غافر
ಕನ್ನಡ Translation with Arabic Quran Text
| ಕನ್ನಡ | العربية |
|---|---|
| 1 ಹಾ-ಮೀಮ್. | حمٓ. ﴿1﴾ |
| 2 ಈ ಗ್ರಂಥವು ಪ್ರಬಲನು ಮತ್ತು ಸರ್ವಜ್ಞನಾದ ಅಲ್ಲಾಹನ ಕಡೆಯಿಂದ ಅವತೀರ್ಣವಾಗಿದೆ. | تَنزِيلُ ٱلْكِتَٰبِ مِنَ ٱللَّهِ ٱلْعَزِيزِ ٱلْعَلِيمِ. ﴿2﴾ |
| 3 ಅವನು ಪಾಪವನ್ನು ಕ್ಷಮಿಸುವವನು, ಪಶ್ಚಾತ್ತಾಪವನ್ನು ಸ್ವೀಕರಿಸುವವನು, ಕಠಿಣವಾಗಿ ಶಿಕ್ಷಿಸುವವನು ಮತ್ತು ಅಪಾರ ಸಾಮರ್ಥ್ಯವುಳ್ಳವನಾಗಿದ್ದಾನೆ. ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. ಗಮ್ಯಸ್ಥಾನವು ಅವನ ಬಳಿಗೇ ಆಗಿದೆ. | غَافِرِ ٱلذَّنۢبِ وَقَابِلِ ٱلتَّوْبِ شَدِيدِ ٱلْعِقَابِ ذِى ٱلطَّوْلِ ۖ لَآ إِلَٰهَ إِلَّا هُوَ ۖ إِلَيْهِ ٱلْمَصِيرُ. ﴿3﴾ |
| 4 ಅಲ್ಲಾಹನ ವಚನಗಳ ಬಗ್ಗೆ ಸತ್ಯನಿಷೇಧಿಗಳು ಮಾತ್ರ ತರ್ಕಿಸುತ್ತಾರೆ. ಅವರು ಊರುಗಳಲ್ಲಿ ಸ್ವೇಚ್ಛವಾಗಿ ವಿಹರಿಸುವುದು ನಿಮ್ಮನ್ನು ಮರುಳುಗೊಳಿಸದಿರಲಿ. | مَا يُجَٰدِلُ فِىٓ ءَايَٰتِ ٱللَّهِ إِلَّا ٱلَّذِينَ كَفَرُوا۟ فَلَا يَغْرُرْكَ تَقَلُّبُهُمْ فِى ٱلْبِلَٰدِ. ﴿4﴾ |
| 5 ಅವರಿಗಿಂತ ಮೊದಲು ನೂಹರ ಜನರು ಮತ್ತು ಅವರ ನಂತರದ ಪಂಗಡಗಳು (ಪ್ರವಾದಿಗಳನ್ನು) ನಿಷೇಧಿಸಿದ್ದರು. ಎಲ್ಲಾ ಸಮುದಾಯಗಳ ಜನರೂ ತಮ್ಮ ಸಂದೇಶವಾಹಕರನ್ನು ಸೆರೆಹಿಡಿಯಲು ಪ್ರಯತ್ನಿಸಿದ್ದರು. ಸತ್ಯವನ್ನು ನಾಶ ಮಾಡಲು ಅವರು ಅಸತ್ಯದ ಮೂಲಕ ತರ್ಕಿಸಿದರು. ಆದ್ದರಿಂದ ನಾನು ಅವರನ್ನು ಹಿಡಿದು ಶಿಕ್ಷಿಸಿದೆನು. ಆಗ ನನ್ನ ಶಿಕ್ಷೆಯು ಹೇಗಿತ್ತು! | كَذَّبَتْ قَبْلَهُمْ قَوْمُ نُوحٍۢ وَٱلْأَحْزَابُ مِنۢ بَعْدِهِمْ ۖ وَهَمَّتْ كُلُّ أُمَّةٍۭ بِرَسُولِهِمْ لِيَأْخُذُوهُ ۖ وَجَٰدَلُوا۟ بِٱلْبَٰطِلِ لِيُدْحِضُوا۟ بِهِ ٱلْحَقَّ فَأَخَذْتُهُمْ ۖ فَكَيْفَ كَانَ عِقَابِ. ﴿5﴾ |
| 6 ಈ ರೀತಿ ಸತ್ಯನಿಷೇಧಿಗಳ ಮೇಲೆ ಅವರು ನರಕವಾಸಿಗಳು ಎಂಬ ತಮ್ಮ ಪರಿಪಾಲಕನ (ಅಲ್ಲಾಹನ) ವಚನವು ಖಾತ್ರಿಯಾಗಿ ಬಿಟ್ಟಿದೆ. | وَكَذَٰلِكَ حَقَّتْ كَلِمَتُ رَبِّكَ عَلَى ٱلَّذِينَ كَفَرُوٓا۟ أَنَّهُمْ أَصْحَٰبُ ٱلنَّارِ. ﴿6﴾ |
| 7 ಸಿಂಹಾಸನವನ್ನು ಹೊರುವವರು ಮತ್ತು ಅದರ ಸುತ್ತಲಲ್ಲಿರುವವರು (ದೇವದೂತರುಗಳು) ಅವರ ಪರಿಪಾಲಕನನ್ನು (ಅಲ್ಲಾಹನನ್ನು) ಸ್ತುತಿಸುವುದರೊಂದಿಗೆ ಅವನ ಪರಿಶುದ್ಧಿಯನ್ನು ಕೊಂಡಾಡುತ್ತಾರೆ. ಅವರು ಅವನಲ್ಲಿ ವಿಶ್ವಾಸವಿಟ್ಟಿದ್ದಾರೆ ಮತ್ತು ಸತ್ಯವಿಶ್ವಾಸಿಗಳಿಗಾಗಿ ಕ್ಷಮೆಯಾಚನೆ ಮಾಡುತ್ತಾ ಪ್ರಾರ್ಥಿಸುತ್ತಾರೆ: “ನಮ್ಮ ಪರಿಪಾಲಕನೇ! ನೀನು ನಿನ್ನ ದಯೆ ಮತ್ತು ಜ್ಞಾನದ ಮೂಲಕ ಎಲ್ಲಾ ವಸ್ತುಗಳನ್ನು ಆವರಿಸಿಕೊಂಡಿರುವೆ. ಆದ್ದರಿಂದ ಪಶ್ಚಾತ್ತಾಪಪಡುವವರನ್ನು ಮತ್ತು ನಿನ್ನ ಮಾರ್ಗವನ್ನು ಹಿಂಬಾಲಿಸುವವರನ್ನು ಕ್ಷಮಿಸು. ಅವರನ್ನು ನರಕ ಶಿಕ್ಷೆಯಿಂದ ಪಾರು ಮಾಡು. | ٱلَّذِينَ يَحْمِلُونَ ٱلْعَرْشَ وَمَنْ حَوْلَهُۥ يُسَبِّحُونَ بِحَمْدِ رَبِّهِمْ وَيُؤْمِنُونَ بِهِۦ وَيَسْتَغْفِرُونَ لِلَّذِينَ ءَامَنُوا۟ رَبَّنَا وَسِعْتَ كُلَّ شَىْءٍۢ رَّحْمَةًۭ وَعِلْمًۭا فَٱغْفِرْ لِلَّذِينَ تَابُوا۟ وَٱتَّبَعُوا۟ سَبِيلَكَ وَقِهِمْ عَذَابَ ٱلْجَحِيمِ. ﴿7﴾ |
| 8 ನಮ್ಮ ಪರಿಪಾಲಕನೇ! ನೀನು ಅವರನ್ನು, ಅವರ ಮಾತಾಪಿತರಲ್ಲಿ, ಪತ್ನಿಯರಲ್ಲಿ ಹಾಗೂ ಮಕ್ಕಳಲ್ಲಿರುವ ನೀತಿವಂತರನ್ನು ನೀನು ಅವರಿಗೆ ವಾಗ್ದಾನ ಮಾಡಿದ ಶಾಶ್ವತವಾಸಕ್ಕಿರುವ ಸ್ವರ್ಗಗಳಿಗೆ ಪ್ರವೇಶ ಮಾಡಿಸು. ನಿಶ್ಚಯವಾಗಿಯೂ ನೀನು ಪ್ರಬಲನು ಮತ್ತು ವಿವೇಕಪೂರ್ಣನಾಗಿರುವೆ. | رَبَّنَا وَأَدْخِلْهُمْ جَنَّٰتِ عَدْنٍ ٱلَّتِى وَعَدتَّهُمْ وَمَن صَلَحَ مِنْ ءَابَآئِهِمْ وَأَزْوَٰجِهِمْ وَذُرِّيَّٰتِهِمْ ۚ إِنَّكَ أَنتَ ٱلْعَزِيزُ ٱلْحَكِيمُ. ﴿8﴾ |
| 9 ಅವರನ್ನು ಕೆಡುಕುಗಳಿಂದ ರಕ್ಷಿಸು. ಆ ದಿನ ನೀನು ಯಾರನ್ನು ಕೆಡುಕುಗಳಿಂದ ರಕ್ಷಿಸುವೆಯೋ ಅವನಿಗೆ ನೀನು ಖಂಡಿತ ಕರುಣೆ ತೋರಿರುವೆ. ಅದೇ ಮಹಾ ಯಶಸ್ಸು.” | وَقِهِمُ ٱلسَّيِّـَٔاتِ ۚ وَمَن تَقِ ٱلسَّيِّـَٔاتِ يَوْمَئِذٍۢ فَقَدْ رَحِمْتَهُۥ ۚ وَذَٰلِكَ هُوَ ٱلْفَوْزُ ٱلْعَظِيمُ. ﴿9﴾ |
| 10 ನಿಶ್ಚಯವಾಗಿಯೂ ಸತ್ಯನಿಷೇಧಿಗಳನ್ನು ಕರೆದು ಹೀಗೆ ಹೇಳಲಾಗುವುದು: “ನಿಮಗೆ ನಿಮ್ಮ ಮೇಲಿರುವ ಕೋಪಕ್ಕಿಂತಲೂ ಹೆಚ್ಚು ಕೋಪವು ನಿಮ್ಮನ್ನು ಸತ್ಯವಿಶ್ವಾಸದ ಕಡೆಗೆ ಕರೆಯಲಾಗುತ್ತಿದ್ದೂ ಸಹ ನೀವು ಸತ್ಯವನ್ನು ನಿಷೇಧಿಸುತ್ತಿದ್ದ ಸಂದರ್ಭ ಅಲ್ಲಾಹನಿಗೆ ನಿಮ್ಮ ಮೇಲಿತ್ತು.” | إِنَّ ٱلَّذِينَ كَفَرُوا۟ يُنَادَوْنَ لَمَقْتُ ٱللَّهِ أَكْبَرُ مِن مَّقْتِكُمْ أَنفُسَكُمْ إِذْ تُدْعَوْنَ إِلَى ٱلْإِيمَٰنِ فَتَكْفُرُونَ. ﴿10﴾ |
|
11
ಅವರು ಹೇಳುವರು: “ನಮ್ಮ ಪರಿಪಾಲಕನೇ! ನೀನು ನಮ್ಮನ್ನು ಎರಡು ಬಾರಿ ಸಾವನ್ನಪ್ಪುವಂತೆ ಮಾಡಿದೆ ಮತ್ತು ನಮಗೆ ಎರಡು ಬಾರಿ ಜೀವವನ್ನು ನೀಡಿದೆ.[1] ನಾವು ನಮ್ಮ ತಪ್ಪುಗಳನ್ನು ಒಪ್ಪಿಕೊಂಡಿದ್ದೇವೆ. ಆದ್ದರಿಂದ ಹೊರಹೋಗಲು ಯಾವುದಾದರೂ ದಾರಿಯಿದೆಯೇ?”
[1] ಮೊದಲನೇ ಸಾವು ಎಂದರೆ ಜನನಕ್ಕೆ ಮುನ್ನ ಇದ್ದಂತಹ ನಿರ್ಜೀವ ಸ್ಥಿತಿ. ಎರಡನೇ ಸಾವು ಮನುಷ್ಯನ ಸ್ವಾಭಾವಿಕ ಮರಣ. ಮೊದಲನೇ ಜೀವನವು ಇಹಲೋಕ ಜೀವನ ಮತ್ತು ಎರಡನೇ ಜೀವನವು ಪರಲೋಕ ಜೀವನ.
|
قَالُوا۟ رَبَّنَآ أَمَتَّنَا ٱثْنَتَيْنِ وَأَحْيَيْتَنَا ٱثْنَتَيْنِ فَٱعْتَرَفْنَا بِذُنُوبِنَا فَهَلْ إِلَىٰ خُرُوجٍۢ مِّن سَبِيلٍۢ. ﴿11﴾ |
| 12 ಅದೇಕೆಂದರೆ, ಅಲ್ಲಾಹನೊಂದಿಗೆ ಮಾತ್ರ ಪ್ರಾರ್ಥಿಸಲಾದರೆ ನೀವು ನಿಷೇಧಿಸುತ್ತಿದ್ದಿರಿ ಮತ್ತು ಅವನೊಂದಿಗೆ ಸಹಭಾಗಿತ್ವ (ಶಿರ್ಕ್) ಮಾಡಲಾದರೆ ನೀವು ವಿಶ್ವಾಸವಿಡುತ್ತಿದ್ದಿರಿ. ಆದರೆ (ಇಂದು) ತೀರ್ಪು ನೀಡುವ ಅಧಿಕಾರವು ಅತ್ಯುನ್ನತನು ಮತ್ತು ಸರ್ವಶ್ರೇಷ್ಠನಾದ ಅಲ್ಲಾಹನಿಗಾಗಿದೆ. | ذَٰلِكُم بِأَنَّهُۥٓ إِذَا دُعِىَ ٱللَّهُ وَحْدَهُۥ كَفَرْتُمْ ۖ وَإِن يُشْرَكْ بِهِۦ تُؤْمِنُوا۟ ۚ فَٱلْحُكْمُ لِلَّهِ ٱلْعَلِىِّ ٱلْكَبِيرِ. ﴿12﴾ |
| 13 ಅವನು ತನ್ನ ದೃಷ್ಟಾಂತಗಳನ್ನು ನಿಮಗೆ ತೋರಿಸಿಕೊಡುತ್ತಾನೆ ಮತ್ತು ಆಕಾಶದಿಂದ ನಿಮಗೆ ಉಪಜೀವನವನ್ನು ಇಳಿಸಿಕೊಡುತ್ತಾನೆ. (ಅಲ್ಲಾಹನ ಕಡೆಗೆ) ಮರಳುವವರು ಮಾತ್ರ ಉಪದೇಶವನ್ನು ಸ್ವೀಕರಿಸುತ್ತಾರೆ. | هُوَ ٱلَّذِى يُرِيكُمْ ءَايَٰتِهِۦ وَيُنَزِّلُ لَكُم مِّنَ ٱلسَّمَآءِ رِزْقًۭا ۚ وَمَا يَتَذَكَّرُ إِلَّا مَن يُنِيبُ. ﴿13﴾ |
| 14 ನೀವು ಧರ್ಮವನ್ನು ಅಲ್ಲಾಹನಿಗೆ ನಿಷ್ಕಳಂಕಗೊಳಿಸಿ ಅವನನ್ನು ಕರೆದು ಪ್ರಾರ್ಥಿಸಿರಿ. ಸತ್ಯನಿಷೇಧಿಗಳು ಅಸಹ್ಯಪಟ್ಟರೂ ಸಹ. | فَٱدْعُوا۟ ٱللَّهَ مُخْلِصِينَ لَهُ ٱلدِّينَ وَلَوْ كَرِهَ ٱلْكَٰفِرُونَ. ﴿14﴾ |
| 15 ಅವನು ಉನ್ನತ ಪದವಿಗಳನ್ನು ಹೊಂದಿರುವವನು ಮತ್ತು ಸಿಂಹಾಸನದ ಒಡೆಯನಾಗಿದ್ದಾನೆ. ಅವನು ತನ್ನ ದಾಸರಲ್ಲಿ ಅವನು ಇಚ್ಛಿಸುವವರಿಗೆ ದೇವವಾಣಿಯನ್ನು ನೀಡುತ್ತಾನೆ. ಭೇಟಿಯ ದಿನದ ಬಗ್ಗೆ ಅವರು ಜನರಿಗೆ ಎಚ್ಚರಿಕೆ ನೀಡಲೆಂದು. | رَفِيعُ ٱلدَّرَجَٰتِ ذُو ٱلْعَرْشِ يُلْقِى ٱلرُّوحَ مِنْ أَمْرِهِۦ عَلَىٰ مَن يَشَآءُ مِنْ عِبَادِهِۦ لِيُنذِرَ يَوْمَ ٱلتَّلَاقِ. ﴿15﴾ |
| 16 ಜನರೆಲ್ಲರೂ ಬಯಲಿಗೆ ಬರುವ ದಿನ. ಅವರಿಗೆ ಸಂಬಂಧಿಸಿದ ಯಾವುದೇ ವಿಷಯವು ಅಲ್ಲಾಹನಿಂದ ಮರೆಯಾಗಿರುವುದಿಲ್ಲ. ಇಂದು ಸಾರ್ವಭೌಮತ್ವವು ಯಾರಿಗೆ? ಏಕೈಕನು ಮತ್ತು ಸರ್ವಾಧಿಕಾರಿಯಾದ ಅಲ್ಲಾಹನಿಗೆ. | يَوْمَ هُم بَٰرِزُونَ ۖ لَا يَخْفَىٰ عَلَى ٱللَّهِ مِنْهُمْ شَىْءٌۭ ۚ لِّمَنِ ٱلْمُلْكُ ٱلْيَوْمَ ۖ لِلَّهِ ٱلْوَٰحِدِ ٱلْقَهَّارِ. ﴿16﴾ |
| 17 ಇಂದು ಪ್ರತಿಯೊಬ್ಬನಿಗೂ ಅವನು ಮಾಡಿದ ಕರ್ಮಗಳ ಪ್ರತಿಫಲವನ್ನು ನೀಡಲಾಗುವುದು. ಇಂದು ಯಾರಿಗೂ ಅನ್ಯಾಯವಾಗುವುದಿಲ್ಲ. ನಿಶ್ಚಯವಾಗಿಯೂ ಅಲ್ಲಾಹು ಅತಿವೇಗವಾಗಿ ವಿಚಾರಣೆ ಮಾಡುತ್ತಾನೆ. | ٱلْيَوْمَ تُجْزَىٰ كُلُّ نَفْسٍۭ بِمَا كَسَبَتْ ۚ لَا ظُلْمَ ٱلْيَوْمَ ۚ إِنَّ ٱللَّهَ سَرِيعُ ٱلْحِسَابِ. ﴿17﴾ |
| 18 ಅವರಿಗೆ ಬಹಳ ಹತ್ತಿರವಾಗುವ ಆ ದಿನದ (ಪುನರುತ್ಥಾನ ದಿನದ) ಬಗ್ಗೆ ಎಚ್ಚರಿಕೆ ನೀಡಿರಿ. ಹೃದಯಗಳು ಗಂಟಲಿಗೆ ತಲುಪುವ ಮತ್ತು ಅವರೆಲ್ಲರೂ ನಿಶ್ಶಬ್ದರಾಗುವ ಸಂದರ್ಭ. ಅಕ್ರಮಿಗಳಿಗೆ ಯಾವುದೇ ಆಪ್ತಮಿತ್ರರು ಅಥವಾ ಅಂಗೀಕಾರಯೋಗ್ಯ ಶಿಫಾರಸು ಮಾಡುವವರು ಯಾರೂ ಇರಲಾರರು. | وَأَنذِرْهُمْ يَوْمَ ٱلْءَازِفَةِ إِذِ ٱلْقُلُوبُ لَدَى ٱلْحَنَاجِرِ كَٰظِمِينَ ۚ مَا لِلظَّٰلِمِينَ مِنْ حَمِيمٍۢ وَلَا شَفِيعٍۢ يُطَاعُ. ﴿18﴾ |
| 19 ಅವನು ಕಣ್ಣುಗಳ ವಂಚನೆಯ ನೋಟಗಳನ್ನು ಮತ್ತು ಹೃದಯಗಳು ಬಚ್ಚಿಡುವುದನ್ನು ತಿಳಿಯುತ್ತಾನೆ. | يَعْلَمُ خَآئِنَةَ ٱلْأَعْيُنِ وَمَا تُخْفِى ٱلصُّدُورُ. ﴿19﴾ |
| 20 ಅಲ್ಲಾಹು ಸರಿಯಾದ ರೀತಿಯಲ್ಲಿ ತೀರ್ಪು ನೀಡುತ್ತಾನೆ. ಅವರು ಅವನನ್ನು ಬಿಟ್ಟು ಯಾರನ್ನು ಕರೆದು ಪ್ರಾರ್ಥಿಸುತ್ತಾರೋ ಅವರು ಯಾವುದೇ ವಿಷಯದಲ್ಲೂ ತೀರ್ಪು ನೀಡುವುದಿಲ್ಲ. ನಿಶ್ಚಯವಾಗಿಯೂ ಅಲ್ಲಾಹು ಎಲ್ಲವನ್ನು ಕೇಳುವವನು ಮತ್ತು ನೋಡುವವನಾಗಿದ್ದಾನೆ. | وَٱللَّهُ يَقْضِى بِٱلْحَقِّ ۖ وَٱلَّذِينَ يَدْعُونَ مِن دُونِهِۦ لَا يَقْضُونَ بِشَىْءٍ ۗ إِنَّ ٱللَّهَ هُوَ ٱلسَّمِيعُ ٱلْبَصِيرُ. ﴿20﴾ |
| 21 ಅವರು ಭೂಮಿಯಲ್ಲಿ ಸಂಚರಿಸಿ ಅವರಿಗಿಂತ ಮೊದಲಿನವರ ಅಂತ್ಯವು ಹೇಗಿತ್ತೆಂದು ನೋಡುವುದಿಲ್ಲವೇ? ಅವರು ಶಕ್ತಿ-ಸಾಮರ್ಥ್ಯದಲ್ಲಿ ಮತ್ತು ಭೂಮಿಯಲ್ಲಿ ಸ್ಮಾರಕಗಳನ್ನು ಬಿಟ್ಟುಹೋಗುವುದರಲ್ಲಿ ಇವರಿಗಿಂತ ಹೆಚ್ಚು ಶ್ರೇಷ್ಠರಾಗಿದ್ದರು. ಆದರೆ ಅವರು ಮಾಡಿದ ಪಾಪಗಳ ಕಾರಣದಿಂದ ಅಲ್ಲಾಹು ಅವರನ್ನು ಹಿಡಿದು ಶಿಕ್ಷಿಸಿದನು. ಅವರನ್ನು ಅಲ್ಲಾಹನ ಶಿಕ್ಷೆಯಿಂದ ರಕ್ಷಿಸುವವರು ಯಾರೂ ಇರಲಿಲ್ಲ. | ۞ أَوَلَمْ يَسِيرُوا۟ فِى ٱلْأَرْضِ فَيَنظُرُوا۟ كَيْفَ كَانَ عَٰقِبَةُ ٱلَّذِينَ كَانُوا۟ مِن قَبْلِهِمْ ۚ كَانُوا۟ هُمْ أَشَدَّ مِنْهُمْ قُوَّةًۭ وَءَاثَارًۭا فِى ٱلْأَرْضِ فَأَخَذَهُمُ ٱللَّهُ بِذُنُوبِهِمْ وَمَا كَانَ لَهُم مِّنَ ٱللَّهِ مِن وَاقٍۢ. ﴿21﴾ |
| 22 ಅದೇಕೆಂದರೆ ಅವರ ಬಳಿಗೆ ಸಂದೇಶವಾಹಕರುಗಳು ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಬರುತ್ತಿದ್ದರು. ಆದರೆ ಅವರು ನಿಷೇಧಿಸಿದರು. ಆದ್ದರಿಂದ ಅಲ್ಲಾಹು ಅವರನ್ನು ಹಿಡಿದು ಶಿಕ್ಷಿಸಿದನು. ನಿಶ್ಚಯವಾಗಿಯೂ ಅವನು ಮಹಾ ಶಕ್ತಿಶಾಲಿ ಮತ್ತು ಕಠಿಣವಾಗಿ ಶಿಕ್ಷಿಸುವವನಾಗಿದ್ದಾನೆ. | ذَٰلِكَ بِأَنَّهُمْ كَانَت تَّأْتِيهِمْ رُسُلُهُم بِٱلْبَيِّنَٰتِ فَكَفَرُوا۟ فَأَخَذَهُمُ ٱللَّهُ ۚ إِنَّهُۥ قَوِىٌّۭ شَدِيدُ ٱلْعِقَابِ. ﴿22﴾ |
| 23 ನಿಶ್ಚಯವಾಗಿಯೂ ನಾವು ಮೂಸಾರನ್ನು ನಮ್ಮ ವಚನಗಳೊಂದಿಗೆ ಮತ್ತು ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಕಳುಹಿಸಿದ್ದೆವು. | وَلَقَدْ أَرْسَلْنَا مُوسَىٰ بِـَٔايَٰتِنَا وَسُلْطَٰنٍۢ مُّبِينٍ. ﴿23﴾ |
| 24 ಫರೋಹ, ಹಾಮಾನ್ ಮತ್ತು ಕಾರೂನನ ಬಳಿಗೆ. ಆದರೆ ಅವರು ಹೇಳಿದರು: “ಮಾಟಗಾರ ಮತ್ತು ಸುಳ್ಳುಗಾರ.” | إِلَىٰ فِرْعَوْنَ وَهَٰمَٰنَ وَقَٰرُونَ فَقَالُوا۟ سَٰحِرٌۭ كَذَّابٌۭ. ﴿24﴾ |
| 25 ಅವರು (ಮೂಸಾ) ನಮ್ಮ ಕಡೆಯ ಸತ್ಯದೊಂದಿಗೆ ಅವರ ಬಳಿಗೆ ಬಂದಾಗ ಅವರು ಹೇಳಿದರು: “ಅವನ ಜೊತೆಗೆ ವಿಶ್ವಾಸವಿಟ್ಟವರ ಗಂಡುಮಕ್ಕಳನ್ನು ಕೊಲ್ಲಿರಿ ಮತ್ತು ಅವರ ಹೆಣ್ಣುಮಕ್ಕಳನ್ನು ಜೀವಂತ ಬಿಡಿ.” ಸತ್ಯನಿಷೇಧಿಗಳ ತಂತ್ರಗಾರಿಕೆಯು ಪ್ರಮಾದದಲ್ಲೇ ಇದೆ. | فَلَمَّا جَآءَهُم بِٱلْحَقِّ مِنْ عِندِنَا قَالُوا۟ ٱقْتُلُوٓا۟ أَبْنَآءَ ٱلَّذِينَ ءَامَنُوا۟ مَعَهُۥ وَٱسْتَحْيُوا۟ نِسَآءَهُمْ ۚ وَمَا كَيْدُ ٱلْكَٰفِرِينَ إِلَّا فِى ضَلَٰلٍۢ. ﴿25﴾ |
| 26 ಫರೋಹ ಹೇಳಿದನು: “ನನ್ನನ್ನು ಬಿಡಿ! ನಾನು ಮೂಸಾನನ್ನು ಕೊಂದು ಬಿಡುತ್ತೇನೆ. ಅವನು ಅವನ ಪರಿಪಾಲಕನನ್ನು (ಅಲ್ಲಾಹನನ್ನು) ಕರೆಯಲಿ! ಅವನು ನಿಮ್ಮ ಧರ್ಮವನ್ನು ಬದಲಾಯಿಸಬಹುದು ಅಥವಾ ಭೂಮಿಯಲ್ಲಿ ಕಿಡಿಗೇಡಿತನ ಮಾಡಬಹುದು ಎಂದು ನನಗೆ ಭಯವಾಗುತ್ತಿದೆ.” | وَقَالَ فِرْعَوْنُ ذَرُونِىٓ أَقْتُلْ مُوسَىٰ وَلْيَدْعُ رَبَّهُۥٓ ۖ إِنِّىٓ أَخَافُ أَن يُبَدِّلَ دِينَكُمْ أَوْ أَن يُظْهِرَ فِى ٱلْأَرْضِ ٱلْفَسَادَ. ﴿26﴾ |
| 27 ಮೂಸಾ ಹೇಳಿದರು: “ವಿಚಾರಣಾ ದಿನದಲ್ಲಿ ವಿಶ್ವಾಸವಿಡದ ಎಲ್ಲಾ ಅಹಂಕಾರಿಗಳ ವಿರುದ್ಧ ನಾನು ನನ್ನ ಮತ್ತು ನಿಮ್ಮ ಪರಿಪಾಲಕನೊಂದಿಗೆ (ಅಲ್ಲಾಹನೊಂದಿಗೆ) ಅಭಯ ಯಾಚಿಸುತ್ತೇನೆ.” | وَقَالَ مُوسَىٰٓ إِنِّى عُذْتُ بِرَبِّى وَرَبِّكُم مِّن كُلِّ مُتَكَبِّرٍۢ لَّا يُؤْمِنُ بِيَوْمِ ٱلْحِسَابِ. ﴿27﴾ |
| 28 ಫರೋಹನ ಜನರಲ್ಲಿ ಸೇರಿದ ಮತ್ತು ತನ್ನ ವಿಶ್ವಾಸವನ್ನು ಮುಚ್ಚಿಟ್ಟಿದ್ದ ಸತ್ಯವಿಶ್ವಾಸಿ ವ್ಯಕ್ತಿಯೊಬ್ಬರು ಹೇಳಿದರು: “ನನ್ನ ಪರಿಪಾಲಕ ಅಲ್ಲಾಹು ಎಂದು ಹೇಳುವ ಕಾರಣಕ್ಕಾಗಿ ನೀವು ಒಬ್ಬ ಮನುಷ್ಯನನ್ನು ಕೊಲ್ಲುತ್ತೀರಾ? ಅವರು ನಿಮ್ಮ ಬಳಿಗೆ ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಸ್ಪಷ್ಟ ಸಾಕ್ಷ್ಯಾಧಾರಗಳನ್ನು ತಂದಿದ್ದಾರೆ. ಅವರು ಸುಳ್ಳು ಹೇಳುತ್ತಿದ್ದರೆ ಅದರ ಪಾಪವು ಅವರಿಗೇ ಆಗಿದೆ. ಆದರೆ ಅವರು ಸತ್ಯ ಹೇಳುತ್ತಿದ್ದರೆ ಅವರು ನಿಮಗೆ ಎಚ್ಚರಿಕೆ ನೀಡುವ ಕೆಲವು ಸಂಗತಿಗಳು (ಶಿಕ್ಷೆಗಳು) ನಿಶ್ಚಯವಾಗಿಯೂ ನಿಮ್ಮ ಮೇಲೆ ಎರಗುವುದು. ನಿಶ್ಚಯವಾಗಿಯೂ ಅತಿರೇಕಿ ಮತ್ತು ಸುಳ್ಳನಾಗಿರುವ ಯಾರಿಗೂ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಿಲ್ಲ. | وَقَالَ رَجُلٌۭ مُّؤْمِنٌۭ مِّنْ ءَالِ فِرْعَوْنَ يَكْتُمُ إِيمَٰنَهُۥٓ أَتَقْتُلُونَ رَجُلًا أَن يَقُولَ رَبِّىَ ٱللَّهُ وَقَدْ جَآءَكُم بِٱلْبَيِّنَٰتِ مِن رَّبِّكُمْ ۖ وَإِن يَكُ كَٰذِبًۭا فَعَلَيْهِ كَذِبُهُۥ ۖ وَإِن يَكُ صَادِقًۭا يُصِبْكُم بَعْضُ ٱلَّذِى يَعِدُكُمْ ۖ إِنَّ ٱللَّهَ لَا يَهْدِى مَنْ هُوَ مُسْرِفٌۭ كَذَّابٌۭ. ﴿28﴾ |
| 29 ಓ ನನ್ನ ಜನರೇ! ನೀವು ಭೂಮಿಯಲ್ಲಿ ಪ್ರಾಬಲ್ಯ ಪಡೆದಿರುವ ಕಾರಣ ಇಂದು ಇದರ ಸಾರ್ವಭೌಮತ್ವವು ನಿಮ್ಮ ವಶದಲ್ಲಿದೆ. ಆದರೆ ಅಲ್ಲಾಹನ ಶಿಕ್ಷೆ ನಮ್ಮ ಬಳಿಗೆ ಬಂದರೆ ನಮಗೆ ಸಹಾಯ ಮಾಡುವವರು ಯಾರು?” ಫರೋಹ ಹೇಳಿದನು: “ನಾನು ಸ್ವತಃ ನನಗಾಗಿ ಸರಿಯೆಂದು ಕಾಣುವ ಮಾರ್ಗವನ್ನೇ ನಿಮಗೆ ತಿಳಿಸುತ್ತಿದ್ದೇನೆ. ನಾನು ನಿಮಗೆ ಒಳಿತಿನ ಮಾರ್ಗವನ್ನೇ ತೋರಿಸಿಕೊಡುತ್ತಿದ್ದೇನೆ.” | يَٰقَوْمِ لَكُمُ ٱلْمُلْكُ ٱلْيَوْمَ ظَٰهِرِينَ فِى ٱلْأَرْضِ فَمَن يَنصُرُنَا مِنۢ بَأْسِ ٱللَّهِ إِن جَآءَنَا ۚ قَالَ فِرْعَوْنُ مَآ أُرِيكُمْ إِلَّا مَآ أَرَىٰ وَمَآ أَهْدِيكُمْ إِلَّا سَبِيلَ ٱلرَّشَادِ. ﴿29﴾ |
| 30 ಆ ಸತ್ಯವಿಶ್ವಾಸಿ ವ್ಯಕ್ತಿ ಹೇಳಿದರು: “ಓ ನನ್ನ ಜನರೇ! ಇತರ ಸಮುದಾಯಗಳಿಗೆ ಸಂಭವಿಸಿದ ಆ ದಿನವು (ಕೆಟ್ಟ ಶಿಕ್ಷೆ) ನಿಮಗೂ ಸಂಭವಿಸಬಹುದೆಂದು ನನಗೆ ಭಯವಾಗುತ್ತಿದೆ. | وَقَالَ ٱلَّذِىٓ ءَامَنَ يَٰقَوْمِ إِنِّىٓ أَخَافُ عَلَيْكُم مِّثْلَ يَوْمِ ٱلْأَحْزَابِ. ﴿30﴾ |
| 31 ಅಂದರೆ ನೂಹರ ಜನರು, ಆದ್ ಗೋತ್ರ, ಸಮೂದ್ ಗೋತ್ರ ಮತ್ತು ಅವರ ನಂತರದವರ ಸ್ಥಿತಿಯಂತೆ. ಅಲ್ಲಾಹು ತನ್ನ ದಾಸರಿಗೆ ಯಾವುದೇ ರೀತಿಯ ಅನ್ಯಾಯ ಮಾಡಲು ಬಯಸುವುದಿಲ್ಲ. | مِثْلَ دَأْبِ قَوْمِ نُوحٍۢ وَعَادٍۢ وَثَمُودَ وَٱلَّذِينَ مِنۢ بَعْدِهِمْ ۚ وَمَا ٱللَّهُ يُرِيدُ ظُلْمًۭا لِّلْعِبَادِ. ﴿31﴾ |
| 32 ಓ ನನ್ನ ಜನರೇ! ನಿಶ್ಚಯವಾಗಿಯೂ ಜನರು ಮೊರೆಯಿಟ್ಟು ರೋದಿಸುವ ಆ ದಿನವನ್ನು ನಾನು ನಿಮ್ಮ ವಿಷಯದಲ್ಲಿ ಭಯಪಡುತ್ತೇನೆ. | وَيَٰقَوْمِ إِنِّىٓ أَخَافُ عَلَيْكُمْ يَوْمَ ٱلتَّنَادِ. ﴿32﴾ |
| 33 ಅಂದರೆ ನೀವು ಬೆನ್ನು ತೋರಿಸಿ ಓಡುವ ದಿನ! ನಿಮ್ಮನ್ನು ಅಲ್ಲಾಹನ ಶಿಕ್ಷೆಯಿಂದ ರಕ್ಷಿಸುವವರು ಯಾರೂ ಇರುವುದಿಲ್ಲ. ಅಲ್ಲಾಹು ಯಾರನ್ನಾದರೂ ದಾರಿತಪ್ಪಿಸಿದರೆ ನಂತರ ಅವನಿಗೆ ಸನ್ಮಾರ್ಗ ತೋರಿಸುವವರು ಯಾರೂ ಇಲ್ಲ. | يَوْمَ تُوَلُّونَ مُدْبِرِينَ مَا لَكُم مِّنَ ٱللَّهِ مِنْ عَاصِمٍۢ ۗ وَمَن يُضْلِلِ ٱللَّهُ فَمَا لَهُۥ مِنْ هَادٍۢ. ﴿33﴾ |
| 34 ಇದಕ್ಕೆ ಮೊದಲು ಯೂಸುಫರು ನಿಮ್ಮ ಬಳಿಗೆ ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಬಂದಿದ್ದರು. ಆದರೂ ಅವರು ನಿಮ್ಮ ಬಳಿಗೆ ತಂದ (ಸಾಕ್ಷ್ಯಾಧಾರಗಳ) ಬಗ್ಗೆ ನೀವು ಸಂದೇಹದಲ್ಲೇ ಇದ್ದಿರಿ. ಎಲ್ಲಿಯವರೆಗೆಂದರೆ ಅವರು ನಿಧನರಾದಾಗ, “ಇವರ ಬಳಿಕ ಅಲ್ಲಾಹು ಇನ್ನೊಬ್ಬ ಸಂದೇಶವಾಹಕರನ್ನು ಕಳುಹಿಸುವುದಿಲ್ಲ” ಎಂದು ನೀವು ಹೇಳಿದಿರಿ. ಈ ರೀತಿ ಅಲ್ಲಾಹು ಎಲ್ಲೆ ಮೀರಿದವರನ್ನು ಮತ್ತು ಸಂಶಯಗ್ರಸ್ಥರನ್ನು ದಾರಿತಪ್ಪಿಸುತ್ತಾನೆ. | وَلَقَدْ جَآءَكُمْ يُوسُفُ مِن قَبْلُ بِٱلْبَيِّنَٰتِ فَمَا زِلْتُمْ فِى شَكٍّۢ مِّمَّا جَآءَكُم بِهِۦ ۖ حَتَّىٰٓ إِذَا هَلَكَ قُلْتُمْ لَن يَبْعَثَ ٱللَّهُ مِنۢ بَعْدِهِۦ رَسُولًۭا ۚ كَذَٰلِكَ يُضِلُّ ٱللَّهُ مَنْ هُوَ مُسْرِفٌۭ مُّرْتَابٌ. ﴿34﴾ |
| 35 ಅವರು ತಮ್ಮ ಬಳಿಗೆ ಬಂದ ಯಾವುದೇ ಸ್ಪಷ್ಟ ಪುರಾವೆಯಿಲ್ಲದೆ ಅಲ್ಲಾಹನ ವಚನಗಳ ವಿಷಯದಲ್ಲಿ ತರ್ಕಿಸುವವರು. ಇದು ಅಲ್ಲಾಹನ ಬಳಿ ಮತ್ತು ಸತ್ಯವಿಶ್ವಾಸಿಗಳ ಬಳಿ ಮಹಾ ಅಸಂತೃಪ್ತಿಯ ವಿಷಯವಾಗಿದೆ. ಈ ರೀತಿ ಅಲ್ಲಾಹು ಎಲ್ಲಾ ಅಹಂಕಾರಿಗಳ ಮತ್ತು ಗರ್ವಿಷ್ಠರ ಹೃದಯಗಳಿಗೆ ಮೊಹರು ಹಾಕುತ್ತಾನೆ. | ٱلَّذِينَ يُجَٰدِلُونَ فِىٓ ءَايَٰتِ ٱللَّهِ بِغَيْرِ سُلْطَٰنٍ أَتَىٰهُمْ ۖ كَبُرَ مَقْتًا عِندَ ٱللَّهِ وَعِندَ ٱلَّذِينَ ءَامَنُوا۟ ۚ كَذَٰلِكَ يَطْبَعُ ٱللَّهُ عَلَىٰ كُلِّ قَلْبِ مُتَكَبِّرٍۢ جَبَّارٍۢ. ﴿35﴾ |
| 36 ಫರೋಹ ಹೇಳಿದನು: “ಓ ಹಾಮಾನ್! ನನಗೆ ಒಂದು ಗೋಪುರವನ್ನು ನಿರ್ಮಿಸಿಕೊಡು. ನಾನು ಆ ಬಾಗಿಲುಗಳಿಗೆ ತಲುಪುವುದಕ್ಕಾಗಿ. | وَقَالَ فِرْعَوْنُ يَٰهَٰمَٰنُ ٱبْنِ لِى صَرْحًۭا لَّعَلِّىٓ أَبْلُغُ ٱلْأَسْبَٰبَ. ﴿36﴾ |
| 37 ಅಂದರೆ ಆಕಾಶಗಳ ಬಾಗಿಲುಗಳಿಗೆ. ನನಗೆ ಮೂಸಾನ ದೇವನನ್ನು ಇಣುಕಿ ನೋಡಬೇಕು. ನಿಶ್ಚಯವಾಗಿಯೂ ಅವನು ಸುಳ್ಳು ಹೇಳುತ್ತಿದ್ದಾನೆಂದು ನಾನು ಭಾವಿಸುತ್ತಿದ್ದೇನೆ.” ಈ ರೀತಿ ಫರೋಹನಿಗೆ ಅವನ ದುಷ್ಕೃತ್ಯವನ್ನು ಅಲಂಕರಿಸಿ ತೋರಿಸಲಾಗಿದೆ ಮತ್ತು ಅವನನ್ನು ನೇರ ಮಾರ್ಗದಿಂದ ತಡೆಯಲಾಗಿದೆ. ಫರೋಹನ (ಎಲ್ಲಾ) ತಂತ್ರಗಾರಿಕೆಗಳು ನಷ್ಟದಲ್ಲೇ ಇವೆ. | أَسْبَٰبَ ٱلسَّمَٰوَٰتِ فَأَطَّلِعَ إِلَىٰٓ إِلَٰهِ مُوسَىٰ وَإِنِّى لَأَظُنُّهُۥ كَٰذِبًۭا ۚ وَكَذَٰلِكَ زُيِّنَ لِفِرْعَوْنَ سُوٓءُ عَمَلِهِۦ وَصُدَّ عَنِ ٱلسَّبِيلِ ۚ وَمَا كَيْدُ فِرْعَوْنَ إِلَّا فِى تَبَابٍۢ. ﴿37﴾ |
| 38 ಆ ಸತ್ಯವಿಶ್ವಾಸಿ ವ್ಯಕ್ತಿ ಹೇಳಿದರು: “ಓ ನನ್ನ ಜನರೇ! ನನ್ನನ್ನು ಅನುಸರಿಸಿರಿ! ನಾನು ನಿಮಗೆ ಒಳಿತನ ಮಾರ್ಗವನ್ನು ತೋರಿಸುತ್ತೇನೆ. | وَقَالَ ٱلَّذِىٓ ءَامَنَ يَٰقَوْمِ ٱتَّبِعُونِ أَهْدِكُمْ سَبِيلَ ٱلرَّشَادِ. ﴿38﴾ |
| 39 ಓ ನನ್ನ ಜನರೇ! ಈ ಇಹಲೋಕ ಜೀವನವು ಒಂದು (ತಾತ್ಕಾಲಿಕ) ಆನಂದವಾಗಿದೆ. ನಿಶ್ಚಯವಾಗಿಯೂ ಶಾಶ್ವತ ವಾಸದ ಭವನವು ಪರಲೋಕವಾಗಿದೆ. | يَٰقَوْمِ إِنَّمَا هَٰذِهِ ٱلْحَيَوٰةُ ٱلدُّنْيَا مَتَٰعٌۭ وَإِنَّ ٱلْءَاخِرَةَ هِىَ دَارُ ٱلْقَرَارِ. ﴿39﴾ |
| 40 ಯಾರು ಒಂದು ಕೆಡುಕು ಮಾಡುತ್ತಾರೋ ಅವನಿಗೆ ಅದಕ್ಕೆ ಸಮಾನವಾದ ಪ್ರತಿಫಲವನ್ನೇ ನೀಡಲಾಗುತ್ತದೆ. ಆದರೆ ಯಾರು ಸತ್ಯವಿಶ್ವಾಸಿಯಾಗಿದ್ದು ಸತ್ಕರ್ಮವೆಸಗುತ್ತಾರೋ ಅವರು—ಪುರುಷರಾಗಿದ್ದರೂ ಸ್ತ್ರೀಯರಾಗಿದ್ದರೂ—ಸ್ವರ್ಗವನ್ನು ಪ್ರವೇಶಿಸುವರು. ಅಲ್ಲಿ ಅವರಿಗೆ ಲೆಕ್ಕವಿಲ್ಲದೆ ಉಪಜೀವನವನ್ನು ಒದಗಿಸಲಾಗುವುದು. | مَنْ عَمِلَ سَيِّئَةًۭ فَلَا يُجْزَىٰٓ إِلَّا مِثْلَهَا ۖ وَمَنْ عَمِلَ صَٰلِحًۭا مِّن ذَكَرٍ أَوْ أُنثَىٰ وَهُوَ مُؤْمِنٌۭ فَأُو۟لَٰٓئِكَ يَدْخُلُونَ ٱلْجَنَّةَ يُرْزَقُونَ فِيهَا بِغَيْرِ حِسَابٍۢ. ﴿40﴾ |
| 41 ಓ ನನ್ನ ಜನರೇ! ಇದೆಂತಹ ಸಂಗತಿ? ನಾನು ನಿಮ್ಮನ್ನು ಮೋಕ್ಷದ ಕಡೆಗೆ ಕರೆಯುತ್ತಿದ್ದೇನೆ. ಆದರೆ ನೀವು ನನ್ನನ್ನು ನರಕಕ್ಕೆ ಕರೆಯುತ್ತಿದ್ದೀರಿ! | ۞ وَيَٰقَوْمِ مَا لِىٓ أَدْعُوكُمْ إِلَى ٱلنَّجَوٰةِ وَتَدْعُونَنِىٓ إِلَى ٱلنَّارِ. ﴿41﴾ |
| 42 ನಾನು ಅಲ್ಲಾಹನನ್ನು ನಿಷೇಧಿಸಲು ಮತ್ತು ನನಗೆ ಯಾವುದೇ ತಿಳುವಳಿಕೆಯಿಲ್ಲದ್ದನ್ನು ಅವನೊಂದಿಗೆ ಸಹಭಾಗಿಯನ್ನಾಗಿ ಮಾಡಲು ನೀವು ನನ್ನನ್ನು ಕರೆಯುತ್ತಿದ್ದೀರಿ! ಆದರೆ ನಾನು ನಿಮ್ಮನ್ನು ಪ್ರಬಲನು ಮತ್ತು ಕ್ಷಮಿಸುವವನಾದ ಅಲ್ಲಾಹನ ಕಡೆಗೆ ಕರೆಯುತ್ತಿದ್ದೇನೆ. | تَدْعُونَنِى لِأَكْفُرَ بِٱللَّهِ وَأُشْرِكَ بِهِۦ مَا لَيْسَ لِى بِهِۦ عِلْمٌۭ وَأَنَا۠ أَدْعُوكُمْ إِلَى ٱلْعَزِيزِ ٱلْغَفَّٰرِ. ﴿42﴾ |
| 43 ನೀವು ನನ್ನನ್ನು ಯಾವುದರ ಕಡೆಗೆ ಕರೆಯುತ್ತಿದ್ದೀರೋ ಅದು ಇಹಲೋಕದಲ್ಲಿ ಅಥವಾ ಪರಲೋಕದಲ್ಲಿ ಯಾವುದೇ ಪ್ರಾರ್ಥನೆಗೆ ಅರ್ಹವಲ್ಲ ಮತ್ತು ನಾವು ಮರಳಿ ಹೋಗಬೇಕಾದುದು ಅಲ್ಲಾಹನ ಬಳಿಗಾಗಿದೆ ಹಾಗೂ ಎಲ್ಲೆ ಮೀರಿದವರು ನರಕವಾಸಿಗಳಾಗಿದ್ದಾರೆ ಎಂಬುದು ದೃಢಪಟ್ಟ ವಿಷಯವಾಗಿದೆ. | لَا جَرَمَ أَنَّمَا تَدْعُونَنِىٓ إِلَيْهِ لَيْسَ لَهُۥ دَعْوَةٌۭ فِى ٱلدُّنْيَا وَلَا فِى ٱلْءَاخِرَةِ وَأَنَّ مَرَدَّنَآ إِلَى ٱللَّهِ وَأَنَّ ٱلْمُسْرِفِينَ هُمْ أَصْحَٰبُ ٱلنَّارِ. ﴿43﴾ |
| 44 ನಾನು (ಈಗ) ನಿಮ್ಮೊಂದಿಗೆ ಹೇಳುವ ಈ ವಿಷಯಗಳು ಮುಂದೆ ನಿಮಗೆ ನೆನಪಿಗೆ ಬರಲಿದೆ. ನಾನು ನನ್ನ ಕಾರ್ಯವನ್ನು ಅಲ್ಲಾಹನಿಗೆ ವಹಿಸಿಕೊಡುತ್ತೇನೆ. ನಿಶ್ಚಯವಾಗಿಯೂ ಅಲ್ಲಾಹು ದಾಸರನ್ನು ನೋಡುತ್ತಿದ್ದಾನೆ.” | فَسَتَذْكُرُونَ مَآ أَقُولُ لَكُمْ ۚ وَأُفَوِّضُ أَمْرِىٓ إِلَى ٱللَّهِ ۚ إِنَّ ٱللَّهَ بَصِيرٌۢ بِٱلْعِبَادِ. ﴿44﴾ |
| 45 ಆದ್ದರಿಂದ ಅಲ್ಲಾಹು ಆ ವ್ಯಕ್ತಿಯನ್ನು ಅವರ ಎಲ್ಲಾ ತಂತ್ರಗಾರಿಕೆಗಳ ದುಷ್ಪರಿಣಾಮಗಳಿಂದ ರಕ್ಷಿಸಿದನು. ಫರೋಹನ ಜನರನ್ನು ಕಠೋರ ಶಿಕ್ಷೆಯು ಆವರಿಸಿಕೊಂಡಿತು. | فَوَقَىٰهُ ٱللَّهُ سَيِّـَٔاتِ مَا مَكَرُوا۟ ۖ وَحَاقَ بِـَٔالِ فِرْعَوْنَ سُوٓءُ ٱلْعَذَابِ. ﴿45﴾ |
|
46
ನರಕಾಗ್ನಿ! ಬೆಳಿಗ್ಗೆ ಮತ್ತು ಸಂಜೆ ಅವರನ್ನು ಅದರ ಮುಂದೆ ಪ್ರದರ್ಶಿಸಲಾಗುವುದು.[1] ಅಂತ್ಯಸಮಯವು ಸಂಭವಿಸುವ ದಿನ “ಫರೋಹನ ಕುಟುಂಬವನ್ನು ಅತಿಕ್ರೂರ ಶಿಕ್ಷೆಗೆ ಹಾಕಿರಿ” (ಎಂದು ಆದೇಶಿಸಲಾಗುವುದು).
[1] ಬರ್ಝಕ್ (ಸತ್ತ ನಂತರ ಪುನರುತ್ಥಾನ ದಿನದ ತನಕವಿರುವ ಅವಧಿ) ನಲ್ಲಿ ಇವರಿಗೆ ದಿನನಿತ್ಯ ಬೆಳಗ್ಗೆ ಮತ್ತು ಸಂಜೆ ನರಕವನ್ನು ತೋರಿಸಲಾಗುವುದು. ಸಮಾಧಿಯಲ್ಲಿ ಸತ್ಯನಿಷೇಧಿಗಳನ್ನು ಶಿಕ್ಷಿಸಲಾಗುತ್ತದೆ ಎಂಬುದಕ್ಕೆ ಈ ವಚನವು ಪುರಾವೆಯಾಗಿದೆ.
|
ٱلنَّارُ يُعْرَضُونَ عَلَيْهَا غُدُوًّۭا وَعَشِيًّۭا ۖ وَيَوْمَ تَقُومُ ٱلسَّاعَةُ أَدْخِلُوٓا۟ ءَالَ فِرْعَوْنَ أَشَدَّ ٱلْعَذَابِ. ﴿46﴾ |
| 47 ಅವರು ನರಕದಲ್ಲಿ ಪರಸ್ಪರ ತರ್ಕಿಸುವ ಸಂದರ್ಭ. ಆಗ ಬಲಹೀನರು ಅಹಂಕಾರಿಗಳೊಡನೆ ಹೇಳುವರು: “ನಿಶ್ಚಯವಾಗಿಯೂ ನಾವು ನಿಮ್ಮನ್ನು ಹಿಂಬಾಲಿಸಿದೆವು. ಆದ್ದರಿಂದ ನರಕ ಶಿಕ್ಷೆಯ ಒಂದು ಪಾಲನ್ನು ನಮ್ಮಿಂದ ದೂರೀಕರಿಸಲು ನಿಮಗೆ ಸಾಧ್ಯವೇ?” | وَإِذْ يَتَحَآجُّونَ فِى ٱلنَّارِ فَيَقُولُ ٱلضُّعَفَٰٓؤُا۟ لِلَّذِينَ ٱسْتَكْبَرُوٓا۟ إِنَّا كُنَّا لَكُمْ تَبَعًۭا فَهَلْ أَنتُم مُّغْنُونَ عَنَّا نَصِيبًۭا مِّنَ ٱلنَّارِ. ﴿47﴾ |
| 48 ಅಹಂಕಾರಿಗಳು ಹೇಳುವರು: “ನಾವೆಲ್ಲರೂ ನರಕದಲ್ಲಿದ್ದೇವೆ. ನಿಶ್ಚಯವಾಗಿಯೂ ಅಲ್ಲಾಹು ಅವನ ದಾಸರ ನಡುವೆ ತೀರ್ಪು ನೀಡಿದ್ದಾನೆ!” | قَالَ ٱلَّذِينَ ٱسْتَكْبَرُوٓا۟ إِنَّا كُلٌّۭ فِيهَآ إِنَّ ٱللَّهَ قَدْ حَكَمَ بَيْنَ ٱلْعِبَادِ. ﴿48﴾ |
| 49 ನರಕದಲ್ಲಿರುವವರು ನರಕದ ಕಾವಲುಗಾರರೊಡನೆ ಹೇಳುವರು: “ನೀವು ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಕರೆದು ಪ್ರಾರ್ಥಿಸಿರಿ! ಅವನು ನಮಗೆ ಒಂದು ದಿನದ ಮಟ್ಟಿಗಾದರೂ ಶಿಕ್ಷೆಯಲ್ಲಿ ರಿಯಾಯಿತಿ ನೀಡಲಿ.” | وَقَالَ ٱلَّذِينَ فِى ٱلنَّارِ لِخَزَنَةِ جَهَنَّمَ ٱدْعُوا۟ رَبَّكُمْ يُخَفِّفْ عَنَّا يَوْمًۭا مِّنَ ٱلْعَذَابِ. ﴿49﴾ |
| 50 ಕಾವಲುಗಾರರು ಕೇಳುವರು: “ನಿಮ್ಮ ಬಳಿಗೆ ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಸಂದೇಶವಾಹಕರುಗಳು ಬಂದಿರಲಿಲ್ಲವೇ?” ಅವರು ಉತ್ತರಿಸುವರು: “ಹೌದು.” ಕಾವಲುಗಾರರು ಹೇಳುವರು: “ಹಾಗಾದರೆ ನೀವೇ ಕರೆದು ಪ್ರಾರ್ಥಿಸಿ. ಸತ್ಯನಿಷೇಧಿಗಳ ಪ್ರಾರ್ಥನೆಯು ವ್ಯರ್ಥವಲ್ಲದೆ ಇನ್ನೇನೂ ಅಲ್ಲ.” | قَالُوٓا۟ أَوَلَمْ تَكُ تَأْتِيكُمْ رُسُلُكُم بِٱلْبَيِّنَٰتِ ۖ قَالُوا۟ بَلَىٰ ۚ قَالُوا۟ فَٱدْعُوا۟ ۗ وَمَا دُعَٰٓؤُا۟ ٱلْكَٰفِرِينَ إِلَّا فِى ضَلَٰلٍ. ﴿50﴾ |
| 51 ನಿಶ್ಚಯವಾಗಿಯೂ ನಾವು ನಮ್ಮ ಸಂದೇಶವಾಹಕರುಗಳಿಗೆ ಮತ್ತು ಸತ್ಯವಿಶ್ವಾಸಿಗಳಿಗೆ ಇಹಲೋಕದಲ್ಲೂ, ಸಾಕ್ಷಿಗಳು ಎದ್ದು ನಿಲ್ಲುವ ದಿನದಲ್ಲೂ (ಪುನರುತ್ಥಾನ ದಿನದಲ್ಲೂ) ಸಹಾಯ ಮಾಡುವೆವು. | إِنَّا لَنَنصُرُ رُسُلَنَا وَٱلَّذِينَ ءَامَنُوا۟ فِى ٱلْحَيَوٰةِ ٱلدُّنْيَا وَيَوْمَ يَقُومُ ٱلْأَشْهَٰدُ. ﴿51﴾ |
| 52 ಅಕ್ರಮಿಗಳಿಗೆ ಅವರ ನೆಪಗಳು ಉಪಕಾರ ಮಾಡದ ದಿನ! ಅವರಿಗೆ ಶಾಪವಿದೆ ಮತ್ತು ಅವರಿಗೆ ನಿಕೃಷ್ಟ ಭವನವಿದೆ. | يَوْمَ لَا يَنفَعُ ٱلظَّٰلِمِينَ مَعْذِرَتُهُمْ ۖ وَلَهُمُ ٱللَّعْنَةُ وَلَهُمْ سُوٓءُ ٱلدَّارِ. ﴿52﴾ |
| 53 ನಾವು ಮೂಸಾರಿಗೆ ಸನ್ಮಾರ್ಗವನ್ನು ನೀಡಿದೆವು ಮತ್ತು ಇಸ್ರಾಯೇಲ್ ಮಕ್ಕಳನ್ನು ಗ್ರಂಥದ ವಾರಸುದಾರರಾಗಿ ಮಾಡಿದೆವು. | وَلَقَدْ ءَاتَيْنَا مُوسَى ٱلْهُدَىٰ وَأَوْرَثْنَا بَنِىٓ إِسْرَٰٓءِيلَ ٱلْكِتَٰبَ. ﴿53﴾ |
| 54 ಅದು ಬುದ್ಧಿವಂತರಿಗೆ ಸನ್ಮಾರ್ಗದರ್ಶಿ ಮತ್ತು ಉಪದೇಶವಾಗಿತ್ತು. | هُدًۭى وَذِكْرَىٰ لِأُو۟لِى ٱلْأَلْبَٰبِ. ﴿54﴾ |
| 55 ಆದ್ದರಿಂದ ನೀವು ತಾಳ್ಮೆಯಿಂದಿರಿ. ನಿಶ್ಚಯವಾಗಿಯೂ ಅಲ್ಲಾಹನ ವಾಗ್ದಾನವು ಸತ್ಯವಾಗಿದೆ. ನಿಮ್ಮ ತಪ್ಪಿಗಾಗಿ ಕ್ಷಮೆಯಾಚಿಸಿರಿ. ಸಂಜೆ ಹಾಗೂ ಮುಂಜಾನೆ ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಸ್ತುತಿಸುತ್ತಾ ಅವರ ಪರಿಶುದ್ಧಿಯನ್ನು ಕೊಂಡಾಡಿರಿ. | فَٱصْبِرْ إِنَّ وَعْدَ ٱللَّهِ حَقٌّۭ وَٱسْتَغْفِرْ لِذَنۢبِكَ وَسَبِّحْ بِحَمْدِ رَبِّكَ بِٱلْعَشِىِّ وَٱلْإِبْكَٰرِ. ﴿55﴾ |
|
56
ನಿಶ್ಚಯವಾಗಿಯೂ ತಮ್ಮ ಬಳಿಗೆ ಬಂದ ಯಾವುದೇ ಸ್ಪಷ್ಟ ಪುರಾವೆಯಿಲ್ಲದೆ ಅಲ್ಲಾಹನ ವಚನಗಳ ವಿಷಯದಲ್ಲಿ ತರ್ಕಿಸುವವರು ಯಾರೋ ಅವರ ಹೃದಯಗಳಲ್ಲಿ ಅಹಂಕಾರವಲ್ಲದೆ ಬೇರೇನೂ ಇಲ್ಲ. ಅವರು ಅಲ್ಲಿಗೆ ತಲುಪುವುದೂ ಇಲ್ಲ.[1] ಆದ್ದರಿಂದ ನೀವು ಅಲ್ಲಾಹನಲ್ಲಿ ಅಭಯ ಯಾಚಿಸಿರಿ. ನಿಶ್ಚಯವಾಗಿಯೂ ಅವನು ಎಲ್ಲವನ್ನು ಕೇಳುವವನು ಮತ್ತು ನೋಡುವವನಾಗಿದ್ದಾನೆ.
[1] ಅಂದರೆ ಸತ್ಯವು ನಾಶವಾಗಬೇಕು ಮತ್ತು ಅಸತ್ಯವು ರಾರಾಜಿಸಬೇಕೆಂಬ ಅವರ ಉದ್ದೇಶವು ಈಡೇರುವುದಿಲ್ಲ.
|
إِنَّ ٱلَّذِينَ يُجَٰدِلُونَ فِىٓ ءَايَٰتِ ٱللَّهِ بِغَيْرِ سُلْطَٰنٍ أَتَىٰهُمْ ۙ إِن فِى صُدُورِهِمْ إِلَّا كِبْرٌۭ مَّا هُم بِبَٰلِغِيهِ ۚ فَٱسْتَعِذْ بِٱللَّهِ ۖ إِنَّهُۥ هُوَ ٱلسَّمِيعُ ٱلْبَصِيرُ. ﴿56﴾ |
| 57 ನಿಶ್ಚಯವಾಗಿಯೂ ಭೂಮ್ಯಾಕಾಶಗಳ ಸೃಷ್ಟಿಯು ಮನುಷ್ಯನನ್ನು ಸೃಷ್ಟಿಸುವುದಕ್ಕಿಂತಲೂ ಎಷ್ಟೋ ದೊಡ್ಡದಾಗಿದೆ. ಆದರೆ ಜನರಲ್ಲಿ ಹೆಚ್ಚಿನವರು ಅರ್ಥಮಾಡಿಕೊಳ್ಳುವುದಿಲ್ಲ. | لَخَلْقُ ٱلسَّمَٰوَٰتِ وَٱلْأَرْضِ أَكْبَرُ مِنْ خَلْقِ ٱلنَّاسِ وَلَٰكِنَّ أَكْثَرَ ٱلنَّاسِ لَا يَعْلَمُونَ. ﴿57﴾ |
| 58 ಕಣ್ಣು ಕಾಣುವವನು ಮತ್ತು ಕಣ್ಣು ಕಾಣದವನು ಸಮಾನರಲ್ಲ. ಸತ್ಯವಿಶ್ವಾಸವಿಟ್ಟು ಸತ್ಕರ್ಮವೆಸಗಿದವರು ಮತ್ತು ದುಷ್ಕರ್ಮವೆಸಗಿದವರು ಸಮಾನರಲ್ಲ. ನೀವು ಸ್ವಲ್ಪವೇ ಉಪದೇಶವನ್ನು ಸ್ವೀಕರಿಸುತ್ತೀರಿ. | وَمَا يَسْتَوِى ٱلْأَعْمَىٰ وَٱلْبَصِيرُ وَٱلَّذِينَ ءَامَنُوا۟ وَعَمِلُوا۟ ٱلصَّٰلِحَٰتِ وَلَا ٱلْمُسِىٓءُ ۚ قَلِيلًۭا مَّا تَتَذَكَّرُونَ. ﴿58﴾ |
| 59 ನಿಶ್ಚಯವಾಗಿಯೂ ಅಂತ್ಯಸಮಯವು ಬಂದೇ ಬರುತ್ತದೆ. ಅದರಲ್ಲಿ ಸಂಶಯವೇ ಇಲ್ಲ. ಆದರೆ ಜನರಲ್ಲಿ ಹೆಚ್ಚಿನವರು ವಿಶ್ವಾಸವಿಡುವುದಿಲ್ಲ. | إِنَّ ٱلسَّاعَةَ لَءَاتِيَةٌۭ لَّا رَيْبَ فِيهَا وَلَٰكِنَّ أَكْثَرَ ٱلنَّاسِ لَا يُؤْمِنُونَ. ﴿59﴾ |
|
60
ನಿಮ್ಮ ಪರಿಪಾಲಕನು (ಅಲ್ಲಾಹು) ಹೇಳಿದ್ದಾನೆ: “ನೀವು ನನ್ನನ್ನು ಕರೆದು ಪ್ರಾರ್ಥಿಸಿರಿ. ನಾನು ನಿಮಗೆ ಉತ್ತರ ನೀಡುತ್ತೇನೆ. ನಿಶ್ಚಯವಾಗಿಯೂ ನನ್ನನ್ನು ಆರಾಧಿಸುವ ವಿಷಯದಲ್ಲಿ ಅಹಂಕಾರ ತೋರುವವರು ಯಾರೋ ಅವರು ಸದ್ಯವೇ ಅವಮಾನಿತರಾಗಿ ನರಕವನ್ನು ಪ್ರವೇಶಿಸುವರು.”[1]
[1] ಪ್ರಾರ್ಥನೆ ಆರಾಧನೆಯಾಗಿದೆ ಮತ್ತು ಅದು ಅಲ್ಲಾಹನಿಗೆ ಮಾತ್ರ ಸಲ್ಲತಕ್ಕದ್ದೆಂದು ಈ ವಚನವು ತಿಳಿಸುತ್ತದೆ.
|
وَقَالَ رَبُّكُمُ ٱدْعُونِىٓ أَسْتَجِبْ لَكُمْ ۚ إِنَّ ٱلَّذِينَ يَسْتَكْبِرُونَ عَنْ عِبَادَتِى سَيَدْخُلُونَ جَهَنَّمَ دَاخِرِينَ. ﴿60﴾ |
| 61 ಅಲ್ಲಾಹು ನಿಮಗೆ ರಾತ್ರಿಯನ್ನು ವಿಶ್ರಾಂತಿ ಪಡೆಯಲು ಮತ್ತು ಹಗಲನ್ನು ಪ್ರಕಾಶಮಾನವಾಗಿ ಮಾಡಿಕೊಟ್ಟನು. ನಿಶ್ಚಯವಾಗಿಯೂ ಅಲ್ಲಾಹನಿಗೆ ಜನರೊಡನೆ ಅತ್ಯಂತ ಔದಾರ್ಯವಿದೆ. ಆದರೆ ಜನರಲ್ಲಿ ಹೆಚ್ಚಿನವರು ಕೃತಜ್ಞರಾಗುವುದಿಲ್ಲ. | ٱللَّهُ ٱلَّذِى جَعَلَ لَكُمُ ٱلَّيْلَ لِتَسْكُنُوا۟ فِيهِ وَٱلنَّهَارَ مُبْصِرًا ۚ إِنَّ ٱللَّهَ لَذُو فَضْلٍ عَلَى ٱلنَّاسِ وَلَٰكِنَّ أَكْثَرَ ٱلنَّاسِ لَا يَشْكُرُونَ. ﴿61﴾ |
| 62 ಅವನೇ ನಿಮ್ಮ ಪರಿಪಾಲಕನಾದ ಅಲ್ಲಾಹು. ಅವನು ಎಲ್ಲಾ ವಸ್ತುಗಳ ಸೃಷ್ಟಿಕರ್ತನು. ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. ಆದರೂ ನೀವು (ಸನ್ಮಾರ್ಗದಿಂದ) ತಪ್ಪಿಸಲ್ಪಡುವುದು ಹೇಗೆ? | ذَٰلِكُمُ ٱللَّهُ رَبُّكُمْ خَٰلِقُ كُلِّ شَىْءٍۢ لَّآ إِلَٰهَ إِلَّا هُوَ ۖ فَأَنَّىٰ تُؤْفَكُونَ. ﴿62﴾ |
| 63 ಈ ರೀತಿ ಅಲ್ಲಾಹನ ವಚನಗಳನ್ನು ನಿಷೇಧಿಸಿದವರು (ಸನ್ಮಾರ್ಗದಿಂದ) ತಪ್ಪಿ ಹೋಗುತ್ತಿದ್ದಾರೆ. | كَذَٰلِكَ يُؤْفَكُ ٱلَّذِينَ كَانُوا۟ بِـَٔايَٰتِ ٱللَّهِ يَجْحَدُونَ. ﴿63﴾ |
| 64 ಅಲ್ಲಾಹು ನಿಮಗೋಸ್ಕರ ಭೂಮಿಯನ್ನು ವಾಸಸ್ಥಳವನ್ನಾಗಿ ಮತ್ತು ಆಕಾಶವನ್ನು ಮೇಲ್ಛಾವಣಿಯನ್ನಾಗಿ ಮಾಡಿಕೊಟ್ಟನು. ಅವನು ನಿಮಗೆ ರೂಪವನ್ನು ನೀಡಿದನು. ನಂತರ ನಿಮ್ಮ ರೂಪಗಳನ್ನು ಉತ್ತಮಗೊಳಿಸಿದನು. ಅವನು ನಿಮಗೆ ಉಪಜೀವನವಾಗಿ ಅತ್ಯುತ್ತಮ ವಸ್ತುಗಳನ್ನು ಒದಗಿಸಿದನು. ಅವನೇ ನಿಮ್ಮ ಪರಿಪಾಲಕವಾದ ಅಲ್ಲಾಹು. ಆದ್ದರಿಂದ ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹು ಸಮೃದ್ಧಪೂರ್ಣನಾಗಿದ್ದಾನೆ. | ٱللَّهُ ٱلَّذِى جَعَلَ لَكُمُ ٱلْأَرْضَ قَرَارًۭا وَٱلسَّمَآءَ بِنَآءًۭ وَصَوَّرَكُمْ فَأَحْسَنَ صُوَرَكُمْ وَرَزَقَكُم مِّنَ ٱلطَّيِّبَٰتِ ۚ ذَٰلِكُمُ ٱللَّهُ رَبُّكُمْ ۖ فَتَبَارَكَ ٱللَّهُ رَبُّ ٱلْعَٰلَمِينَ. ﴿64﴾ |
| 65 ಅವನು ಜೀವಂತವಿರುವವನು. ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. ಆದ್ದರಿಂದ ನಿಷ್ಕಂಳಕವಾಗಿ ಅವನನ್ನು ಆರಾಧಿಸುತ್ತಾ ಅವನನ್ನು ಕರೆದು ಪ್ರಾರ್ಥಿಸಿರಿ. ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನಿಗೆ ಸರ್ವಸ್ತುತಿ. | هُوَ ٱلْحَىُّ لَآ إِلَٰهَ إِلَّا هُوَ فَٱدْعُوهُ مُخْلِصِينَ لَهُ ٱلدِّينَ ۗ ٱلْحَمْدُ لِلَّهِ رَبِّ ٱلْعَٰلَمِينَ. ﴿65﴾ |
| 66 ಹೇಳಿರಿ: “ನನ್ನ ಪರಿಪಾಲಕನ (ಅಲ್ಲಾಹನ) ಕಡೆಯಿಂದ ನನಗೆ ಸಾಕ್ಷ್ಯಾಧಾರಗಳು ತಲುಪಿರುವುದರಿಂದ, ಅಲ್ಲಾಹನನ್ನು ಬಿಟ್ಟು ನೀವು ಕರೆದು ಪ್ರಾರ್ಥಿಸುತ್ತಿರುವ ದೇವರುಗಳನ್ನು ಆರಾಧಿಸಬಾರದೆಂದು ನನಗೆ ವಿರೋಧಿಸಲಾಗಿದೆ. ಸರ್ವಲೋಕಗಳ ಪರಿಪಾಲಕನಿಗೆ (ಅಲ್ಲಾಹನಿಗೆ) ಶರಣಾಗಬೇಕೆಂದು ನನಗೆ ಆಜ್ಞಾಪಿಸಲಾಗಿದೆ.” | ۞ قُلْ إِنِّى نُهِيتُ أَنْ أَعْبُدَ ٱلَّذِينَ تَدْعُونَ مِن دُونِ ٱللَّهِ لَمَّا جَآءَنِىَ ٱلْبَيِّنَٰتُ مِن رَّبِّى وَأُمِرْتُ أَنْ أُسْلِمَ لِرَبِّ ٱلْعَٰلَمِينَ. ﴿66﴾ |
| 67 ಅವನೇ ನಿಮ್ಮನ್ನು ಮಣ್ಣಿನಿಂದ, ನಂತರ ವೀರ್ಯದಿಂದ, ನಂತರ ಭ್ರೂಣದಿಂದ ಸೃಷ್ಟಿಸಿದವನು. ನಂತರ ಅವನು ನಿಮ್ಮನ್ನು ಒಂದು ಶಿಶುವನ್ನಾಗಿ ಹೊರತರುವನು. ನಂತರ ನೀವು ನಿಮ್ಮ ಪೂರ್ಣ ಯೌವನವನ್ನು ತಲುಪಿ, ನಂತರ ನೀವು ಮುದುಕರಾಗುವುದಕ್ಕಾಗಿ (ಅವನು ನಿಮ್ಮನ್ನು ಬೆಳೆಸುತ್ತಾನೆ). ನಿಮ್ಮಲ್ಲಿ ಕೆಲವರು ಇದಕ್ಕೆ ಮೊದಲೇ ಮರಣವನ್ನಪ್ಪುತ್ತಾರೆ. ನೀವು ನಿಮ್ಮ ನಿಶ್ಚಿತ ಅವಧಿಯನ್ನು ತಲುಪುವುದಕ್ಕಾಗಿ (ಅವನು ನಿಮ್ಮನ್ನು ಬಿಟ್ಟುಬಿಡುತ್ತಾನೆ). ನೀವು ಆಲೋಚಿಸುವುದಕ್ಕಾಗಿ. | هُوَ ٱلَّذِى خَلَقَكُم مِّن تُرَابٍۢ ثُمَّ مِن نُّطْفَةٍۢ ثُمَّ مِنْ عَلَقَةٍۢ ثُمَّ يُخْرِجُكُمْ طِفْلًۭا ثُمَّ لِتَبْلُغُوٓا۟ أَشُدَّكُمْ ثُمَّ لِتَكُونُوا۟ شُيُوخًۭا ۚ وَمِنكُم مَّن يُتَوَفَّىٰ مِن قَبْلُ ۖ وَلِتَبْلُغُوٓا۟ أَجَلًۭا مُّسَمًّۭى وَلَعَلَّكُمْ تَعْقِلُونَ. ﴿67﴾ |
| 68 ಅವನೇ ಜೀವ ಮತ್ತು ಮರಣವನ್ನು ನೀಡುವವನು. ಅವನು ಒಂದು ವಿಷಯವನ್ನು ತೀರ್ಮಾನಿಸಿದರೆ, ಅದರೊಂದಿಗೆ “ಉಂಟಾಗು” ಎನ್ನುತ್ತಾನೆ. ತಕ್ಷಣ ಅದು ಉಂಟಾಗುತ್ತದೆ! | هُوَ ٱلَّذِى يُحْىِۦ وَيُمِيتُ ۖ فَإِذَا قَضَىٰٓ أَمْرًۭا فَإِنَّمَا يَقُولُ لَهُۥ كُن فَيَكُونُ. ﴿68﴾ |
| 69 ಅಲ್ಲಾಹನ ವಚನಗಳ ವಿಷಯದಲ್ಲಿ ತರ್ಕಿಸುವವರನ್ನು ನೀವು ನೋಡಿಲ್ಲವೇ? ಅವರು ತಿರುಗಿಸಲ್ಪಡುತ್ತಿರುವುದು ಹೇಗೆ? | أَلَمْ تَرَ إِلَى ٱلَّذِينَ يُجَٰدِلُونَ فِىٓ ءَايَٰتِ ٱللَّهِ أَنَّىٰ يُصْرَفُونَ. ﴿69﴾ |
| 70 ಅವರು ಗ್ರಂಥವನ್ನು ಮತ್ತು ನಾವು ನಮ್ಮ ಸಂದೇಶವಾಹಕರೊಡನೆ ಕಳುಹಿಸಿರುವುದನ್ನು ನಿಷೇಧಿಸಿದ್ದಾರೆ. ಅವರು ಸದ್ಯವೇ ತಿಳಿಯುವರು. | ٱلَّذِينَ كَذَّبُوا۟ بِٱلْكِتَٰبِ وَبِمَآ أَرْسَلْنَا بِهِۦ رُسُلَنَا ۖ فَسَوْفَ يَعْلَمُونَ. ﴿70﴾ |
| 71 ಅವರ ಕೊರಳುಗಳಲ್ಲಿ ಬೇಡಿಗಳು ಮತ್ತು ಸಂಕೋಲೆಗಳಿರುವ ಸ್ಥಿತಿಯಲ್ಲಿ ಅವರನ್ನು ಎಳೆದೊಯ್ಯಲಾಗುವುದು. | إِذِ ٱلْأَغْلَٰلُ فِىٓ أَعْنَٰقِهِمْ وَٱلسَّلَٰسِلُ يُسْحَبُونَ. ﴿71﴾ |
| 72 ಕುದಿಯುವ ನೀರಿನಲ್ಲಿ. ನಂತರ ಅವರನ್ನು ನರಕಾಗ್ನಿಯಲ್ಲಿ ಉರಿಸಲಾಗುವುದು. | فِى ٱلْحَمِيمِ ثُمَّ فِى ٱلنَّارِ يُسْجَرُونَ. ﴿72﴾ |
| 73 ನಂತರ ಅವರೊಂದಿಗೆ ಕೇಳಲಾಗುವುದು: “ನೀವು (ಅಲ್ಲಾಹನಿಗೆ) ಸಹಭಾಗಿಗಳನ್ನಾಗಿ ಮಾಡಿದವರು (ನಿಮ್ಮ ದೇವರುಗಳು) ಎಲ್ಲಿದ್ದಾರೆ? | ثُمَّ قِيلَ لَهُمْ أَيْنَ مَا كُنتُمْ تُشْرِكُونَ. ﴿73﴾ |
| 74 ಅಲ್ಲಾಹನನ್ನು ಬಿಟ್ಟು.” ಅವರು ಹೇಳುವರು: “ಅವರು ನಮ್ಮನ್ನು ತೊರೆದಿದ್ದಾರೆ. ಅಲ್ಲ, ವಾಸ್ತವವಾಗಿ ನಾವು ಇದಕ್ಕೆ ಮೊದಲು ಯಾರನ್ನೂ ಕರೆದು ಪ್ರಾರ್ಥಿಸುತ್ತಿರಲಿಲ್ಲ.” ಈ ರೀತಿ ಅಲ್ಲಾಹು ಸತ್ಯನಿಷೇಧಿಗಳನ್ನು ದಾರಿತಪ್ಪಿಸುವನು. | مِن دُونِ ٱللَّهِ ۖ قَالُوا۟ ضَلُّوا۟ عَنَّا بَل لَّمْ نَكُن نَّدْعُوا۟ مِن قَبْلُ شَيْـًۭٔا ۚ كَذَٰلِكَ يُضِلُّ ٱللَّهُ ٱلْكَٰفِرِينَ. ﴿74﴾ |
| 75 (ಅವರೊಡನೆ ಹೇಳಲಾಗುವುದು): “ಈ ಶಿಕ್ಷೆಯು ಏಕೆಂದರೆ ನೀವು ಭೂಮಿಯಲ್ಲಿ ಅನ್ಯಾಯವಾಗಿ ಮೆರೆಯುತ್ತಿದ್ದಿರಿ ಮತ್ತು ಅಹಂಕಾರದಿಂದ ವರ್ತಿಸುತ್ತಿದ್ದಿರಿ. | ذَٰلِكُم بِمَا كُنتُمْ تَفْرَحُونَ فِى ٱلْأَرْضِ بِغَيْرِ ٱلْحَقِّ وَبِمَا كُنتُمْ تَمْرَحُونَ. ﴿75﴾ |
| 76 ನರಕದ ಬಾಗಿಲುಗಳನ್ನು ಅದರಲ್ಲಿ ಶಾಶ್ವತವಾಗಿ ವಾಸಿಸುವುದಕ್ಕಾಗಿ ಪ್ರವೇಶಿಸಿರಿ. ಅಹಂಕಾರಿಗಳ ವಾಸಸ್ಥಳವು ಬಹಳ ನಿಕೃಷ್ಟವಾಗಿದೆ!” | ٱدْخُلُوٓا۟ أَبْوَٰبَ جَهَنَّمَ خَٰلِدِينَ فِيهَا ۖ فَبِئْسَ مَثْوَى ٱلْمُتَكَبِّرِينَ. ﴿76﴾ |
| 77 ನೀವು ತಾಳ್ಮೆಯಿಂದಿರಿ. ನಿಶ್ಚಯವಾಗಿಯೂ ಅಲ್ಲಾಹನ ವಾಗ್ದಾನವು ಸತ್ಯವಾಗಿದೆ. ನಾವು ಅವರಿಗೆ ವಾಗ್ದಾನ ಮಾಡುವ ಶಿಕ್ಷೆಗಳಲ್ಲಿ ಕೆಲವನ್ನು ನಾವು ನಿಮಗೆ ತೋರಿಸಿಕೊಟ್ಟರೂ ಅಥವಾ (ಅದಕ್ಕಿಂತ ಮೊದಲೇ) ನಾವು ನಿಮ್ಮನ್ನು ಮೃತಪಡಿಸಿದರೂ ಅವರು ಮರಳಿ ಬರುವುದು ನಮ್ಮ ಬಳಿಗೇ ಆಗಿದೆ. | فَٱصْبِرْ إِنَّ وَعْدَ ٱللَّهِ حَقٌّۭ ۚ فَإِمَّا نُرِيَنَّكَ بَعْضَ ٱلَّذِى نَعِدُهُمْ أَوْ نَتَوَفَّيَنَّكَ فَإِلَيْنَا يُرْجَعُونَ. ﴿77﴾ |
| 78 ನಿಮಗಿಂತ ಮುಂಚೆ ನಾವು ಅನೇಕ ಸಂದೇಶವಾಹಕರುಗಳನ್ನು ಕಳುಹಿಸಿದ್ದೇವೆ. ಅವರಲ್ಲಿ ಕೆಲವರ (ಸಮಾಚಾರಗಳನ್ನು) ನಾವು ನಿಮಗೆ ವಿವರಿಸಿದ್ದೇವೆ. ಅವರಲ್ಲಿ ಬೇರೆ ಕೆಲವರ ಬಗ್ಗೆ ನಾವು ನಿಮಗೆ ವಿವರಿಸಿಲ್ಲ. ಅಲ್ಲಾಹನ ಅಪ್ಪಣೆಯಿಲ್ಲದೆ ಒಂದು ದೃಷ್ಟಾಂತವನ್ನು ತರಲು ಯಾವುದೇ ಸಂದೇಶವಾಹಕರಿಗೂ ಸಾಧ್ಯವಿಲ್ಲ. ನಂತರ ಅಲ್ಲಾಹನ ಆಜ್ಞೆ ಬರುವಾಗ ನ್ಯಾಯಯುತವಾಗಿ ತೀರ್ಪು ನೀಡಲಾಗುವುದು. ಅಲ್ಲಿ ಮಿಥ್ಯವಾದಿಗಳು ನಷ್ಟ ಹೊಂದಿದವರಾಗುವರು. | وَلَقَدْ أَرْسَلْنَا رُسُلًۭا مِّن قَبْلِكَ مِنْهُم مَّن قَصَصْنَا عَلَيْكَ وَمِنْهُم مَّن لَّمْ نَقْصُصْ عَلَيْكَ ۗ وَمَا كَانَ لِرَسُولٍ أَن يَأْتِىَ بِـَٔايَةٍ إِلَّا بِإِذْنِ ٱللَّهِ ۚ فَإِذَا جَآءَ أَمْرُ ٱللَّهِ قُضِىَ بِٱلْحَقِّ وَخَسِرَ هُنَالِكَ ٱلْمُبْطِلُونَ. ﴿78﴾ |
| 79 ನಿಮಗಾಗಿ ಜಾನುವಾರುಗಳನ್ನು ಸೃಷ್ಟಿಸಿದವನು ಅಲ್ಲಾಹು. ಅವುಗಳಲ್ಲಿ ಕೆಲವು ಪ್ರಾಣಿಗಳ ಮೇಲೆ ನೀವು ಸವಾರಿ ಮಾಡುತ್ತೀರಿ ಮತ್ತು ಅವುಗಳಲ್ಲಿ ಕೆಲವನ್ನು ನೀವು ತಿನ್ನುತ್ತೀರಿ. | ٱللَّهُ ٱلَّذِى جَعَلَ لَكُمُ ٱلْأَنْعَٰمَ لِتَرْكَبُوا۟ مِنْهَا وَمِنْهَا تَأْكُلُونَ. ﴿79﴾ |
| 80 ಅವುಗಳಲ್ಲಿ ನಿಮಗೆ ಇನ್ನೂ ಅನೇಕ ಉಪಯೋಗಗಳಿವೆ. ನೀವು ಅವುಗಳ ಮೇಲೆ ಸವಾರಿ ಮಾಡಿ ನಿಮ್ಮ ಮನಸ್ಸಿನಲ್ಲಿರುವ ಅಗತ್ಯಗಳನ್ನು ತಲುಪುತ್ತೀರಿ. ನಿಮ್ಮನ್ನು ಅವುಗಳ ಬೆನ್ನುಗಳಲ್ಲೂ, ನಾವೆಗಳಲ್ಲೂ ಸಾಗಿಸಲಾಗುತ್ತಿದೆ. | وَلَكُمْ فِيهَا مَنَٰفِعُ وَلِتَبْلُغُوا۟ عَلَيْهَا حَاجَةًۭ فِى صُدُورِكُمْ وَعَلَيْهَا وَعَلَى ٱلْفُلْكِ تُحْمَلُونَ. ﴿80﴾ |
| 81 ಅವನು ನಿಮಗೆ ಅವನ ದೃಷ್ಟಾಂತಗಳನ್ನು ತೋರಿಸಿಕೊಡುತ್ತಾನೆ. ಅಲ್ಲಾಹನ ದೃಷ್ಟಾಂತಗಳಲ್ಲಿ ಯಾವುದನ್ನು ನೀವು ನಿಷೇಧಿಸುತ್ತೀರಿ? | وَيُرِيكُمْ ءَايَٰتِهِۦ فَأَىَّ ءَايَٰتِ ٱللَّهِ تُنكِرُونَ. ﴿81﴾ |
| 82 ಅವರು ಭೂಮಿಯಲ್ಲಿ ಸಂಚರಿಸಿ ಅವರಿಗಿಂತ ಮೊದಲಿನವರ ಅಂತ್ಯವು ಹೇಗಿತ್ತೆಂದು ನೋಡುವುದಿಲ್ಲವೇ? ಅವರು ಜನಸಂಖ್ಯೆಯಲ್ಲಿ ಇವರಿಗಿಂತ ಹೆಚ್ಚಿದ್ದರು ಮತ್ತು ಶಕ್ತಿ-ಸಾಮರ್ಥ್ಯದಲ್ಲಿ ಹಾಗೂ ಭೂಮಿಯಲ್ಲಿ ಸ್ಮಾರಕಗಳನ್ನು ಬಿಟ್ಟುಹೋಗುವುದರಲ್ಲಿ ಇವರಿಗಿಂತ ಹೆಚ್ಚು ಶ್ರೇಷ್ಠರಾಗಿದ್ದರು. ಆದರೆ ಅವರ ಯಾವುದೇ ಕೆಲಸಗಳು ಅವರ ಉಪಯೋಗಕ್ಕೆ ಬರಲಿಲ್ಲ. | أَفَلَمْ يَسِيرُوا۟ فِى ٱلْأَرْضِ فَيَنظُرُوا۟ كَيْفَ كَانَ عَٰقِبَةُ ٱلَّذِينَ مِن قَبْلِهِمْ ۚ كَانُوٓا۟ أَكْثَرَ مِنْهُمْ وَأَشَدَّ قُوَّةًۭ وَءَاثَارًۭا فِى ٱلْأَرْضِ فَمَآ أَغْنَىٰ عَنْهُم مَّا كَانُوا۟ يَكْسِبُونَ. ﴿82﴾ |
| 83 ಅವರ ಸಂದೇಶವಾಹಕರುಗಳು ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಅವರ ಬಳಿಗೆ ಬಂದಾಗ, ಅವರು ತಮ್ಮ ಬಳಿಯಿರುವ ಜ್ಞಾನದ ಬಗ್ಗೆ ಹಿಗ್ಗುತ್ತಿದ್ದರು. ಕೊನೆಗೆ ಅವರು ಯಾವುದನ್ನು ತಮಾಷೆ ಮಾಡುತ್ತಿದ್ದರೋ ಆ ಶಿಕ್ಷೆಯು ಅವರನ್ನು ಆವರಿಸಿಕೊಂಡಿತು. | فَلَمَّا جَآءَتْهُمْ رُسُلُهُم بِٱلْبَيِّنَٰتِ فَرِحُوا۟ بِمَا عِندَهُم مِّنَ ٱلْعِلْمِ وَحَاقَ بِهِم مَّا كَانُوا۟ بِهِۦ يَسْتَهْزِءُونَ. ﴿83﴾ |
| 84 ನಮ್ಮ ಶಿಕ್ಷೆಯನ್ನು ಕಂಡಾಗ ಅವರು ಹೇಳಿದರು: “ನಾವು ಅಲ್ಲಾಹನಲ್ಲಿ ಮಾತ್ರ ವಿಶ್ವಾಸವಿಟ್ಟಿದ್ದೇವೆ ಮತ್ತು ಅವನೊಡನೆ ಸಹಭಾಗಿಯನ್ನಾಗಿ ಮಾಡುತ್ತಿದ್ದ (ಎಲ್ಲಾ ದೇವರುಗಳನ್ನು) ನಿಷೇಧಿಸಿದ್ದೇವೆ.” | فَلَمَّا رَأَوْا۟ بَأْسَنَا قَالُوٓا۟ ءَامَنَّا بِٱللَّهِ وَحْدَهُۥ وَكَفَرْنَا بِمَا كُنَّا بِهِۦ مُشْرِكِينَ. ﴿84﴾ |
| 85 ಆದರೆ ನಮ್ಮ ಶಿಕ್ಷೆಯನ್ನು ಕಂಡಾಗ ಅವರ ಆ ವಿಶ್ವಾಸವು ಅವರಿಗೆ ಪ್ರಯೋಜನವಾಗಲಿಲ್ಲ. ಇದು ಅಲ್ಲಾಹು ತನ್ನ ದಾಸರ ವಿಷಯದಲ್ಲಿ ಅನುಸರಿಸಿಕೊಂಡು ಬಂದ ಕ್ರಮವಾಗಿದೆ. ಅಲ್ಲಿ ಸತ್ಯನಿಷೇಧಿಗಳೇ ನಷ್ಟ ಹೊಂದಿದರು. | فَلَمْ يَكُ يَنفَعُهُمْ إِيمَٰنُهُمْ لَمَّا رَأَوْا۟ بَأْسَنَا ۖ سُنَّتَ ٱللَّهِ ٱلَّتِى قَدْ خَلَتْ فِى عِبَادِهِۦ ۖ وَخَسِرَ هُنَالِكَ ٱلْكَٰفِرُونَ. ﴿85﴾ |