆ. | أَمْ تَحْسَبُ أَنَّ أَكْثَرَهُمْ يَسْمَعُونَ أَوْ يَعْقِلُونَ ۚ إِنْ هُمْ إِلَّا كَٱلْأَنْعَٰمِ ۖ بَلْ هُمْ أَضَلُّ سَبِيلًا. ﴿44﴾ |
| 45 ನಿಮ್ಮ ಪರಿಪಾಲಕನು (ಅಲ್ಲಾಹು) ನೆರಳನ್ನು ಹೇಗೆ ವಿಸ್ತರಿಸುತ್ತಿದ್ದಾನೆಂದು ನೀವು ನೋಡಿಲ್ಲವೇ? ಅವನು ಇಚ್ಛಿಸುತ್ತಿದ್ದರೆ ಅದನ್ನು ನಿಶ್ಚಲಗೊಳಿಸುತ್ತಿದ್ದನು. ನಂತರ ನಾವು ಸೂರ್ಯನನ್ನು ಅದಕ್ಕೆ ಮಾರ್ಗದರ್ಶಿಯಾಗಿ ಮಾಡಿದೆವು. | أَلَمْ تَرَ إِلَىٰ رَبِّكَ كَيْفَ مَدَّ ٱلظِّلَّ وَلَوْ شَآءَ لَجَعَلَهُۥ سَاكِنًۭا ثُمَّ جَعَلْنَا ٱلشَّمْسَ عَلَيْهِ دَلِيلًۭا. ﴿45﴾ |
| 46 ನಂತರ ನಾವು ಅದನ್ನು ಸ್ವಲ್ಪ ಸ್ವಲ್ಪವಾಗಿ ನಮ್ಮ ಕಡೆಗೆ ಎಳೆದೆವು. | ثُمَّ قَبَضْنَٰهُ إِلَيْنَا قَبْضًۭا يَسِيرًۭا. ﴿46﴾ |
| 47 ಅವನೇ ನಿಮಗೆ ರಾತ್ರಿಯನ್ನು ಉಡುಪನ್ನಾಗಿ ಮತ್ತು ನಿದ್ದೆಯನ್ನು ವಿಶ್ರಾಂತಿಯನ್ನಾಗಿ ಮಾಡಿಕೊಟ್ಟವನು. ಅವನು ಹಗಲನ್ನು ಎಚ್ಚರವಾಗಿರುವ ಸಮಯವಾಗಿ ಮಾಡಿದನು. | وَهُوَ ٱلَّذِى جَعَلَ لَكُمُ ٱلَّيْلَ لِبَاسًۭا وَٱلنَّوْمَ سُبَاتًۭا وَجَعَلَ ٱلنَّهَارَ نُشُورًۭا. ﴿47﴾ |
| 48 ತನ್ನ ದಯೆಗೆ (ಮಳೆಗೆ) ಮೊದಲು ಸುವಾರ್ತೆಯಾಗಿ ಗಾಳಿಗಳನ್ನು ಕಳುಹಿಸುವವನು ಅವನೇ. ನಾವು ಆಕಾಶದಿಂದ ಶುದ್ಧ ನೀರನ್ನು ಇಳಿಸುತ್ತೇವೆ. | وَهُوَ ٱلَّذِىٓ أَرْسَلَ ٱلرِّيَٰحَ بُشْرًۢا بَيْنَ يَدَىْ رَحْمَتِهِۦ ۚ وَأَنزَلْنَا مِنَ ٱلسَّمَآءِ مَآءًۭ طَهُورًۭا. ﴿48﴾ |
| 49 ನಿರ್ಜೀವ ಸ್ಥಿತಿಯಲ್ಲಿರುವ ಊರಿಗೆ ಅದರ ಮೂಲಕ ಜೀವ ನೀಡಲು. ನಾವು ಅದನ್ನು ನಮ್ಮ ಸೃಷ್ಟಿಗಳಲ್ಲಿ ಸೇರಿದ ಅಸಂಖ್ಯ ಜಾನುವಾರುಗಳು ಮತ್ತು ಮನುಷ್ಯರಿಗೆ ಕುಡಿಸುತ್ತೇವೆ. | لِّنُحْۦِىَ بِهِۦ بَلْدَةًۭ مَّيْتًۭا وَنُسْقِيَهُۥ مِمَّا خَلَقْنَآ أَنْعَٰمًۭا وَأَنَاسِىَّ كَثِيرًۭا. ﴿49﴾ |
| 50 ಅವರು ಉಪದೇಶ ಪಡೆಯಲೆಂದು ನಾವು ಅದನ್ನು (ಮಳೆನೀರನ್ನು) ಅವರ ಮಧ್ಯೆ ವಿತರಣೆ ಮಾಡುತ್ತೇವೆ. ಆದರೆ ಜನರಲ್ಲಿ ಹೆಚ್ಚಿನವರು ನಿಷೇಧಿಸಲು ಮಾತ್ರ ಮುಂದಾಗುತ್ತಾರೆ. | وَلَقَدْ صَرَّفْنَٰهُ بَيْنَهُمْ لِيَذَّكَّرُوا۟ فَأَبَىٰٓ أَكْثَرُ ٱلنَّاسِ إِلَّا كُفُورًۭا. ﴿50﴾ |
| 51 ನಾವು ಇಚ್ಛಿಸುತ್ತಿದ್ದರೆ ಎಲ್ಲ ಊರುಗಳಿಗೂ ಒಬ್ಬೊಬ್ಬ ಮುನ್ನೆಚ್ಚರಿಕೆಗಾರನನ್ನು ಕಳುಹಿಸುತ್ತಿದ್ದೆವು. | وَلَوْ شِئْنَا لَبَعَثْنَا فِى كُلِّ قَرْيَةٍۢ نَّذِيرًۭا. ﴿51﴾ |
| 52 ಆದ್ದರಿಂದ ನೀವು ಸತ್ಯನಿಷೇಧಿಗಳನ್ನು ಅನುಸರಿಸಬೇಡಿ. ಇದರ (ಕುರ್‌ಆನ್‍ನ) ಮೂಲಕ ಅವರ ವಿರುದ್ಧ ಮಹಾ ಹೋರಾಟ ಮಾಡಿರಿ. | فَلَا تُطِعِ ٱلْكَٰفِرِينَ وَجَٰهِدْهُم بِهِۦ جِهَادًۭا كَبِيرًۭا. ﴿52﴾ |
| 53 ಅವನೇ ಎರಡು ಸಮುದ್ರಗಳನ್ನು ಬೆರೆಯಲು ಬಿಟ್ಟವನು. ಒಂದರಲ್ಲಿ ತಾಜಾ ಸಿಹಿನೀರು ಮತ್ತು ಇನ್ನೊಂದರಲ್ಲಿ ಕಹಿ ಉಪ್ಪು ನೀರು. ಅವನು ಅವೆರಡರ ಮಧ್ಯೆ ಒಂದು ಪರದೆಯನ್ನು ಮತ್ತು ಬಲಿಷ್ಠ ತಡೆಯನ್ನು ನಿರ್ಮಸಿದ್ದಾನೆ. | ۞ وَهُوَ ٱلَّذِى مَرَجَ ٱلْبَحْرَيْنِ هَٰذَا عَذْبٌۭ فُرَاتٌۭ وَهَٰذَا مِلْحٌ أُجَاجٌۭ وَجَعَلَ بَيْنَهُمَا بَرْزَخًۭا وَحِجْرًۭا مَّحْجُورًۭا. ﴿53﴾ |
| 54 ಅವನೇ ಮನುಷ್ಯನನ್ನು ನೀರಿನಿಂದ ಸೃಷ್ಟಿಸಿದವನು. ನಂತರ ಅವನಿಗೆ ವಂಶಾವಳಿಯನ್ನು ಮತ್ತು ವೈವಾಹಿಕ ಸಂಬಂಧಿಗಳನ್ನು ಮಾಡಿಕೊಟ್ಟನು. ನಿಮ್ಮ ಪರಿಪಾಲಕನು (ಅಲ್ಲಾಹು) ಸರ್ವಶಕ್ತನಾಗಿದ್ದಾನೆ. | وَهُوَ ٱلَّذِى خَلَقَ مِنَ ٱلْمَآءِ بَشَرًۭا فَجَعَلَهُۥ نَسَبًۭا وَصِهْرًۭا ۗ وَكَانَ رَبُّكَ قَدِيرًۭا. ﴿54﴾ |
| 55 ಅವರು ಅಲ್ಲಾಹನನ್ನು ಬಿಟ್ಟು ಅವರಿಗೆ ಉಪಕಾರ ಅಥವಾ ತೊಂದರೆ ಮಾಡದವರನ್ನು ಆರಾಧಿಸುತ್ತಿದ್ದಾರೆ. ಸತ್ಯನಿಷೇಧಿಯು ತನ್ನ ಪರಿಪಾಲಕನ ವಿರುದ್ಧ (ಶೈತಾನನಿಗೆ) ಬೆಂಬಲಿಗನಾಗಿದ್ದಾನೆ. | وَيَعْبُدُونَ مِن دُونِ ٱللَّهِ مَا لَا يَنفَعُهُمْ وَلَا يَضُرُّهُمْ ۗ وَكَانَ ٱلْكَافِرُ عَلَىٰ رَبِّهِۦ ظَهِيرًۭا. ﴿55﴾ |
| 56 (ಪ್ರವಾದಿಯವರೇ) ನಾವು ನಿಮ್ಮನ್ನು ಸುವಾರ್ತೆ ತಿಳಿಸುವವರಾಗಿ ಮತ್ತು ಮುನ್ನೆಚ್ಚರಿಕೆ ನೀಡುವವರಾಗಿಯೇ ಕಳುಹಿಸಿದ್ದೇವೆ. | وَمَآ أَرْسَلْنَٰكَ إِلَّا مُبَشِّرًۭا وَنَذِيرًۭا. ﴿56﴾ |
| 57 ಹೇಳಿರಿ: “ನಾನು ಇದಕ್ಕಾಗಿ ನಿಮ್ಮಿಂದ ಯಾವುದೇ ಪ್ರತಿಫಲವನ್ನು ಕೇಳುವುದಿಲ್ಲ. ಆದರೆ ಯಾರು ತನ್ನ ಪರಿಪಾಲಕನ (ಅಲ್ಲಾಹನ) ಕಡೆಗೆ ಮಾರ್ಗವನ್ನು ಸ್ವೀಕರಿಸಲು ಇಚ್ಛಿಸುತ್ತಾನೋ (ಅವನು ಅದನ್ನು ಸ್ವೀಕರಿಸಬೇಕು ಎಂಬುದರ) ಹೊರತು.” | قُلْ مَآ أَسْـَٔلُكُمْ عَلَيْهِ مِنْ أَجْرٍ إِلَّا مَن شَآءَ أَن يَتَّخِذَ إِلَىٰ رَبِّهِۦ سَبِيلًۭا. ﴿57﴾ |
| 58 ಎಂದಿಗೂ ಸಾಯದೆ ನಿರಂತರ ಬದುಕಿರುವವನಲ್ಲಿ (ಅಲ್ಲಾಹನಲ್ಲಿ) ಭರವಸೆಯಿಡಿ. ಅವನ ಸ್ತುತಿಯೊಂದಿಗೆ ಅವನ ಪರಿಶುದ್ಧಿಯನ್ನು ಕೊಂಡಾಡಿರಿ. ಅವನ ದಾಸರು ಮಾಡುವ ಪಾಪಗಳನ್ನು ಸೂಕ್ಷ್ಮವಾಗಿ ತಿಳಿಯಲು ಅವನೇ ಸಾಕು. | وَتَوَكَّلْ عَلَى ٱلْحَىِّ ٱلَّذِى لَا يَمُوتُ وَسَبِّحْ بِحَمْدِهِۦ ۚ وَكَفَىٰ بِهِۦ بِذُنُوبِ عِبَادِهِۦ خَبِيرًا. ﴿58﴾ |
| 59 ಅವನು ಭೂಮ್ಯಾಕಾಶಗಳನ್ನು ಮತ್ತು ಅವುಗಳ ನಡುವೆಯಿರುವ ಎಲ್ಲಾ ವಸ್ತುಗಳನ್ನು ಆರು ದಿನಗಳಲ್ಲಿ ಸೃಷ್ಟಿಸಿದವನು. ನಂತರ ಅವನು ಸಿಂಹಾಸನದಲ್ಲಿ ಆರೂಢನಾದನು. ಅವನು ಪರಮ ದಯಾಳು. ನೀವು ಅವನ ಬಗ್ಗೆ ಸೂಕ್ಷ್ಮವಾಗಿ ತಿಳಿದವನೊಡನೆ (ಪ್ರವಾದಿಯೊಡನೆ) ಕೇಳಿರಿ. | ٱلَّذِى خَلَقَ ٱلسَّمَٰوَٰتِ وَٱلْأَرْضَ وَمَا بَيْنَهُمَا فِى سِتَّةِ أَيَّامٍۢ ثُمَّ ٱسْتَوَىٰ عَلَى ٱلْعَرْشِ ۚ ٱلرَّحْمَٰنُ فَسْـَٔلْ بِهِۦ خَبِيرًۭا. ﴿59﴾ |
|
60
“ಪರಮ ದಯಾಳುವಿಗೆ (ಅಲ್ಲಾಹನಿಗೆ) ಸಾಷ್ಟಾಂಗ ಮಾಡಿರಿ” ಎಂದು ಅವರೊಡನೆ ಹೇಳಲಾದರೆ ಅವರು ಕೇಳುತ್ತಾರೆ: “ಪರಮ ದಯಾಳು ಎಂದರೇನು?[1] ನೀನು ಆಜ್ಞಾಪಿಸುವವನಿಗೆ ನಾವು ಸಾಷ್ಟಾಂಗ ಮಾಡಬೇಕೇ?” ಇದು ಅವರಿಗೆ ದ್ವೇಷವನ್ನು ಇನ್ನಷ್ಟು ಹೆಚ್ಚಿಸಿಬಿಟ್ಟಿತು.
[1] ಮಕ್ಕಾದ ಸತ್ಯನಿಷೇಧಿಗಳು ಅಲ್ಲಾಹನನ್ನು ರಹ್ಮಾನ್ (ಪರಮ ದಯಾಳು) ಎಂದು ಒಪ್ಪಿಕೊಳ್ಳುತ್ತಿರಲಿಲ್ಲ.
|
وَإِذَا قِيلَ لَهُمُ ٱسْجُدُوا۟ لِلرَّحْمَٰنِ قَالُوا۟ وَمَا ٱلرَّحْمَٰنُ أَنَسْجُدُ لِمَا تَأْمُرُنَا وَزَادَهُمْ نُفُورًۭا ۩. ﴿60﴾ |
| 61 ಆಕಾಶದಲ್ಲಿ ನಕ್ಷತ್ರಪುಂಜಗಳನ್ನು ಸ್ಥಾಪಿಸಿದವನು (ಅಲ್ಲಾಹು) ಸಮೃದ್ಧಪೂರ್ಣನು. ಅವನು ಅದರಲ್ಲಿ ಒಂದು ದೀಪವನ್ನು (ಸೂರ್ಯನನ್ನು) ಮತ್ತು ಬೆಳಗುವ ಚಂದ್ರನನ್ನು ಉಂಟುಮಾಡಿದನು. | تَبَارَكَ ٱلَّذِى جَعَلَ فِى ٱلسَّمَآءِ بُرُوجًۭا وَجَعَلَ فِيهَا سِرَٰجًۭا وَقَمَرًۭا مُّنِيرًۭا. ﴿61﴾ |
| 62 ಅವನೇ ರಾತ್ರಿ-ಹಗಲುಗಳನ್ನು ಒಂದರ ಹಿಂದೆ ಇನ್ನೊಂದು ಬರುವಂತೆ ಮಾಡಿದವನು. ಉಪದೇಶ ಸ್ವೀಕರಿಸಲು ಬಯಸುವವರಿಗೆ ಅಥವಾ ಕೃತಜ್ಞರಾಗಲು ಬಯಸುವವರಿಗೆ (ಒಂದು ದೃಷ್ಟಾಂತವೆಂಬಂತೆ). | وَهُوَ ٱلَّذِى جَعَلَ ٱلَّيْلَ وَٱلنَّهَارَ خِلْفَةًۭ لِّمَنْ أَرَادَ أَن يَذَّكَّرَ أَوْ أَرَادَ شُكُورًۭا. ﴿62﴾ |
|
63
ಪರಮ ದಯಾಳುವಿನ (ಅಲ್ಲಾಹನ) ದಾಸರು ಭೂಮಿಯಲ್ಲಿ ವಿನಯದಿಂದ ನಡೆಯುವವರಾಗಿದ್ದಾರೆ. ಅವಿವೇಕಿಗಳು ಅವರೊಡನೆ ಮಾತನಾಡಿದರೆ ಅವರು ಶಾಂತಿ-ಸಮಾಧಾನದ ಮಾತುಗಳನ್ನು ಹೇಳುತ್ತಾರೆ.[1]
[1] ಅಂದರೆ ಅವರು ಅವಿವೇಕಿಗಳೊಡನೆ ತರ್ಕ ಅಥವಾ ವಾಗ್ವಾದಕ್ಕೆ ಇಳಿಯುವುದಿಲ್ಲ. ಬದಲಿಗೆ, ಸಭ್ಯವಾದ ರೀತಿಯಲ್ಲಿ ಅವರನ್ನು ನಿರ್ಲಕ್ಷಿಸುತ್ತಾ ಸಾಗಿ ಬಿಡುತ್ತಾರೆ.
|
وَعِبَادُ ٱلرَّحْمَٰنِ ٱلَّذِينَ يَمْشُونَ عَلَى ٱلْأَرْضِ هَوْنًۭا وَإِذَا خَاطَبَهُمُ ٱلْجَٰهِلُونَ قَالُوا۟ سَلَٰمًۭا. ﴿63﴾ |
| 64 ಅವರು (ಅಲ್ಲಾಹನ ದಾಸರು) ಯಾರೆಂದರೆ, ತಮ್ಮ ಪರಿಪಾಲಕನಿಗೆ (ಅಲ್ಲಾಹನಿಗೆ) ಸಾಷ್ಟಾಂಗ ಮಾಡುತ್ತಾ ಮತ್ತು ನಿಂತು ನಮಾಝ್ ಮಾಡುತ್ತಾ ರಾತ್ರಿಯನ್ನು ಕಳೆಯುವವರು. | وَٱلَّذِينَ يَبِيتُونَ لِرَبِّهِمْ سُجَّدًۭا وَقِيَٰمًۭا. ﴿64﴾ |
| 65 ಅವರು ಹೇಳುತ್ತಾರೆ: “ನಮ್ಮ ಪರಿಪಾಲಕನೇ! ನಮ್ಮಿಂದ ನರಕ ಶಿಕ್ಷೆಯನ್ನು ದೂರೀಕರಿಸು. ನಿಜಕ್ಕೂ ಅದರ ಶಿಕ್ಷೆಯು ಸದಾ ಅಂಟಿಕೊಂಡಿರುತ್ತದೆ. | وَٱلَّذِينَ يَقُولُونَ رَبَّنَا ٱصْرِفْ عَنَّا عَذَابَ جَهَنَّمَ ۖ إِنَّ عَذَابَهَا كَانَ غَرَامًا. ﴿65﴾ |
| 66 ನಿಶ್ಚಯವಾಗಿಯೂ ಅದು ಬಹಳ ನಿಕೃಷ್ಟ ವಾಸಸ್ಥಳ ಮತ್ತು ವಾಸ್ತವ್ಯವಾಗಿದೆ.” | إِنَّهَا سَآءَتْ مُسْتَقَرًّۭا وَمُقَامًۭا. ﴿66﴾ |
| 67 ಅವರು ಖರ್ಚು ಮಾಡುವಾಗ ಅತಿಯಾಗಿ ಖರ್ಚು ಮಾಡುವುದಿಲ್ಲ ಮತ್ತು ಜಿಪುಣತನ ತೋರುವುದೂ ಇಲ್ಲ. ಬದಲಿಗೆ, ಅವೆರಡರ ನಡುವಿನ ಮಧ್ಯಮ ಮಾರ್ಗವನ್ನು ಸ್ವೀಕರಿಸುತ್ತಾರೆ. | وَٱلَّذِينَ إِذَآ أَنفَقُوا۟ لَمْ يُسْرِفُوا۟ وَلَمْ يَقْتُرُوا۟ وَكَانَ بَيْنَ ذَٰلِكَ قَوَامًۭا. ﴿67﴾ |
| 68 ಅವರು ಅಲ್ಲಾಹನ ಜೊತೆಗೆ ಬೇರೆ ದೇವರುಗಳನ್ನು ಕರೆದು ಪ್ರಾರ್ಥಿಸುವುದಿಲ್ಲ, ಕಾನೂನುಬದ್ಧ ರೀತಿಯಲ್ಲೇ ಹೊರತು ಅಲ್ಲಾಹು (ಕೊಲ್ಲುವುದನ್ನು) ನಿಷೇಧಿಸಿದ ಜೀವವನ್ನು ಕೊಲ್ಲುವುದಿಲ್ಲ ಮತ್ತು ವ್ಯಭಿಚಾರ ಮಾಡುವುದಿಲ್ಲ. ಯಾರು ಇವುಗಳನ್ನು ಮಾಡುತ್ತಾನೋ ಅವನು ಶಿಕ್ಷೆಯನ್ನು ಪಡೆಯುವನು. | وَٱلَّذِينَ لَا يَدْعُونَ مَعَ ٱللَّهِ إِلَٰهًا ءَاخَرَ وَلَا يَقْتُلُونَ ٱلنَّفْسَ ٱلَّتِى حَرَّمَ ٱللَّهُ إِلَّا بِٱلْحَقِّ وَلَا يَزْنُونَ ۚ وَمَن يَفْعَلْ ذَٰلِكَ يَلْقَ أَثَامًۭا. ﴿68﴾ |
| 69 ಪುನರುತ್ಥಾನ ದಿನದಂದು ಅವನಿಗೆ ಇಮ್ಮಡಿ ಶಿಕ್ಷೆ ನೀಡಲಾಗುವುದು. ಅವನು ಅವಮಾನವನ್ನು ಸಹಿಸುತ್ತಾ ಸದಾಕಾಲ ಅದರಲ್ಲಿ ವಾಸಿಸುವನು. | يُضَٰعَفْ لَهُ ٱلْعَذَابُ يَوْمَ ٱلْقِيَٰمَةِ وَيَخْلُدْ فِيهِۦ مُهَانًا. ﴿69﴾ |
| 70 ಆದರೆ ಪಶ್ಚಾತ್ತಾಪಪಟ್ಟವರು, ಸತ್ಯವಿಶ್ವಾಸಿಗಳಾದವರು ಮತ್ತು ಸತ್ಕರ್ಮವೆಸಗಿದವರು ಇದಕ್ಕೆ ಹೊರತಾಗಿದ್ದಾರೆ. ಅಲ್ಲಾಹು ಅವರ ದುಷ್ಕೃತ್ಯಗಳನ್ನು ಸತ್ಕರ್ಮಗಳಾಗಿ ಬದಲಾಯಿಸುವನು. ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ. | إِلَّا مَن تَابَ وَءَامَنَ وَعَمِلَ عَمَلًۭا صَٰلِحًۭا فَأُو۟لَٰٓئِكَ يُبَدِّلُ ٱللَّهُ سَيِّـَٔاتِهِمْ حَسَنَٰتٍۢ ۗ وَكَانَ ٱللَّهُ غَفُورًۭا رَّحِيمًۭا. ﴿70﴾ |
| 71 ಯಾರು ಪಶ್ಚಾತ್ತಾಪಪಟ್ಟು ಸತ್ಕರ್ಮವೆಸಗುತ್ತಾನೋ ಅವನು ಅಲ್ಲಾಹನ ಕಡೆಗೆ ಪ್ರಾಮಾಣಿಕವಾಗಿ ಮರಳಿದ್ದಾನೆ. | وَمَن تَابَ وَعَمِلَ صَٰلِحًۭا فَإِنَّهُۥ يَتُوبُ إِلَى ٱللَّهِ مَتَابًۭا. ﴿71﴾ |
| 72 ಅವರು ಸುಳ್ಳು ಸಾಕ್ಷ್ಯ ಹೇಳದವರು ಮತ್ತು ಅನಗತ್ಯ ಸಂಗತಿಗಳ ಬಳಿಯಿಂದ ನಡೆಯಬೇಕಾಗಿ ಬಂದರೆ ಸಭ್ಯತೆಯಿಂದ ನಡೆಯುವವರಾಗಿದ್ದಾರೆ. | وَٱلَّذِينَ لَا يَشْهَدُونَ ٱلزُّورَ وَإِذَا مَرُّوا۟ بِٱللَّغْوِ مَرُّوا۟ كِرَامًۭا. ﴿72﴾ |
| 73 ಅವರಿಗೆ ಅವರ ಪರಿಪಾಲಕನ (ಅಲ್ಲಾಹನ) ವಚನಗಳ ಮೂಲಕ ಉಪದೇಶ ನೀಡಲಾದರೆ ಅವರು ಕಿವುಡರು ಮತ್ತು ಕುರುಡರಾಗಿ ಬಿಡುವುದಿಲ್ಲ. | وَٱلَّذِينَ إِذَا ذُكِّرُوا۟ بِـَٔايَٰتِ رَبِّهِمْ لَمْ يَخِرُّوا۟ عَلَيْهَا صُمًّۭا وَعُمْيَانًۭا. ﴿73﴾ |
| 74 ಅವರು ಪ್ರಾರ್ಥಿಸುತ್ತಾರೆ: “ನಮ್ಮ ಪರಿಪಾಲಕನೇ! ನಮ್ಮ ಪತ್ನಿಯರಲ್ಲಿ ಮತ್ತು ನಮ್ಮ ಮಕ್ಕಳಲ್ಲಿ ನಮಗೆ ಕಣ್ತಂಪನ್ನು ನೀಡು. ದೇವಭಯವುಳ್ಳವರಿಗೆ ನಮ್ಮನ್ನು ಮುಂದಾಳುಗಳನ್ನಾಗಿ ಮಾಡು.” | وَٱلَّذِينَ يَقُولُونَ رَبَّنَا هَبْ لَنَا مِنْ أَزْوَٰجِنَا وَذُرِّيَّٰتِنَا قُرَّةَ أَعْيُنٍۢ وَٱجْعَلْنَا لِلْمُتَّقِينَ إِمَامًا. ﴿74﴾ |
| 75 ಅವರು ತಾಳ್ಮೆ ತೋರಿದ್ದಕ್ಕೆ ಪ್ರತಿಫಲವಾಗಿ ಅವರಿಗೆ ಸ್ವರ್ಗದ ಉನ್ನತ ಮಹಲುಗಳನ್ನು ನೀಡಲಾಗುವುದು. ಅಲ್ಲಿ ಅವರು ಅಭಿವಂದನೆಗಳನ್ನು ಮತ್ತು ಶಾಂತಿಯ ಹಾರೈಕೆಗಳನ್ನು ಪಡೆಯುವರು. | أُو۟لَٰٓئِكَ يُجْزَوْنَ ٱلْغُرْفَةَ بِمَا صَبَرُوا۟ وَيُلَقَّوْنَ فِيهَا تَحِيَّةًۭ وَسَلَٰمًا. ﴿75﴾ |
| 76 ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಆ ವಾಸಸ್ಥಳ ಮತ್ತು ಸ್ಥಾನಮಾನವು ಬಹಳ ಉತ್ತಮವಾಗಿದೆ. | خَٰلِدِينَ فِيهَا ۚ حَسُنَتْ مُسْتَقَرًّۭا وَمُقَامًۭا. ﴿76﴾ |
| 77 ಹೇಳಿರಿ: “ನಿಮ್ಮ ಪ್ರಾರ್ಥನೆಗಳು ಇಲ್ಲದಿರುತ್ತಿದ್ದರೆ ನನ್ನ ಪರಿಪಾಲಕನು (ಅಲ್ಲಾಹು) ನಿಮ್ಮನ್ನು ಪರಿಗಣಿಸುತ್ತಲೇ ಇರಲಿಲ್ಲ.” ಆದರೆ ನೀವು ನಿಷೇಧಿಸಿದ್ದೀರಿ. ಆದ್ದರಿಂದ ಅದಕ್ಕಿರುವ ಶಿಕ್ಷೆಯು ಸದ್ಯವೇ ನಿಮ್ಮನ್ನು ಅಂಟಿಕೊಳ್ಳಲಿದೆ. | قُلْ مَا يَعْبَؤُا۟ بِكُمْ رَبِّى لَوْلَا دُعَآؤُكُمْ ۖ فَقَدْ كَذَّبْتُمْ فَسَوْفَ يَكُونُ لِزَامًۢا. ﴿77﴾ |