الصافات
ಕನ್ನಡ Translation with Arabic Quran Text
| ಕನ್ನಡ | العربية |
|---|---|
| 1 ಸಾಲುಗಟ್ಟಿ ನಿಂತ ದೇವದೂತರುಗಳ ಮೇಲಾಣೆ! | وَٱلصَّٰٓفَّٰتِ صَفًّۭا. ﴿1﴾ |
| 2 ತೀಕ್ಷ್ಣವಾಗಿ ಗದರಿಸುವವರ ಮೇಲಾಣೆ! | فَٱلزَّٰجِرَٰتِ زَجْرًۭا. ﴿2﴾ |
| 3 ಉಪದೇಶವನ್ನು ಪಠಿಸುವವರ ಮೇಲಾಣೆ! | فَٱلتَّٰلِيَٰتِ ذِكْرًا. ﴿3﴾ |
| 4 ಖಂಡಿತವಾಗಿಯೂ ನಿಮ್ಮ ದೇವನು ಏಕೈಕನಾಗಿದ್ದಾನೆ. | إِنَّ إِلَٰهَكُمْ لَوَٰحِدٌۭ. ﴿4﴾ |
| 5 ಅವನು ಭೂಮ್ಯಾಕಾಶಗಳ ಮತ್ತು ಅವುಗಳ ನಡುವೆಯಿರುವ ಎಲ್ಲಾ ವಸ್ತುಗಳ ಪರಿಪಾಲಕ ಹಾಗೂ ಉದಯ ಸ್ಥಾನಗಳ ಪರಿಪಾಲಕನಾಗಿದ್ದಾನೆ. | رَّبُّ ٱلسَّمَٰوَٰتِ وَٱلْأَرْضِ وَمَا بَيْنَهُمَا وَرَبُّ ٱلْمَشَٰرِقِ. ﴿5﴾ |
| 6 ನಿಶ್ಚಯವಾಗಿಯೂ ನಾವು ಸಮೀಪದ ಆಕಾಶವನ್ನು ನಕ್ಷತ್ರಗಳ ಶೃಂಗಾರದಿಂದ ಅಲಂಕರಿಸಿದ್ದೇವೆ. | إِنَّا زَيَّنَّا ٱلسَّمَآءَ ٱلدُّنْيَا بِزِينَةٍ ٱلْكَوَاكِبِ. ﴿6﴾ |
| 7 ವಿದ್ರೋಹಿಗಳಾದ ಎಲ್ಲಾ ಶೈತಾನರಿಂದ ನಾವು ಅದನ್ನು ಭದ್ರಪಡಿಸಿದ್ದೇವೆ. | وَحِفْظًۭا مِّن كُلِّ شَيْطَٰنٍۢ مَّارِدٍۢ. ﴿7﴾ |
| 8 ಉಪರಿಲೋಕದ ದೇವದೂತರುಗಳ ಮಾತುಗಳಿಗೆ ಕಿವಿಗೊಡಲು ಅವರಿಗೆ ಸಾಧ್ಯವಾಗುವುದಿಲ್ಲ. ಎಲ್ಲಾ ದಿಕ್ಕುಗಳಿಂದಲೂ ಅವರಿಗೆ ಎಸೆಯಲಾಗುತ್ತದೆ. | لَّا يَسَّمَّعُونَ إِلَى ٱلْمَلَإِ ٱلْأَعْلَىٰ وَيُقْذَفُونَ مِن كُلِّ جَانِبٍۢ. ﴿8﴾ |
| 9 ಅವರನ್ನು ಓಡಿಸುವುದಕ್ಕಾಗಿ. ಅವರಿಗೆ ಶಾಶ್ವತ ಶಿಕ್ಷೆಯೂ ಇದೆ. | دُحُورًۭا ۖ وَلَهُمْ عَذَابٌۭ وَاصِبٌ. ﴿9﴾ |
| 10 ಆದರೆ, ಅವರಲ್ಲಿ ಯಾರಾದರೂ (ದೇವದೂತರ) ಮಾತನ್ನು ಕದ್ದು ಕೇಳಿ ಓಡಿದರೆ, (ತಕ್ಷಣ) ಜ್ವಲಿಸುವ ಒಂದು ಜ್ವಾಲೆಯು ಅವನನ್ನು ಹಿಂಬಾಲಿಸುತ್ತದೆ. | إِلَّا مَنْ خَطِفَ ٱلْخَطْفَةَ فَأَتْبَعَهُۥ شِهَابٌۭ ثَاقِبٌۭ. ﴿10﴾ |
| 11 (ಪ್ರವಾದಿಯವರೇ) ಅವರೊಡನೆ ಕೇಳಿರಿ: “ಅವರನ್ನು ಸೃಷ್ಟಿಸುವುದು ಕಷ್ಟವೋ? ಅಥವಾ ನಾವು ಸೃಷ್ಟಿಸಿದ ಇತರ ಸೃಷ್ಟಿಗಳನ್ನೋ?” ನಿಶ್ಚಯವಾಗಿಯೂ ನಾವು ಅವರನ್ನು ಅಂಟಿಕೊಳ್ಳುವ ಜೇಡಿಮಣ್ಣಿನಿಂದ ಸೃಷ್ಟಿಸಿದ್ದೇವೆ. | فَٱسْتَفْتِهِمْ أَهُمْ أَشَدُّ خَلْقًا أَم مَّنْ خَلَقْنَآ ۚ إِنَّا خَلَقْنَٰهُم مِّن طِينٍۢ لَّازِبٍۭ. ﴿11﴾ |
|
12
ಅಲ್ಲ, ನಿಮಗೆ ಅಚ್ಚರಿಯಾಗುತ್ತದೆ.[1] ಆದರೆ ಅವರು ತಮಾಷೆ ಮಾಡುತ್ತಾರೆ!
[1] ಅವರು ಪರಲೋಕವನ್ನು ನಿಷೇಧಿಸುವುದನ್ನು ಕಾಣುವಾಗ ನಿಮಗೆ ಅಚ್ಚರಿಯಾಗುತ್ತದೆ.
|
بَلْ عَجِبْتَ وَيَسْخَرُونَ. ﴿12﴾ |
| 13 ಅವರಿಗೆ ಉಪದೇಶ ನೀಡಲಾದರೆ ಅವರು ಅದನ್ನು ಸ್ವೀಕರಿಸುವುದಿಲ್ಲ. | وَإِذَا ذُكِّرُوا۟ لَا يَذْكُرُونَ. ﴿13﴾ |
| 14 ಅವರು ಯಾವುದಾದರೂ ದೃಷ್ಟಾಂತವನ್ನು ಕಂಡರೆ ಲೇವಡಿ ಮಾಡುತ್ತಾರೆ. | وَإِذَا رَأَوْا۟ ءَايَةًۭ يَسْتَسْخِرُونَ. ﴿14﴾ |
| 15 ಅವರು ಹೇಳುತ್ತಾರೆ: “ಇದು ಸ್ಪಷ್ಟ ಮಾಟಗಾರಿಕೆಯಲ್ಲದೆ ಇನ್ನೇನಲ್ಲ. | وَقَالُوٓا۟ إِنْ هَٰذَآ إِلَّا سِحْرٌۭ مُّبِينٌ. ﴿15﴾ |
| 16 ನಾವು ಸತ್ತು ಮಣ್ಣು ಮತ್ತು ಮೂಳೆಗಳಾಗಿ ಬಿಟ್ಟ ಬಳಿಕ ನಮ್ಮನ್ನು ಪುನಃ ಜೀವ ನೀಡಿ ಎಬ್ಬಿಸಲಾಗುವುದೇ? | أَءِذَا مِتْنَا وَكُنَّا تُرَابًۭا وَعِظَٰمًا أَءِنَّا لَمَبْعُوثُونَ. ﴿16﴾ |
| 17 ಮತ್ತು ನಮ್ಮ ಪೂರ್ವಜರನ್ನು ಕೂಡ?” | أَوَءَابَآؤُنَا ٱلْأَوَّلُونَ. ﴿17﴾ |
| 18 ಹೇಳಿರಿ: “ಹೌದು! ನೀವು ಅವಮಾನಿತರಾಗುವಿರಿ.” | قُلْ نَعَمْ وَأَنتُمْ دَٰخِرُونَ. ﴿18﴾ |
| 19 ಅದು ಒಂದು ತೀಕ್ಷ್ಣ ಗದರಿಕೆ ಮಾತ್ರವಾಗಿರುವುದು. ಆಗ ಅಗೋ! ಅವರು ನೋಡ ತೊಡಗುವರು. | فَإِنَّمَا هِىَ زَجْرَةٌۭ وَٰحِدَةٌۭ فَإِذَا هُمْ يَنظُرُونَ. ﴿19﴾ |
| 20 ಅವರು ಹೇಳುವರು: “ಅಯ್ಯೋ! ನಮ್ಮ ದುರ್ಗತಿಯೇ! ಇದು ಪ್ರತಿಫಲದ ದಿನ!” | وَقَالُوا۟ يَٰوَيْلَنَا هَٰذَا يَوْمُ ٱلدِّينِ. ﴿20﴾ |
| 21 ಇದು ನೀವು ನಿಷೇಧಿಸುತ್ತಿದ್ದ ಅಂತಿಮ ತೀರ್ಪು ನೀಡುವ ದಿನವಾಗಿದೆ. | هَٰذَا يَوْمُ ٱلْفَصْلِ ٱلَّذِى كُنتُم بِهِۦ تُكَذِّبُونَ. ﴿21﴾ |
| 22 (ಅಲ್ಲಾಹು ಆದೇಶಿಸುವನು): “ಅಕ್ರಮವೆಸಗಿದವರನ್ನು, ಅವರ ಸಹಚರರನ್ನು ಮತ್ತು ಅವರು ಆರಾಧಿಸುತ್ತಿದ್ದವುಗಳನ್ನು ಒಟ್ಟುಗೂಡಿಸಿರಿ. | ۞ ٱحْشُرُوا۟ ٱلَّذِينَ ظَلَمُوا۟ وَأَزْوَٰجَهُمْ وَمَا كَانُوا۟ يَعْبُدُونَ. ﴿22﴾ |
| 23 ಅಲ್ಲಾಹನನ್ನು ಬಿಟ್ಟು (ಆರಾಧಿಸುತ್ತಿದ್ದವುಗಳನ್ನು). ಅವರೆಲ್ಲರಿಗೂ ನರಕದ ದಾರಿಯನ್ನು ತೋರಿಸಿ. | مِن دُونِ ٱللَّهِ فَٱهْدُوهُمْ إِلَىٰ صِرَٰطِ ٱلْجَحِيمِ. ﴿23﴾ |
| 24 ಅವರನ್ನು ನಿಲ್ಲಿಸಿ! ಅವರೊಡನೆ ಪ್ರಶ್ನಿಸಬೇಕಾಗಿದೆ.” | وَقِفُوهُمْ ۖ إِنَّهُم مَّسْـُٔولُونَ. ﴿24﴾ |
| 25 (ಅವರೊಡನೆ ಕೇಳಲಾಗುವುದು): “ನಿಮಗೇನಾಗಿದೆ? ನೀವೇಕೆ ಪರಸ್ಪರ ಸಹಾಯ ಮಾಡುವುದಿಲ್ಲ?” | مَا لَكُمْ لَا تَنَاصَرُونَ. ﴿25﴾ |
| 26 ಅಲ್ಲ, ವಾಸ್ತವವಾಗಿ ಇಂದು ಅವರು (ಸಂಪೂರ್ಣ) ಶರಣಾಗಿದ್ದಾರೆ. | بَلْ هُمُ ٱلْيَوْمَ مُسْتَسْلِمُونَ. ﴿26﴾ |
| 27 ಅವರಲ್ಲಿ ಒಬ್ಬರು ಇನ್ನೊಬ್ಬರ ಕಡೆಗೆ ತಿರುಗಿ ಪ್ರಶ್ನಿಸುವರು. | وَأَقْبَلَ بَعْضُهُمْ عَلَىٰ بَعْضٍۢ يَتَسَآءَلُونَ. ﴿27﴾ |
| 28 ಅವರು ಹೇಳುವರು: “ನಿಶ್ಚಯವಾಗಿಯೂ ನೀವು ನಮ್ಮ ಬಲಭಾಗದಿಂದ ನಮ್ಮ ಬಳಿಗೆ ಬರುತ್ತಿದ್ದಿರಿ.” | قَالُوٓا۟ إِنَّكُمْ كُنتُمْ تَأْتُونَنَا عَنِ ٱلْيَمِينِ. ﴿28﴾ |
| 29 ಅವರು ಉತ್ತರಿಸುವರು: “ಅಲ್ಲ, ನೀವು ಸತ್ಯವಿಶ್ವಾಸಿಗಳಾಗಿರಲಿಲ್ಲ. | قَالُوا۟ بَل لَّمْ تَكُونُوا۟ مُؤْمِنِينَ. ﴿29﴾ |
| 30 ನಮಗೆ ನಿಮ್ಮ ಮೇಲೆ ಯಾವುದೇ ಅಧಿಕಾರವಿರಲಿಲ್ಲ. ಬದಲಿಗೆ, ನೀವು ಅತಿರೇಕಿಗಳಾದ ಜನರಾಗಿದ್ದಿರಿ. | وَمَا كَانَ لَنَا عَلَيْكُم مِّن سُلْطَٰنٍۭ ۖ بَلْ كُنتُمْ قَوْمًۭا طَٰغِينَ. ﴿30﴾ |
| 31 ಆದ್ದರಿಂದ ನಮ್ಮ ಪರಿಪಾಲಕನ (ಅಲ್ಲಾಹನ) ವಚನವು ನಮ್ಮ ಮೇಲೆ ಖಾತ್ರಿಯಾಯಿತು. ನಿಶ್ಚಯವಾಗಿಯೂ ನಾವು ಶಿಕ್ಷೆಯ ರುಚಿಯನ್ನು ನೋಡುವೆವು. | فَحَقَّ عَلَيْنَا قَوْلُ رَبِّنَآ ۖ إِنَّا لَذَآئِقُونَ. ﴿31﴾ |
| 32 ನಾವು ನಿಮ್ಮನ್ನು ದಾರಿತಪ್ಪಿಸಿದೆವು. (ಏಕೆಂದರೆ) ನಾವು ಸ್ವತಃ ದಾರಿತಪ್ಪಿದ್ದೆವು.” | فَأَغْوَيْنَٰكُمْ إِنَّا كُنَّا غَٰوِينَ. ﴿32﴾ |
| 33 ಆದ್ದರಿಂದ ಆ ದಿನದಂದು ಅವರೆಲ್ಲರೂ ಶಿಕ್ಷೆಯಲ್ಲಿ ಪಾಲುದಾರರಾಗುವರು. | فَإِنَّهُمْ يَوْمَئِذٍۢ فِى ٱلْعَذَابِ مُشْتَرِكُونَ. ﴿33﴾ |
| 34 ನಿಶ್ಚಯವಾಗಿಯೂ ನಾವು ಅಪರಾಧಿಗಳೊಡನೆ ಹೀಗೆಯೇ ವರ್ತಿಸುವೆವು. | إِنَّا كَذَٰلِكَ نَفْعَلُ بِٱلْمُجْرِمِينَ. ﴿34﴾ |
| 35 ಅವರೊಡನೆ, “ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ” ಎಂದು ಹೇಳಲಾದರೆ ಅವರು ಅಹಂಕಾರ ತೋರುತ್ತಿದ್ದರು. | إِنَّهُمْ كَانُوٓا۟ إِذَا قِيلَ لَهُمْ لَآ إِلَٰهَ إِلَّا ٱللَّهُ يَسْتَكْبِرُونَ. ﴿35﴾ |
| 36 ಅವರು ಹೇಳುತ್ತಿದ್ದರು: “ಒಬ್ಬ ಮಾನಸಿಕ ಅಸ್ವಸ್ಥ ಕವಿಯ ಮಾತು ಕೇಳಿ ನಾವು ನಮ್ಮ ದೇವರುಗಳನ್ನು ಬಿಟ್ಟುಬಿಡಬೇಕೇ?” | وَيَقُولُونَ أَئِنَّا لَتَارِكُوٓا۟ ءَالِهَتِنَا لِشَاعِرٍۢ مَّجْنُونٍۭ. ﴿36﴾ |
| 37 ಅಲ್ಲ, ವಾಸ್ತವವಾಗಿ ಅವರು (ಪ್ರವಾದಿ) ಸತ್ಯದೊಂದಿಗೆ ಬಂದಿದ್ದರು ಮತ್ತು ಅವರು (ಮೊದಲಿನ) ಪ್ರವಾದಿಗಳನ್ನು ದೃಢೀಕರಿಸಿದ್ದರು. | بَلْ جَآءَ بِٱلْحَقِّ وَصَدَّقَ ٱلْمُرْسَلِينَ. ﴿37﴾ |
| 38 ನಿಶ್ಚಯವಾಗಿಯೂ ನೀವು ಯಾತನಾಮಯ ಶಿಕ್ಷೆಯ ರುಚಿಯನ್ನು ನೋಡುವಿರಿ. | إِنَّكُمْ لَذَآئِقُوا۟ ٱلْعَذَابِ ٱلْأَلِيمِ. ﴿38﴾ |
| 39 ನೀವು ಮಾಡಿದ ಕರ್ಮಗಳ ಪ್ರತಿಫಲವನ್ನೇ ಹೊರತು ಬೇರೇನೂ ನಿಮಗೆ ನೀಡಲಾಗುವುದಿಲ್ಲ. | وَمَا تُجْزَوْنَ إِلَّا مَا كُنتُمْ تَعْمَلُونَ. ﴿39﴾ |
| 40 ಆದರೆ, ಅಲ್ಲಾಹನ ನಿಷ್ಕಳಂಕ ದಾಸರು ಇದರಿಂದ ಹೊರತಾಗಿದ್ದಾರೆ. | إِلَّا عِبَادَ ٱللَّهِ ٱلْمُخْلَصِينَ. ﴿40﴾ |
| 41 ಅವರಿಗೆ ನಿಶ್ಚಿತ ಉಪಜೀವನವಿದೆ. | أُو۟لَٰٓئِكَ لَهُمْ رِزْقٌۭ مَّعْلُومٌۭ. ﴿41﴾ |
| 42 ಹಣ್ಣು-ಹಂಪಲುಗಳಿವೆ! ಅವರನ್ನು ಅಲ್ಲಿ ಗೌರವಿಸಲಾಗುವುದು. | فَوَٰكِهُ ۖ وَهُم مُّكْرَمُونَ. ﴿42﴾ |
| 43 ಸುಖಸಮೃದ್ಧವಾದ ಸ್ವರ್ಗೋದ್ಯಾನಗಳಲ್ಲಿ. | فِى جَنَّٰتِ ٱلنَّعِيمِ. ﴿43﴾ |
| 44 ಅವರು ಪರಸ್ಪರ ಎದುರು-ಬದುರಾಗಿ ಮಂಚಗಳಲ್ಲಿ ಕುಳಿತಿರುವರು. | عَلَىٰ سُرُرٍۢ مُّتَقَٰبِلِينَ. ﴿44﴾ |
| 45 ಹರಿಯುವ ಚಿಲುಮೆಯ ನೀರು ತುಂಬಿದ ಲೋಟಗಳನ್ನು ಅವರ ಸುತ್ತಲೂ ತರಲಾಗುವುದು. | يُطَافُ عَلَيْهِم بِكَأْسٍۢ مِّن مَّعِينٍۭ. ﴿45﴾ |
| 46 ಅದು ಬೆಳ್ಳಗಿದ್ದು ಕುಡಿಯುವವರಿಗೆ ಆಹ್ಲಾದಕರವಾಗಿರುವುದು. | بَيْضَآءَ لَذَّةٍۢ لِّلشَّٰرِبِينَ. ﴿46﴾ |
| 47 ಅದರಲ್ಲಿ ಯಾವುದೇ ಅಡ್ಡ ಪರಿಣಾಮವಿಲ್ಲ. ಅದರಿಂದ ನಶೆಯೂ ಉಂಟಾಗುವುದಿಲ್ಲ. | لَا فِيهَا غَوْلٌۭ وَلَا هُمْ عَنْهَا يُنزَفُونَ. ﴿47﴾ |
|
48
ದೃಷ್ಟಿಯನ್ನು ನಿಯಂತ್ರಿಸುವ[1] ಮತ್ತು ಅರಳಿದ ನೇತ್ರಗಳುಳ್ಳ ಅಪ್ಸರೆಯರು ಅವರ ಬಳಿಯಿರುವರು.
[1] ಅಂದರೆ ಅವರು ಅತ್ಯಂತ ಪರಿಶುದ್ಧ ಮತ್ತು ಸಭ್ಯರಾಗಿದ್ದು ತಮ್ಮ ಗಂಡಂದಿರ ಹೊರತು ಬೇರೆ ಯಾರ ಕಡೆಗೂ ದೃಷ್ಟಿ ಹಾಯಿಸುವುದಿಲ್ಲ.
|
وَعِندَهُمْ قَٰصِرَٰتُ ٱلطَّرْفِ عِينٌۭ. ﴿48﴾ |
| 49 ಅವರು ಜೋಪಾನವಾಗಿಡಲಾದ ಮೊಟ್ಟೆಗಳಂತೆ ಇರುವರು. | كَأَنَّهُنَّ بَيْضٌۭ مَّكْنُونٌۭ. ﴿49﴾ |
| 50 ಅವರು ಪರಸ್ಪರ ಒಬ್ಬರು ಇನ್ನೊಬ್ಬರ ಕಡೆಗೆ ತಿರುಗಿ ಪ್ರಶ್ನಿಸುವರು. | فَأَقْبَلَ بَعْضُهُمْ عَلَىٰ بَعْضٍۢ يَتَسَآءَلُونَ. ﴿50﴾ |
| 51 ಅವರಲ್ಲಿ ಒಬ್ಬನು ಹೇಳುವನು: “ನಿಜಕ್ಕೂ ನನಗೊಬ್ಬ ಗೆಳೆಯನಿದ್ದನು. | قَالَ قَآئِلٌۭ مِّنْهُمْ إِنِّى كَانَ لِى قَرِينٌۭ. ﴿51﴾ |
| 52 ಅವನು ಕೇಳುತ್ತಿದ್ದನು: ನೀನು (ಪರಲೋಕದಲ್ಲಿ) ವಿಶ್ವಾಸವಿಡುತ್ತೀಯಾ? | يَقُولُ أَءِنَّكَ لَمِنَ ٱلْمُصَدِّقِينَ. ﴿52﴾ |
| 53 ನಾವು ಸತ್ತು ಮಣ್ಣು ಮತ್ತು ಮೂಳೆಗಳಾಗಿ ಬಿಟ್ಟ ಬಳಿಕವೂ ನಮಗೆ ನಮ್ಮ ಕರ್ಮಫಲಗಳನ್ನು ನೀಡಲಾಗುತ್ತದೆಯೇ?” | أَءِذَا مِتْنَا وَكُنَّا تُرَابًۭا وَعِظَٰمًا أَءِنَّا لَمَدِينُونَ. ﴿53﴾ |
| 54 ಅವನು (ಅವನು ತನ್ನ ಬಳಿಯಿರುವವರೊಡನೆ) ಕೇಳುವನು: “ನೀವು ಅವನನ್ನು ನೋಡಲು ಬಯಸುತ್ತೀರಾ?” | قَالَ هَلْ أَنتُم مُّطَّلِعُونَ. ﴿54﴾ |
| 55 ಆಗ ಅವನು ಇಣುಕಿ ನೋಡಿದಾಗ ಆತ ನರಕದ ಮಧ್ಯಭಾಗದಲ್ಲಿರುವುದನ್ನು ಕಾಣುವನು. | فَٱطَّلَعَ فَرَءَاهُ فِى سَوَآءِ ٱلْجَحِيمِ. ﴿55﴾ |
| 56 ಅವನು ಹೇಳುವನು: “ಅಲ್ಲಾಹನಾಣೆ! ನೀನು ನನ್ನನ್ನು ಇನ್ನೇನು ನಾಶ ಮಾಡಿಯೇ ಬಿಡುತ್ತಿದ್ದೆ. | قَالَ تَٱللَّهِ إِن كِدتَّ لَتُرْدِينِ. ﴿56﴾ |
| 57 ನನ್ನ ಪರಿಪಾಲಕನ (ಅಲ್ಲಾಹನ) ಅನುಗ್ರಹವಿಲ್ಲದಿರುತ್ತಿದ್ದರೆ, ನಾನು ಕೂಡ (ನರಕಕ್ಕೆ) ಹಾಜರುಪಡಿಸಲಾಗುವವರಲ್ಲಿ ಸೇರಿರುತ್ತಿದ್ದೆ.” | وَلَوْلَا نِعْمَةُ رَبِّى لَكُنتُ مِنَ ٱلْمُحْضَرِينَ. ﴿57﴾ |
| 58 (ಸ್ವರ್ಗವಾಸಿಗಳು ಹೇಳುವರು): “ಇನ್ನು ನಾವು ಸಾಯುವುದಿಲ್ಲ. | أَفَمَا نَحْنُ بِمَيِّتِينَ. ﴿58﴾ |
| 59 ನಮ್ಮ ಮೊದಲ ಸಾವಿನ ಹೊರತು. ಇನ್ನು ನಮಗೆ ಶಿಕ್ಷೆಯೂ ಇಲ್ಲ.” | إِلَّا مَوْتَتَنَا ٱلْأُولَىٰ وَمَا نَحْنُ بِمُعَذَّبِينَ. ﴿59﴾ |
| 60 ನಿಶ್ಚಯವಾಗಿಯೂ ಇದೇ ಮಹಾ ವಿಜಯ. | إِنَّ هَٰذَا لَهُوَ ٱلْفَوْزُ ٱلْعَظِيمُ. ﴿60﴾ |
| 61 ಕರ್ಮವೆಸಗುವವರು ಇಂತಹ (ವಿಜಯಕ್ಕಾಗಿಯೇ) ಕರ್ಮವೆಸಗಲಿ. | لِمِثْلِ هَٰذَا فَلْيَعْمَلِ ٱلْعَٰمِلُونَ. ﴿61﴾ |
|
62
ಈ ಆತಿಥ್ಯವು ಉತ್ತಮವೋ? ಅಥವಾ ಝಕ್ಕೂಮ್ ಮರವೋ?[1]
[1] ಝಕ್ಕೂಮ್ ಎಂದರೆ ನರಕದಲ್ಲಿ ಬೆಳೆಯುವ ಮರ. ಇದರ ಹಣ್ಣು ಅತ್ಯಂತ ಕೆಟ್ಟ ವಾಸನೆಯನ್ನು ಹೊಂದಿದ್ದು ಅತ್ಯಂತ ಕಹಿಯೂ ಆಗಿದೆ.
|
أَذَٰلِكَ خَيْرٌۭ نُّزُلًا أَمْ شَجَرَةُ ٱلزَّقُّومِ. ﴿62﴾ |
| 63 ನಿಶ್ಚಯವಾಗಿಯೂ ನಾವು ಅದನ್ನು ಅಕ್ರಮಿಗಳಿಗೆ ಪರೀಕ್ಷೆಯಾಗಿ ಮಾಡಿದ್ದೇವೆ. | إِنَّا جَعَلْنَٰهَا فِتْنَةًۭ لِّلظَّٰلِمِينَ. ﴿63﴾ |
| 64 ಅದು ನರಕಾಗ್ನಿಯ ತಳಭಾಗದಿಂದ ಹೊರಹೊಮ್ಮುವ ಮರವಾಗಿದೆ. | إِنَّهَا شَجَرَةٌۭ تَخْرُجُ فِىٓ أَصْلِ ٱلْجَحِيمِ. ﴿64﴾ |
| 65 ಅದರ ಮೊಗ್ಗುಗಳು ಶೈತಾನರ ತಲೆ ಬುರುಡೆಗಳಂತಿವೆ. | طَلْعُهَا كَأَنَّهُۥ رُءُوسُ ٱلشَّيَٰطِينِ. ﴿65﴾ |
| 66 ನಿಶ್ಚಯವಾಗಿಯೂ ಅವರು ಅದರಿಂದ ತಿನ್ನುವರು ಮತ್ತು ಹೊಟ್ಟೆ ತುಂಬಿಸುವರು. | فَإِنَّهُمْ لَءَاكِلُونَ مِنْهَا فَمَالِـُٔونَ مِنْهَا ٱلْبُطُونَ. ﴿66﴾ |
| 67 ನಂತರ ಅವರಿಗೆ ಮಿಶ್ರಣಗೊಂಡ ಕುದಿಯುವ ಪಾನೀಯವನ್ನು ನೀಡಲಾಗುವುದು. | ثُمَّ إِنَّ لَهُمْ عَلَيْهَا لَشَوْبًۭا مِّنْ حَمِيمٍۢ. ﴿67﴾ |
| 68 ನಂತರ ಅವರೆಲ್ಲರೂ ಮರಳುವುದು ನರಕದ ಕಡೆಗಾಗಿದೆ. | ثُمَّ إِنَّ مَرْجِعَهُمْ لَإِلَى ٱلْجَحِيمِ. ﴿68﴾ |
| 69 ನಿಶ್ಚಯವಾಗಿಯೂ ಅವರು ತಮ್ಮ ಪೂರ್ವಜರನ್ನು ದಾರಿತಪ್ಪಿದ್ದಾಗಿ ಕಂಡಿದ್ದರು. | إِنَّهُمْ أَلْفَوْا۟ ءَابَآءَهُمْ ضَآلِّينَ. ﴿69﴾ |
| 70 ಇವರು ಅವರ ಹೆಜ್ಜೆಗಳನ್ನು (ಹಿಂಬಾಲಿಸಿ) ಧಾವಿಸುತ್ತಿದ್ದಾರೆ. | فَهُمْ عَلَىٰٓ ءَاثَٰرِهِمْ يُهْرَعُونَ. ﴿70﴾ |
| 71 ಇವರಿಗಿಂತ ಮೊದಲಿನ ಜನರಲ್ಲಿ ಹೆಚ್ಚಿನವರು ದಾರಿತಪ್ಪಿದ್ದರು. | وَلَقَدْ ضَلَّ قَبْلَهُمْ أَكْثَرُ ٱلْأَوَّلِينَ. ﴿71﴾ |
| 72 ನಾವು ಅವರಿಗೆ ಮುನ್ನೆಚ್ಚರಿಕೆಗಾರರನ್ನು (ಪ್ರವಾದಿಗಳನ್ನು) ಕಳುಹಿಸಿದ್ದೆವು. | وَلَقَدْ أَرْسَلْنَا فِيهِم مُّنذِرِينَ. ﴿72﴾ |
| 73 ಮುನ್ನೆಚ್ಚರಿಕೆ ನೀಡಲಾದವರ ಅಂತ್ಯವು ಹೇಗಿತ್ತೆಂದು ನೋಡಿರಿ. | فَٱنظُرْ كَيْفَ كَانَ عَٰقِبَةُ ٱلْمُنذَرِينَ. ﴿73﴾ |
| 74 ಅಲ್ಲಾಹನ ನಿಷ್ಕಳಂಕ ದಾಸರು ಇದಕ್ಕೆ ಹೊರತಾಗಿದ್ದಾರೆ. | إِلَّا عِبَادَ ٱللَّهِ ٱلْمُخْلَصِينَ. ﴿74﴾ |
| 75 ನೂಹ್ ನಮ್ಮನ್ನು ಕರೆದು ಪ್ರಾರ್ಥಿಸಿದ್ದರು. ನಾವು ಪ್ರಾರ್ಥನೆಗೆ ಎಷ್ಟು ಚೆನ್ನಾಗಿ ಉತ್ತರಿಸುತ್ತೇವೆ. | وَلَقَدْ نَادَىٰنَا نُوحٌۭ فَلَنِعْمَ ٱلْمُجِيبُونَ. ﴿75﴾ |
| 76 ನಾವು ಅವರನ್ನು ಮತ್ತು ಅವರ ಜನರನ್ನು ಮಹಾ ದುರಂತದಿಂದ ಪಾರು ಮಾಡಿದೆವು. | وَنَجَّيْنَٰهُ وَأَهْلَهُۥ مِنَ ٱلْكَرْبِ ٱلْعَظِيمِ. ﴿76﴾ |
| 77 ನಾವು ಅವರ ಸಂತಾನವನ್ನು (ಭೂಮಿಯಲ್ಲಿ) ಅವಶೇಷಿಸಿದವರನ್ನಾಗಿ ಮಾಡಿದೆವು. | وَجَعَلْنَا ذُرِّيَّتَهُۥ هُمُ ٱلْبَاقِينَ. ﴿77﴾ |
| 78 ನಾವು ನಂತರದ ತಲೆಮಾರುಗಳಲ್ಲಿ ಅವರ (ಉತ್ತಮ ಹೆಸರನ್ನು) ಉಳಿಸಿದೆವು. | وَتَرَكْنَا عَلَيْهِ فِى ٱلْءَاخِرِينَ. ﴿78﴾ |
| 79 ಸರ್ವಲೋಕದವರಲ್ಲಿ ನೂಹರ ಮೇಲೆ ಶಾಂತಿಯಿರಲಿ! | سَلَٰمٌ عَلَىٰ نُوحٍۢ فِى ٱلْعَٰلَمِينَ. ﴿79﴾ |
| 80 ನಿಶ್ಚಯವಾಗಿಯೂ ನಾವು ನೀತಿವಂತರಿಗೆ ಹೀಗೆಯೇ ಪ್ರತಿಫಲವನ್ನು ನೀಡುವೆವು. | إِنَّا كَذَٰلِكَ نَجْزِى ٱلْمُحْسِنِينَ. ﴿80﴾ |
| 81 ನಿಶ್ಚಯವಾಗಿಯೂ ಅವರು ನಮ್ಮ ಸತ್ಯವಿಶ್ವಾಸಿ ದಾಸರಲ್ಲಿ ಸೇರಿದ್ದಾರೆ. | إِنَّهُۥ مِنْ عِبَادِنَا ٱلْمُؤْمِنِينَ. ﴿81﴾ |
| 82 ನಂತರ ನಾವು ಉಳಿದವರನ್ನು ಮುಳುಗಿಸಿದೆವು. | ثُمَّ أَغْرَقْنَا ٱلْءَاخَرِينَ. ﴿82﴾ |
| 83 ನಿಶ್ಚಯವಾಗಿಯೂ ಇಬ್ರಾಹೀಮ್ ಕೂಡ ಅವರ ಗುಂಪಿಗೆ ಸೇರಿದವರು. | ۞ وَإِنَّ مِن شِيعَتِهِۦ لَإِبْرَٰهِيمَ. ﴿83﴾ |
| 84 ಅವರು ಅವರ ಪರಿಪಾಲಕನ (ಅಲ್ಲಾಹನ) ಬಳಿಗೆ ಸುರಕ್ಷಿತ ಹೃದಯದೊಂದಿಗೆ ಬಂದ ಸಂದರ್ಭ! | إِذْ جَآءَ رَبَّهُۥ بِقَلْبٍۢ سَلِيمٍ. ﴿84﴾ |
| 85 ಅವರು ತಮ್ಮ ತಂದೆ ಮತ್ತು ಊರ ಜನರೊಡನೆ ಕೇಳಿದರು: “ನೀವು ಏನು ಆರಾಧಿಸುತ್ತಿದ್ದೀರಿ? | إِذْ قَالَ لِأَبِيهِ وَقَوْمِهِۦ مَاذَا تَعْبُدُونَ. ﴿85﴾ |
| 86 ನೀವು ಅಲ್ಲಾಹನನ್ನು ಬಿಟ್ಟು ಮಿಥ್ಯ ದೇವರುಗಳನ್ನು ಬಯಸುತ್ತೀರಾ? | أَئِفْكًا ءَالِهَةًۭ دُونَ ٱللَّهِ تُرِيدُونَ. ﴿86﴾ |
| 87 ಸರ್ವಲೋಕಗಳ ಪರಿಪಾಲಕನ (ಅಲ್ಲಾಹನ) ಬಗ್ಗೆ ನಿಮ್ಮ ಕಲ್ಪನೆಯೇನು?” | فَمَا ظَنُّكُم بِرَبِّ ٱلْعَٰلَمِينَ. ﴿87﴾ |
| 88 ನಂತರ ಅವರು ನಕ್ಷತ್ರಗಳ ಕಡೆಗೆ ಒಂದು ನೋಟವನ್ನು ಬೀರಿದರು. | فَنَظَرَ نَظْرَةًۭ فِى ٱلنُّجُومِ. ﴿88﴾ |
| 89 ಅವರು ಹೇಳಿದರು: “ನಾನು ಅಸ್ವಸ್ಥನಾಗಿದ್ದೇನೆ.” | فَقَالَ إِنِّى سَقِيمٌۭ. ﴿89﴾ |
| 90 ಆಗ ಜನರು ಇಬ್ರಾಹೀಮರನ್ನು ಬಿಟ್ಟು ತಿರುಗಿ ನಡೆದರು. | فَتَوَلَّوْا۟ عَنْهُ مُدْبِرِينَ. ﴿90﴾ |
| 91 ಇಬ್ರಾಹೀಮ್ ಅವರ ದೇವರುಗಳ ಕಡೆಗೆ ತಿರುಗಿ ಕೇಳಿದರು: “ನೀವೇಕೆ ತಿನ್ನುವುದಿಲ್ಲ? | فَرَاغَ إِلَىٰٓ ءَالِهَتِهِمْ فَقَالَ أَلَا تَأْكُلُونَ. ﴿91﴾ |
| 92 ನಿಮಗೇನಾಗಿದೆ? ನೀವೇಕೆ ಮಾತನಾಡುವುದಿಲ್ಲ?” | مَا لَكُمْ لَا تَنطِقُونَ. ﴿92﴾ |
| 93 ನಂತರ ಅವರು ಅವುಗಳ ಕಡೆಗೆ ತಿರುಗಿ ಬಲಗೈಯಿಂದ ಬಲವಾದ ಏಟು ಕೊಟ್ಟರು. | فَرَاغَ عَلَيْهِمْ ضَرْبًۢا بِٱلْيَمِينِ. ﴿93﴾ |
| 94 ಜನರು ಅವರ ಬಳಿಗೆ ಓಡೋಡಿ ಬಂದರು. | فَأَقْبَلُوٓا۟ إِلَيْهِ يَزِفُّونَ. ﴿94﴾ |
| 95 ಇಬ್ರಾಹೀಮ್ ಕೇಳಿದರು: “ನೀವೇ ಸ್ವತಃ ಕಡೆದು ನಿರ್ಮಿಸಿದ್ದನ್ನು ನೀವು ಆರಾಧಿಸುತ್ತಿದ್ದೀರಾ? | قَالَ أَتَعْبُدُونَ مَا تَنْحِتُونَ. ﴿95﴾ |
| 96 ವಾಸ್ತವವಾಗಿ, ಅಲ್ಲಾಹನೇ ನಿಮ್ಮನ್ನು ಮತ್ತು ನೀವು ನಿರ್ಮಿಸುವುದನ್ನು ಸೃಷ್ಟಿಸಿದವನು.” | وَٱللَّهُ خَلَقَكُمْ وَمَا تَعْمَلُونَ. ﴿96﴾ |
| 97 ಜನರು ಹೇಳಿದರು: “ನೀವು ಅವನಿಗೆ ಒಂದು ದೊಡ್ಡ ಅಗ್ನಿಕುಂಡವನ್ನು ನಿರ್ಮಿಸಿ, ಅವನನ್ನು ಜ್ವಲಿಸುವ ಅಗ್ನಿಗೆ ಎಸೆಯಿರಿ.” | قَالُوا۟ ٱبْنُوا۟ لَهُۥ بُنْيَٰنًۭا فَأَلْقُوهُ فِى ٱلْجَحِيمِ. ﴿97﴾ |
| 98 ಅವರು ಇಬ್ರಾಹೀಮರನ್ನು ಕುತಂತ್ರದಿಂದ ನಾಶ ಮಾಡಲು ಬಯಸಿದ್ದರು. ಆದರೆ ನಾವು ಅವರನ್ನು ಅತ್ಯಂತ ಅಧಮರನ್ನಾಗಿ ಮಾಡಿದೆವು. | فَأَرَادُوا۟ بِهِۦ كَيْدًۭا فَجَعَلْنَٰهُمُ ٱلْأَسْفَلِينَ. ﴿98﴾ |
| 99 ಇಬ್ರಾಹೀಮ್ ಹೇಳಿದರು: “ನಿಶ್ಚಯವಾಗಿಯೂ ನಾನು ನನ್ನ ಪರಿಪಾಲಕನ (ಅಲ್ಲಾಹನ) ಕಡೆಗೆ ತೆರಳುತ್ತೇನೆ. ಅವನು ನನಗೆ ದಾರಿ ತೋರಿಸುವನು. | وَقَالَ إِنِّى ذَاهِبٌ إِلَىٰ رَبِّى سَيَهْدِينِ. ﴿99﴾ |
| 100 ನನ್ನ ಪರಿಪಾಲಕನೇ! ನನಗೆ ನೀತಿವಂತರಲ್ಲಿ ಸೇರಿದ ಮಗುವನ್ನು ಕರುಣಿಸು.” | رَبِّ هَبْ لِى مِنَ ٱلصَّٰلِحِينَ. ﴿100﴾ |
| 101 ಆಗ ನಾವು ಅವರಿಗೆ ಸಹಿಷ್ಣುತೆಯುಳ್ಳ ಮಗು ಜನಿಸುವ ಬಗ್ಗೆ ಸುವಾರ್ತೆಯನ್ನು ತಿಳಿಸಿದೆವು. | فَبَشَّرْنَٰهُ بِغُلَٰمٍ حَلِيمٍۢ. ﴿101﴾ |
| 102 ನಂತರ ಅವನು (ಮಗು) ತಂದೆಯೊಂದಿಗೆ ಓಡಾಡುವ ಪ್ರಾಯಕ್ಕೆ ತಲುಪಿದಾಗ ಅವರು (ಇಬ್ರಾಹೀಂ) ಹೇಳಿದರು: “ಮಗೂ! ನಾನು ನಿನ್ನ ಕತ್ತು ಕೊಯ್ಯುತ್ತಿರುವಂತೆ ಕನಸು ಕಾಣುತ್ತಿದ್ದೇನೆ. ನಿನ್ನ ಅಭಿಪ್ರಾಯವೇನೆಂದು ಹೇಳು?” ಮಗ ಹೇಳಿದನು: “ಅಪ್ಪಾ! ನಿಮಗೆ ಆಜ್ಞಾಪಿಸಲಾಗಿರುವುದನ್ನು ನಿರ್ವಹಿಸಿರಿ. ಅಲ್ಲಾಹು ಬಯಸಿದರೆ ನಿಶ್ಚಯವಾಗಿಯೂ ನೀವು ನನ್ನನ್ನು ತಾಳ್ಮೆ ವಹಿಸುವವರಲ್ಲಿ ಕಾಣುವಿರಿ.” | فَلَمَّا بَلَغَ مَعَهُ ٱلسَّعْىَ قَالَ يَٰبُنَىَّ إِنِّىٓ أَرَىٰ فِى ٱلْمَنَامِ أَنِّىٓ أَذْبَحُكَ فَٱنظُرْ مَاذَا تَرَىٰ ۚ قَالَ يَٰٓأَبَتِ ٱفْعَلْ مَا تُؤْمَرُ ۖ سَتَجِدُنِىٓ إِن شَآءَ ٱللَّهُ مِنَ ٱلصَّٰبِرِينَ. ﴿102﴾ |
| 103 ನಂತರ ಅವರಿಬ್ಬರೂ (ಅಲ್ಲಾಹನ ಆಜ್ಞೆಗೆ) ಶರಣಾಗಿ, ಅವರು ಮಗನನ್ನು ಹಣೆಯ ಮೇಲೆ ಮಲಗಿಸಿದಾಗ. | فَلَمَّآ أَسْلَمَا وَتَلَّهُۥ لِلْجَبِينِ. ﴿103﴾ |
| 104 ನಾವು ಅವರನ್ನು ಕರೆದು ಹೇಳಿದೆವು: “ಓ ಇಬ್ರಾಹೀಮ್! | وَنَٰدَيْنَٰهُ أَن يَٰٓإِبْرَٰهِيمُ. ﴿104﴾ |
| 105 ನಿಶ್ಚಯವಾಗಿಯೂ ನೀವು ಕನಸನ್ನು ನಿಜಪಡಿಸಿದ್ದೀರಿ.” ನಿಶ್ಚಯವಾಗಿಯೂ ನಾವು ನೀತಿವಂತರಿಗೆ ಈ ರೀತಿ ಪ್ರತಿಫಲವನ್ನು ನೀಡುತ್ತೇವೆ. | قَدْ صَدَّقْتَ ٱلرُّءْيَآ ۚ إِنَّا كَذَٰلِكَ نَجْزِى ٱلْمُحْسِنِينَ. ﴿105﴾ |
| 106 ನಿಶ್ಚಯವಾಗಿಯೂ ಇದು ಸ್ಪಷ್ಟ ಪರೀಕ್ಷೆಯಾಗಿತ್ತು. | إِنَّ هَٰذَا لَهُوَ ٱلْبَلَٰٓؤُا۟ ٱلْمُبِينُ. ﴿106﴾ |
| 107 ನಾವು ಅವರ (ಮಗನ) ಬದಲಿಗೆ ಬಲಿ ನೀಡಲು ಒಂದು ಮಹಾ ಬಲಿಮೃಗವನ್ನು ನೀಡಿದೆವು. | وَفَدَيْنَٰهُ بِذِبْحٍ عَظِيمٍۢ. ﴿107﴾ |
| 108 ನಾವು ಅವರ (ಇಬ್ರಾಹೀಮರ) ಕೀರ್ತಿಯನ್ನು ಅವರ ನಂತರದವರಲ್ಲಿ ಉಳಿಸಿದೆವು. | وَتَرَكْنَا عَلَيْهِ فِى ٱلْءَاخِرِينَ. ﴿108﴾ |
| 109 ಇಬ್ರಾಹೀಮರ ಮೇಲೆ ಶಾಂತಿಯಿರಲಿ! | سَلَٰمٌ عَلَىٰٓ إِبْرَٰهِيمَ. ﴿109﴾ |
| 110 ನಾವು ನೀತಿವಂತರಿಗೆ ಈ ರೀತಿ ಪ್ರತಿಫಲವನ್ನು ನೀಡುತ್ತೇವೆ. | كَذَٰلِكَ نَجْزِى ٱلْمُحْسِنِينَ. ﴿110﴾ |
| 111 ನಿಶ್ಚಯವಾಗಿಯೂ ಅವರು ನಮ್ಮ ಸತ್ಯವಿಶ್ವಾಸಿ ದಾಸರಲ್ಲಿ ಸೇರಿದವರಾಗಿದ್ದರು. | إِنَّهُۥ مِنْ عِبَادِنَا ٱلْمُؤْمِنِينَ. ﴿111﴾ |
| 112 ನಾವು ಅವರಿಗೆ ಇಸ್‍ಹಾಕರ ಜನನದ ಬಗ್ಗೆ ಸುವಾರ್ತೆಯನ್ನು ತಿಳಿಸಿದೆವು. ಅವರು ಸಜ್ಜನರಲ್ಲಿ ಸೇರಿದ ಒಬ್ಬ ಪ್ರವಾದಿಯಾಗಿದ್ದರು. | وَبَشَّرْنَٰهُ بِإِسْحَٰقَ نَبِيًّۭا مِّنَ ٱلصَّٰلِحِينَ. ﴿112﴾ |
| 113 ನಾವು ಅವರಿಗೆ ಮತ್ತು ಇಸ್‍ಹಾಕರಿಗೆ ಸಮೃದ್ಧಿಯನ್ನು ದಯಪಾಲಿಸಿದೆವು. ಅವರಿಬ್ಬರ ಸಂತಾನದಲ್ಲಿ ಒಳಿತು ಮಾಡುವವರಿದ್ದಾರೆ. ಸ್ವತಃ ಅವರೊಡನೆಯೇ ಸ್ಪಷ್ಟವಾಗಿ ಅಕ್ರಮವೆಸಗುವವರೂ ಇದ್ದಾರೆ. | وَبَٰرَكْنَا عَلَيْهِ وَعَلَىٰٓ إِسْحَٰقَ ۚ وَمِن ذُرِّيَّتِهِمَا مُحْسِنٌۭ وَظَالِمٌۭ لِّنَفْسِهِۦ مُبِينٌۭ. ﴿113﴾ |
| 114 ನಿಶ್ಚಯವಾಗಿಯೂ ನಾವು ಮೂಸಾ ಮತ್ತು ಹಾರೂನರಿಗೆ ಉಪಕಾರ ಮಾಡಿದ್ದೆವು. | وَلَقَدْ مَنَنَّا عَلَىٰ مُوسَىٰ وَهَٰرُونَ. ﴿114﴾ |
| 115 ನಾವು ಅವರನ್ನು ಮತ್ತು ಅವರ ಜನರನ್ನು ಮಹಾ ದುರಂತದಿಂದ ರಕ್ಷಿಸಿದೆವು. | وَنَجَّيْنَٰهُمَا وَقَوْمَهُمَا مِنَ ٱلْكَرْبِ ٱلْعَظِيمِ. ﴿115﴾ |
| 116 ನಾವು ಅವರಿಗೆ ಸಹಾಯ ಮಾಡಿದೆವು. ಆಗ ಅವರೇ ವಿಜಯಿಗಳಾದರು. | وَنَصَرْنَٰهُمْ فَكَانُوا۟ هُمُ ٱلْغَٰلِبِينَ. ﴿116﴾ |
| 117 ನಾವು ಅವರಿಗೆ (ವಿಷಯಗಳನ್ನು) ಸ್ಪಷ್ಟಪಡಿಸುವ ಗ್ರಂಥವನ್ನು ನೀಡಿದೆವು. | وَءَاتَيْنَٰهُمَا ٱلْكِتَٰبَ ٱلْمُسْتَبِينَ. ﴿117﴾ |
| 118 ನಾವು ಅವರನ್ನು ನೇರ ಮಾರ್ಗದಲ್ಲಿ ದೃಢವಾಗಿ ನಿಲ್ಲಿಸಿದೆವು. | وَهَدَيْنَٰهُمَا ٱلصِّرَٰطَ ٱلْمُسْتَقِيمَ. ﴿118﴾ |
| 119 ನಾವು ಅವರ ಕೀರ್ತಿಯನ್ನು ನಂತರದ ತಲೆಮಾರುಗಳಲ್ಲಿ ಉಳಿಸಿದೆವು. | وَتَرَكْنَا عَلَيْهِمَا فِى ٱلْءَاخِرِينَ. ﴿119﴾ |
| 120 ಮೂಸಾ ಮತ್ತು ಹಾರೂನರ ಮೇಲೆ ಶಾಂತಿಯಿರಲಿ! | سَلَٰمٌ عَلَىٰ مُوسَىٰ وَهَٰرُونَ. ﴿120﴾ |
| 121 ನಿಶ್ಚಯವಾಗಿಯೂ ನಾವು ನೀತಿವಂತರಿಗೆ ಈ ರೀತಿ ಪ್ರತಿಫಲವನ್ನು ನೀಡುತ್ತೇವೆ. | إِنَّا كَذَٰلِكَ نَجْزِى ٱلْمُحْسِنِينَ. ﴿121﴾ |
| 122 ನಿಶ್ಚಯವಾಗಿಯೂ ಅವರಿಬ್ಬರು ನಮ್ಮ ಸತ್ಯವಿಶ್ವಾಸಿ ದಾಸರಲ್ಲಿ ಸೇರಿದವರಾಗಿದ್ದರು. | إِنَّهُمَا مِنْ عِبَادِنَا ٱلْمُؤْمِنِينَ. ﴿122﴾ |
| 123 ನಿಶ್ಚಯವಾಗಿಯೂ ಇಲ್ಯಾಸ್ ಪ್ರವಾದಿಗಳಲ್ಲಿ ಒಬ್ಬರಾಗಿದ್ದರು. | وَإِنَّ إِلْيَاسَ لَمِنَ ٱلْمُرْسَلِينَ. ﴿123﴾ |
| 124 ಅವರು ತಮ್ಮ ಜನರೊಡನೆ ಹೇಳಿದ ಸಂದರ್ಭ: “ನೀವು ಅಲ್ಲಾಹನನ್ನು ಭಯಪಡುವುದಿಲ್ಲವೇ?” | إِذْ قَالَ لِقَوْمِهِۦٓ أَلَا تَتَّقُونَ. ﴿124﴾ |
| 125 ನೀವು ಬಾಲ್ (ವಿಗ್ರಹವನ್ನು) ಕರೆದು ಪ್ರಾರ್ಥಿಸುತ್ತೀರಾ? ಮತ್ತು ಅತ್ಯುತ್ತಮ ಸೃಷ್ಟಿಕರ್ತನನ್ನು ತೊರೆಯುತ್ತೀರಾ? | أَتَدْعُونَ بَعْلًۭا وَتَذَرُونَ أَحْسَنَ ٱلْخَٰلِقِينَ. ﴿125﴾ |
| 126 ಅಂದರೆ ನಿಮ್ಮ ಮತ್ತು ನಿಮ್ಮ ಪೂರ್ವಜರ ಪರಿಪಾಲಕನಾದ ಅಲ್ಲಾಹನನ್ನು? | ٱللَّهَ رَبَّكُمْ وَرَبَّ ءَابَآئِكُمُ ٱلْأَوَّلِينَ. ﴿126﴾ |
| 127 ಆದರೆ ಅವರು ಅವರನ್ನು ನಿಷೇಧಿಸಿದರು. ನಿಶ್ಚಯವಾಗಿಯೂ ಅವರನ್ನು (ಶಿಕ್ಷೆಗೆ) ಹಾಜರುಪಡಿಸಲಾಗುವುದು. | فَكَذَّبُوهُ فَإِنَّهُمْ لَمُحْضَرُونَ. ﴿127﴾ |
| 128 ಅಲ್ಲಾಹನ ನಿಷ್ಕಳಂಕ ದಾಸರು ಇದಕ್ಕೆ ಹೊರತಾಗಿದ್ದಾರೆ. | إِلَّا عِبَادَ ٱللَّهِ ٱلْمُخْلَصِينَ. ﴿128﴾ |
| 129 ನಂತರದ ತಲೆಮಾರುಗಳಲ್ಲಿ ನಾವು ಅವರ ಕೀರ್ತಿಯನ್ನು ಉಳಿಸಿದೆವು. | وَتَرَكْنَا عَلَيْهِ فِى ٱلْءَاخِرِينَ. ﴿129﴾ |
| 130 ಇಲ್ಯಾಸರ ಮೇಲೆ ಶಾಂತಿಯಿರಲಿ! | سَلَٰمٌ عَلَىٰٓ إِلْ يَاسِينَ. ﴿130﴾ |
| 131 ನಿಶ್ಚಯವಾಗಿಯೂ ನಾವು ನೀತಿವಂತರಿಗೆ ಈ ರೀತಿ ಪ್ರತಿಫಲವನ್ನು ನೀಡುತ್ತೇವೆ. | إِنَّا كَذَٰلِكَ نَجْزِى ٱلْمُحْسِنِينَ. ﴿131﴾ |
| 132 ನಿಶ್ಚಯವಾಗಿಯೂ ಅವರು ನಮ್ಮ ಸತ್ಯವಿಶ್ವಾಸಿ ದಾಸರಲ್ಲಿ ಸೇರಿದವರಾಗಿದ್ದರು. | إِنَّهُۥ مِنْ عِبَادِنَا ٱلْمُؤْمِنِينَ. ﴿132﴾ |
| 133 ನಿಶ್ಚಯವಾಗಿಯೂ ಲೂತ್ ಸಂದೇಶವಾಹಕರಲ್ಲಿ ಸೇರಿದವರಾಗಿದ್ದರು. | وَإِنَّ لُوطًۭا لَّمِنَ ٱلْمُرْسَلِينَ. ﴿133﴾ |
| 134 ನಾವು ಅವರನ್ನು ಮತ್ತು ಅವರ ಕುಟುಂಬವನ್ನು ಸಂಪೂರ್ಣವಾಗಿ ರಕ್ಷಿಸಿದ ಸಂದರ್ಭ! | إِذْ نَجَّيْنَٰهُ وَأَهْلَهُۥٓ أَجْمَعِينَ. ﴿134﴾ |
| 135 ಹಿಂದೆ ಉಳಿದವರಲ್ಲಿ ಸೇರಿದ ಒಬ್ಬ ವೃದ್ಧೆಯ ಹೊರತು. | إِلَّا عَجُوزًۭا فِى ٱلْغَٰبِرِينَ. ﴿135﴾ |
| 136 ನಂತರ ಇತರರನ್ನು ನಾವು ನಾಶ ಮಾಡಿದೆವು. | ثُمَّ دَمَّرْنَا ٱلْءَاخَرِينَ. ﴿136﴾ |
| 137 ನೀವು ಬೆಳಗಾಗುವಾಗ ಅವರ ಊರುಗಳ ಬಳಿಯಿಂದ ಸಾಗುತ್ತೀರಿ. | وَإِنَّكُمْ لَتَمُرُّونَ عَلَيْهِم مُّصْبِحِينَ. ﴿137﴾ |
| 138 ರಾತ್ರಿ ಕೂಡ. ಆದರೂ ನೀವು ಆಲೋಚಿಸುವುದಿಲ್ಲವೇ? | وَبِٱلَّيْلِ ۗ أَفَلَا تَعْقِلُونَ. ﴿138﴾ |
| 139 ನಿಶ್ಚಯವಾಗಿಯೂ ಯೂನುಸ್ ಸಂದೇಶವಾಹಕರಲ್ಲಿ ಸೇರಿದವರಾಗಿದ್ದರು. | وَإِنَّ يُونُسَ لَمِنَ ٱلْمُرْسَلِينَ. ﴿139﴾ |
| 140 ಅವರು ತುಂಬಿ ತುಳುಕುವ ನಾವೆಯ ಬಳಿಗೆ ಪಲಾಯನ ಮಾಡಿದ ಸಂದರ್ಭ! | إِذْ أَبَقَ إِلَى ٱلْفُلْكِ ٱلْمَشْحُونِ. ﴿140﴾ |
| 141 ನಂತರ ಅಲ್ಲಿ ಚೀಟಿಯೆತ್ತಲಾದಾಗ ಅವರು ಪರಾಜಿತರಾದರು. | فَسَاهَمَ فَكَانَ مِنَ ٱلْمُدْحَضِينَ. ﴿141﴾ |
| 142 ನಂತರ ಅವರು ಆಕ್ಷೇಪಾರ್ಹ ಸ್ಥಿತಿಯಲ್ಲಿದ್ದಾಗ ಮೀನು ಅವರನ್ನು ನುಂಗಿತು. | فَٱلْتَقَمَهُ ٱلْحُوتُ وَهُوَ مُلِيمٌۭ. ﴿142﴾ |
| 143 ಆದರೆ ಅವರು ಅಲ್ಲಾಹನ ಪರಿಶುದ್ಧಿಯನ್ನು ಕೊಂಡಾಡುವವರಲ್ಲಿ ಸೇರದಿರುತ್ತಿದ್ದರೆ | فَلَوْلَآ أَنَّهُۥ كَانَ مِنَ ٱلْمُسَبِّحِينَ. ﴿143﴾ |
| 144 ಜನರಿಗೆ ಜೀವ ನೀಡಿ ಎಬ್ಬಿಸಲಾಗುವ ದಿನದವರೆಗೂ ಅವರು ಅದರ ಹೊಟ್ಟೆಯಲ್ಲೇ ಉಳಿಯುತ್ತಿದ್ದರು! | لَلَبِثَ فِى بَطْنِهِۦٓ إِلَىٰ يَوْمِ يُبْعَثُونَ. ﴿144﴾ |
| 145 ನಂತರ ನಾವು ಅವರನ್ನು ಬಯಲು ಪ್ರದೇಶಕ್ಕೆ ಎಸೆದೆವು. ಆಗ ಅವರು ಅಸ್ವಸ್ಥರಾಗಿದ್ದರು. | ۞ فَنَبَذْنَٰهُ بِٱلْعَرَآءِ وَهُوَ سَقِيمٌۭ. ﴿145﴾ |
| 146 ನಾವು ಅವರಿಗೆ (ನೆರಳು ನೀಡುವ) ಸೋರೆ ಬಳ್ಳಿಯ ಮರವನ್ನು ಬೆಳೆಸಿದೆವು. | وَأَنۢبَتْنَا عَلَيْهِ شَجَرَةًۭ مِّن يَقْطِينٍۢ. ﴿146﴾ |
| 147 ನಾವು ಅವರನ್ನು ಒಂದು ಲಕ್ಷ ಅಥವಾ ಅದಕ್ಕಿಂತಲೂ ಹೆಚ್ಚಿನ ಜನರ ಬಳಿಗೆ ಕಳುಹಿಸಿದೆವು. | وَأَرْسَلْنَٰهُ إِلَىٰ مِا۟ئَةِ أَلْفٍ أَوْ يَزِيدُونَ. ﴿147﴾ |
| 148 ಅವರು (ಆ ಜನರು) ವಿಶ್ವಾಸವಿಟ್ಟರು. ಆದ್ದರಿಂದ ನಾವು ಅವರಿಗೆ ಒಂದು ಕಾಲದವರೆಗೆ ಸುಖ ಜೀವನವನ್ನು ಒದಗಿಸಿದೆವು. | فَـَٔامَنُوا۟ فَمَتَّعْنَٰهُمْ إِلَىٰ حِينٍۢ. ﴿148﴾ |
| 149 (ಓ ಪ್ರವಾದಿಯವರೇ!) ಅವರೊಂದಿಗೆ ಕೇಳಿರಿ: “ನಿಮ್ಮ ಪರಿಪಾಲಕನಿಗೆ ಹೆಣ್ಣು ಮಕ್ಕಳು ಮತ್ತು ಅವರಿಗೆ ಗಂಡುಮಕ್ಕಳೇ? | فَٱسْتَفْتِهِمْ أَلِرَبِّكَ ٱلْبَنَاتُ وَلَهُمُ ٱلْبَنُونَ. ﴿149﴾ |
| 150 ಅಥವಾ ನಾವು ದೇವದೂತರುಗಳನ್ನು ಸ್ತ್ರೀಯರನ್ನಾಗಿ ಸೃಷ್ಟಿಸುವಾಗ ಅವರು ಅಲ್ಲಿ ಉಪಸ್ಥಿತರಿದ್ದರೇ?” | أَمْ خَلَقْنَا ٱلْمَلَٰٓئِكَةَ إِنَٰثًۭا وَهُمْ شَٰهِدُونَ. ﴿150﴾ |
| 151 ತಿಳಿಯಿರಿ! ಅವರು ಕೇವಲ ಸುಳ್ಳನ್ನು ಕಲ್ಪಿಸಿ ಹೇಳುತ್ತಿದ್ದಾರೆ. | أَلَآ إِنَّهُم مِّنْ إِفْكِهِمْ لَيَقُولُونَ. ﴿151﴾ |
| 152 ಅಲ್ಲಾಹನಿಗೆ ಮಕ್ಕಳಿದ್ದಾರೆಂದು. ನಿಶ್ಚಯವಾಗಿಯೂ ಅವರು ಸುಳ್ಳು ಹೇಳುವವರಾಗಿದ್ದಾರೆ. | وَلَدَ ٱللَّهُ وَإِنَّهُمْ لَكَٰذِبُونَ. ﴿152﴾ |
| 153 ಅಲ್ಲಾಹು ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳಿಗೆ ಪ್ರಾಶಸ್ತ್ಯ ನೀಡಿದನೇ? | أَصْطَفَى ٱلْبَنَاتِ عَلَى ٱلْبَنِينَ. ﴿153﴾ |
| 154 ನಿಮಗೇನಾಗಿದೆ? ನೀವು ಹೇಗೆ ತೀರ್ಪು ನೀಡುತ್ತಿದ್ದೀರಿ? | مَا لَكُمْ كَيْفَ تَحْكُمُونَ. ﴿154﴾ |
| 155 ನೀವು ಆಲೋಚಿಸುವುದಿಲ್ಲವೇ? | أَفَلَا تَذَكَّرُونَ. ﴿155﴾ |
| 156 ಇದಕ್ಕೆ ನಿಮ್ಮ ಬಳಿ ಯಾವುದಾದರೂ ಸ್ಪಷ್ಟ ಸಾಕ್ಷ್ಯಾಧಾರವಿದೆಯೇ? | أَمْ لَكُمْ سُلْطَٰنٌۭ مُّبِينٌۭ. ﴿156﴾ |
| 157 ಹಾಗಿದ್ದರೆ ನೀವು ನಿಮ್ಮ ಗ್ರಂಥವನ್ನು ತನ್ನಿರಿ. ನೀವು ಸತ್ಯವಂತರಾಗಿದ್ದರೆ! | فَأْتُوا۟ بِكِتَٰبِكُمْ إِن كُنتُمْ صَٰدِقِينَ. ﴿157﴾ |
| 158 ಅವರು ಅವನ (ಅಲ್ಲಾಹನ) ಮತ್ತು ಜಿನ್ನ್‌ಗಳ ಮಧ್ಯೆ ಕುಟುಂಬ ಸಂಬಂಧವನ್ನು ಸ್ಥಾಪಿಸಿದ್ದರು. ಆದರೆ (ಇಂತಹ ನಂಬಿಕೆಯಿರುವ ಜನರನ್ನು) ನಿಶ್ಚಯವಾಗಿಯೂ ಶಿಕ್ಷೆಗೆ ಹಾಜರುಪಡಿಸಲಾಗುವುದೆಂದು ಜಿನ್ನ್‌ಗಳಿಗೆ ತಿಳಿದಿದೆ. | وَجَعَلُوا۟ بَيْنَهُۥ وَبَيْنَ ٱلْجِنَّةِ نَسَبًۭا ۚ وَلَقَدْ عَلِمَتِ ٱلْجِنَّةُ إِنَّهُمْ لَمُحْضَرُونَ. ﴿158﴾ |
| 159 ಅವರು (ಅಲ್ಲಾಹನ ಬಗ್ಗೆ) ವರ್ಣಿಸಿ ಹೇಳುವ ಇಂತಹ ಸುಳ್ಳುಗಳಿಂದ ಅಲ್ಲಾಹು ಎಷ್ಟೋ ಪರಿಶುದ್ಧನಾಗಿದ್ದಾನೆ. | سُبْحَٰنَ ٱللَّهِ عَمَّا يَصِفُونَ. ﴿159﴾ |
| 160 ಆದರೆ ಅಲ್ಲಾಹನ ನಿಷ್ಕಳಂಕ ದಾಸರು (ಇದರಿಂದ) ಹೊರತಾಗಿದ್ದಾರೆ. | إِلَّا عِبَادَ ٱللَّهِ ٱلْمُخْلَصِينَ. ﴿160﴾ |
| 161 ನಿಶ್ಚಯವಾಗಿಯೂ ನೀವು ಮತ್ತು ನೀವು ಆರಾಧಿಸುತ್ತಿರುವ ದೇವರುಗಳು. | فَإِنَّكُمْ وَمَا تَعْبُدُونَ. ﴿161﴾ |
| 162 ಯಾರನ್ನೂ ಅವನಿಂದ (ಅಲ್ಲಾಹನಿಂದ) ತಪ್ಪಿಸಿಬಿಡಲು ನಿಮಗೆ ಸಾಧ್ಯವಿಲ್ಲ. | مَآ أَنتُمْ عَلَيْهِ بِفَٰتِنِينَ. ﴿162﴾ |
| 163 ನರಕವಾಸಿಯಾಗುವವನ ಹೊರತು. | إِلَّا مَنْ هُوَ صَالِ ٱلْجَحِيمِ. ﴿163﴾ |
| 164 (ದೇವದೂತರುಗಳು ಹೇಳುತ್ತಾರೆ): “ನಮ್ಮಲ್ಲಿ ಪ್ರತಿಯೊಬ್ಬರಿಗೂ ಒಂದು ನಿಶ್ಚಿತ ಸ್ಥಾನವಿದೆ. | وَمَا مِنَّآ إِلَّا لَهُۥ مَقَامٌۭ مَّعْلُومٌۭ. ﴿164﴾ |
| 165 ನಿಶ್ಚಯವಾಗಿಯೂ ನಾವು (ಅಲ್ಲಾಹನನ್ನು ಆರಾಧಿಸಲು) ಸಾಲುಗಟ್ಟಿ ನಿಲ್ಲುತ್ತೇವೆ. | وَإِنَّا لَنَحْنُ ٱلصَّآفُّونَ. ﴿165﴾ |
| 166 ನಿಶ್ಚಯವಾಗಿಯೂ ನಾವು (ಅಲ್ಲಾಹನ) ಪರಿಶುದ್ಧಿಯನ್ನು ಕೊಂಡಾಡುವವರಾಗಿದ್ದೇವೆ.” | وَإِنَّا لَنَحْنُ ٱلْمُسَبِّحُونَ. ﴿166﴾ |
| 167 ನಿಶ್ಚಯವಾಗಿಯೂ ಅವರು (ಸತ್ಯನಿಷೇಧಿಗಳು) ಹೇಳುತ್ತಿದ್ದರು: | وَإِن كَانُوا۟ لَيَقُولُونَ. ﴿167﴾ |
| 168 “ನಮ್ಮ ಬಳಿ ಪೂರ್ವಜರ ಯಾವುದಾದರೂ ಉಪದೇಶವು ಇರುತ್ತಿದ್ದರೆ. | لَوْ أَنَّ عِندَنَا ذِكْرًۭا مِّنَ ٱلْأَوَّلِينَ. ﴿168﴾ |
| 169 ನಾವು ಕೂಡ ಅಲ್ಲಾಹನ ನಿಷ್ಕಳಂಕ ದಾಸರಾಗಿರುತ್ತಿದ್ದೆವು.” | لَكُنَّا عِبَادَ ٱللَّهِ ٱلْمُخْلَصِينَ. ﴿169﴾ |
| 170 ಆದರೂ ಅವರು ಅದನ್ನು (ಪವಿತ್ರ ಕುರ್‌ಆನನ್ನು) ನಿಷೇಧಿಸಿದರು. ಆದ್ದರಿಂದ ಸದ್ಯವೇ ಅವರು ತಿಳಿಯುವರು. | فَكَفَرُوا۟ بِهِۦ ۖ فَسَوْفَ يَعْلَمُونَ. ﴿170﴾ |
| 171 ನಮ್ಮ ವಾಗ್ದಾನವು ಸಂದೇಶವಾಹಕರುಗಳಾದ ನಮ್ಮ ದಾಸರಿಗೆ ಈಗಾಗಲೇ ಜಾರಿಯಾಗಿಬಿಟ್ಟಿದೆ. | وَلَقَدْ سَبَقَتْ كَلِمَتُنَا لِعِبَادِنَا ٱلْمُرْسَلِينَ. ﴿171﴾ |
| 172 (ಅದೇನೆಂದರೆ) ನಿಶ್ಚಯವಾಗಿಯೂ ಅವರಿಗೇ ಸಹಾಯ ಮಾಡಲಾಗುವುದೆಂದು. | إِنَّهُمْ لَهُمُ ٱلْمَنصُورُونَ. ﴿172﴾ |
| 173 ನಿಶ್ಚಯವಾಗಿಯೂ ನಮ್ಮ ಸೈನ್ಯವೇ ವಿಜಯಿಯಾಗುವುದೆಂದು. | وَإِنَّ جُندَنَا لَهُمُ ٱلْغَٰلِبُونَ. ﴿173﴾ |
| 174 ಆದ್ದರಿಂದ ನೀವು ಕೆಲವು ದಿನಗಳ ತನಕ ಅವರಿಂದ ವಿಮುಖರಾಗಿರಿ. | فَتَوَلَّ عَنْهُمْ حَتَّىٰ حِينٍۢ. ﴿174﴾ |
| 175 ಅವರನ್ನು ವೀಕ್ಷಿಸುತ್ತಿರಿ. ಅವರು ಕೂಡ ಮುಂದೆ (ಏನಾಗುವುದೆಂದು) ನೋಡುವರು. | وَأَبْصِرْهُمْ فَسَوْفَ يُبْصِرُونَ. ﴿175﴾ |
| 176 ಅವರು ನಮ್ಮ ಶಿಕ್ಷೆಗಾಗಿ ತ್ವರೆ ಮಾಡುತ್ತಿದ್ದಾರೆಯೇ? | أَفَبِعَذَابِنَا يَسْتَعْجِلُونَ. ﴿176﴾ |
| 177 ಆದರೆ ನಮ್ಮ ಶಿಕ್ಷೆಯು ಅವರ ಅಂಗಳದಲ್ಲಿ ಇಳಿಯುವಾಗ ಮುನ್ನೆಚ್ಚರಿಕೆ ನೀಡಲಾದವರ ಮುಂಜಾನೆಯು ಬಹಳ ನಿಕೃಷ್ಟವಾಗಿರುವುದು! | فَإِذَا نَزَلَ بِسَاحَتِهِمْ فَسَآءَ صَبَاحُ ٱلْمُنذَرِينَ. ﴿177﴾ |
| 178 ಆದ್ದರಿಂದ ನೀವು ಕೆಲವು ದಿನಗಳ ತನಕ ಅವರಿಂದ ವಿಮುಖರಾಗಿರಿ. | وَتَوَلَّ عَنْهُمْ حَتَّىٰ حِينٍۢ. ﴿178﴾ |
| 179 ಅವರನ್ನು ವೀಕ್ಷಿಸುತ್ತಿರಿ. ಅವರು ಕೂಡ ಮುಂದೆ (ಏನಾಗುವುದೆಂದು) ನೋಡುವರು. | وَأَبْصِرْ فَسَوْفَ يُبْصِرُونَ. ﴿179﴾ |
| 180 ಮಹಾ ಪ್ರತಿಷ್ಠೆಯ ಒಡೆಯನಾದ ನಿಮ್ಮ ಪರಿಪಾಲಕನು (ಅಲ್ಲಾಹು) ಅವರು ವರ್ಣಿಸುವ ಎಲ್ಲಾ ಸುಳ್ಳುಗಳಿಂದ ಎಷ್ಟೋ ಪರಿಶುದ್ಧನಾಗಿದ್ದಾನೆ. | سُبْحَٰنَ رَبِّكَ رَبِّ ٱلْعِزَّةِ عَمَّا يَصِفُونَ. ﴿180﴾ |
| 181 ಸಂದೇಶವಾಹಕರುಗಳ ಮೇಲೆ ಶಾಂತಿಯಿರಲಿ! | وَسَلَٰمٌ عَلَى ٱلْمُرْسَلِينَ. ﴿181﴾ |
| 182 ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನಿಗೆ ಸರ್ವಸ್ತುತಿ. | وَٱلْحَمْدُ لِلَّهِ رَبِّ ٱلْعَٰلَمِينَ. ﴿182﴾ |