الذاريات
ಕನ್ನಡ Translation with Arabic Quran Text
| ಕನ್ನಡ | العربية |
|---|---|
| 1 ಬಲವಾಗಿ ಧೂಳಿಯನ್ನು ಹರಡುವ (ಗಾಳಿಯ) ಮೇಲಾಣೆ! | وَٱلذَّٰرِيَٰتِ ذَرْوًۭا. ﴿1﴾ |
| 2 ಭಾರವನ್ನು ಹೊರುವ (ಮೋಡಗಳ) ಮೇಲಾಣೆ! | فَٱلْحَٰمِلَٰتِ وِقْرًۭا. ﴿2﴾ |
| 3 ಸುಗಮವಾಗಿ ಸಂಚರಿಸುವ (ಹಡಗುಗಳ) ಮೇಲಾಣೆ! | فَٱلْجَٰرِيَٰتِ يُسْرًۭا. ﴿3﴾ |
| 4 ಕಾರ್ಯಗಳನ್ನು ವಿಂಗಡಿಸಿಕೊಡುವ (ದೇವದೂತರುಗಳ) ಮೇಲಾಣೆ! | فَٱلْمُقَسِّمَٰتِ أَمْرًا. ﴿4﴾ |
| 5 ನಿಶ್ಚಯವಾಗಿಯೂ ನಿಮಗೆ ಎಚ್ಚರಿಕೆ ನೀಡಲಾಗುವ ವಿಷಯವು ಸತ್ಯವಾಗಿದೆ. | إِنَّمَا تُوعَدُونَ لَصَادِقٌۭ. ﴿5﴾ |
| 6 ನಿಶ್ಚಯವಾಗಿಯೂ ವಿಚಾರಣೆಯು ಸಂಭವಿಸಿಯೇ ತೀರುತ್ತದೆ. | وَإِنَّ ٱلدِّينَ لَوَٰقِعٌۭ. ﴿6﴾ |
| 7 ಕಕ್ಷೆಗಳನ್ನು ಹೊಂದಿರುವ ಆಕಾಶದ ಮೇಲಾಣೆ! | وَٱلسَّمَآءِ ذَاتِ ٱلْحُبُكِ. ﴿7﴾ |
| 8 ನಿಶ್ಚಯವಾಗಿಯೂ ನೀವು ವಿಭಿನ್ನ ಅಭಿಪ್ರಾಯಗಳಲ್ಲಿದ್ದೀರಿ. | إِنَّكُمْ لَفِى قَوْلٍۢ مُّخْتَلِفٍۢ. ﴿8﴾ |
| 9 (ಸತ್ಯದಿಂದ) ತಪ್ಪಿಸಲ್ಪಟ್ಟವನು ಅದರಿಂದ (ಕುರ್‌ಆನ್‍ನಿಂದ) ತಪ್ಪಿಸಲ್ಪಡುತ್ತಾನೆ. | يُؤْفَكُ عَنْهُ مَنْ أُفِكَ. ﴿9﴾ |
| 10 ಆಧಾರರಹಿತ ಮಾತುಗಳನ್ನು ಹೇಳುವವರು ನಾಶವಾಗಿದ್ದಾರೆ. | قُتِلَ ٱلْخَرَّٰصُونَ. ﴿10﴾ |
| 11 ಅವರು ಅಜ್ಞಾನದಲ್ಲಿದ್ದಾರೆ ಮತ್ತು ಮರೆತುಬಿಟ್ಟಿದ್ದಾರೆ. | ٱلَّذِينَ هُمْ فِى غَمْرَةٍۢ سَاهُونَ. ﴿11﴾ |
| 12 “ಪ್ರತಿಫಲದ ದಿನ ಯಾವಾಗ?” ಎಂದು ಅವರು ಕೇಳುತ್ತಾರೆ. | يَسْـَٔلُونَ أَيَّانَ يَوْمُ ٱلدِّينِ. ﴿12﴾ |
| 13 ಅವರನ್ನು ನರಕಾಗ್ನಿಯಲ್ಲಿ ಶಿಕ್ಷಿಸಲಾಗುವ ದಿನ. | يَوْمَ هُمْ عَلَى ٱلنَّارِ يُفْتَنُونَ. ﴿13﴾ |
| 14 (ಅವರೊಂದಿಗೆ ಹೇಳಲಾಗುವುದು): “ನಿಮ್ಮ ಶಿಕ್ಷೆಯ ರುಚಿಯನ್ನು ನೋಡಿರಿ. ಇದಕ್ಕೇ ನೀವು ತ್ವರೆ ಮಾಡುತ್ತಿದ್ದಿರಿ.” | ذُوقُوا۟ فِتْنَتَكُمْ هَٰذَا ٱلَّذِى كُنتُم بِهِۦ تَسْتَعْجِلُونَ. ﴿14﴾ |
| 15 ನಿಶ್ಚಯವಾಗಿಯೂ ದೇವಭಯವುಳ್ಳವರು ಸ್ವರ್ಗೋದ್ಯಾನಗಳಲ್ಲಿ ಮತ್ತು ತೊರೆಗಳಲ್ಲಿರುವರು. | إِنَّ ٱلْمُتَّقِينَ فِى جَنَّٰتٍۢ وَعُيُونٍ. ﴿15﴾ |
| 16 ಅವರಿಗೆ ಅವರ ಪರಿಪಾಲಕನು (ಅಲ್ಲಾಹು) ನೀಡಿದ್ದನ್ನು ಅವರು ಪಡೆಯುವರು. ನಿಶ್ಚಯವಾಗಿಯೂ ಇದಕ್ಕಿಂತ ಮೊದಲು ಅವರು ನೀತಿವಂತರಾಗಿದ್ದರು. | ءَاخِذِينَ مَآ ءَاتَىٰهُمْ رَبُّهُمْ ۚ إِنَّهُمْ كَانُوا۟ قَبْلَ ذَٰلِكَ مُحْسِنِينَ. ﴿16﴾ |
| 17 ಅವರು ರಾತ್ರಿಯಲ್ಲಿ ಬಹಳ ಕಡಿಮೆ ನಿದ್ರಿಸುತ್ತಿದ್ದರು. | كَانُوا۟ قَلِيلًۭا مِّنَ ٱلَّيْلِ مَا يَهْجَعُونَ. ﴿17﴾ |
| 18 ಸಹರಿಯ ಸಮಯದಲ್ಲಿ ಅವರು (ಅಲ್ಲಾಹನಲ್ಲಿ) ಕ್ಷಮೆಯಾಚಿಸುತ್ತಿದ್ದರು. | وَبِٱلْأَسْحَارِ هُمْ يَسْتَغْفِرُونَ. ﴿18﴾ |
| 19 ಅವರ ಧನದಲ್ಲಿ ಬೇಡುವವರಿಗೆ ಮತ್ತು (ಉಪಜೀವನ) ತಡೆಯಲ್ಪಟ್ಟವರಿಗೆ ಹಕ್ಕಿತ್ತು. | وَفِىٓ أَمْوَٰلِهِمْ حَقٌّۭ لِّلسَّآئِلِ وَٱلْمَحْرُومِ. ﴿19﴾ |
| 20 ದೃಢವಿಶ್ವಾಸವುಳ್ಳವರಿಗೆ ಭೂಮಿಯಲ್ಲಿ ಅನೇಕ ದೃಷ್ಟಾಂತಗಳಿವೆ. | وَفِى ٱلْأَرْضِ ءَايَٰتٌۭ لِّلْمُوقِنِينَ. ﴿20﴾ |
| 21 ನಿಮ್ಮ ದೇಹಗಳಲ್ಲೂ ಕೂಡ. ಆದರೂ ನೀವು ನೋಡುವುದಿಲ್ಲವೇ? | وَفِىٓ أَنفُسِكُمْ ۚ أَفَلَا تُبْصِرُونَ. ﴿21﴾ |
| 22 ಆಕಾಶದಲ್ಲಿ ನಿಮ್ಮ ಉಪಜೀವನ ಮತ್ತು ನಿಮಗೆ ವಾಗ್ದಾನ ಮಾಡಲಾಗುವ ಎಲ್ಲವೂ ಇದೆ. | وَفِى ٱلسَّمَآءِ رِزْقُكُمْ وَمَا تُوعَدُونَ. ﴿22﴾ |
|
23
ಭೂಮ್ಯಾಕಾಶಗಳ ಪರಿಪಾಲಕನ (ಅಲ್ಲಾಹನ) ಮೇಲಾಣೆ! ನೀವು ಹೇಗೆ ಮಾತನಾಡುತ್ತಿರುವಿರೋ ಹಾಗೆಯೇ ಇವೆಲ್ಲವೂ ಸತ್ಯವಾಗಿದೆ.[1]
[1] ನಿಮಗೆ ಮಾತನಾಡುವ ಶಕ್ತಿಯಿರುವುದನ್ನು ನೀವು ಹೇಗೆ ನಿರಾಕರಿಸುವುದಿಲ್ಲವೋ ಹಾಗೆಯೇ ಮೇಲೆ ಹೇಳಿದ ವಿಷಯಗಳೆಲ್ಲವೂ ನಿರಾಕರಿಸಲಾಗದ ಸತ್ಯವಾಗಿದೆ.
|
فَوَرَبِّ ٱلسَّمَآءِ وَٱلْأَرْضِ إِنَّهُۥ لَحَقٌّۭ مِّثْلَ مَآ أَنَّكُمْ تَنطِقُونَ. ﴿23﴾ |
| 24 ಇಬ್ರಾಹೀಮರ ಸನ್ಮಾನ್ಯ ಅತಿಥಿಗಳ ಸಮಾಚಾರವು ನಿಮಗೆ ತಲುಪಿದೆಯೇ? | هَلْ أَتَىٰكَ حَدِيثُ ضَيْفِ إِبْرَٰهِيمَ ٱلْمُكْرَمِينَ. ﴿24﴾ |
| 25 ಅವರು ಇಬ್ರಾಹೀಮರ ಬಳಿಗೆ ಬಂದು ಸಲಾಂ ಹೇಳಿದ ಸಂದರ್ಭ. ಇಬ್ರಾಹೀಮ್ ಸಲಾಂಗೆ ಉತ್ತರಿಸಿ ಹೇಳಿದರು: “ನೀವು ಅಪರಿಚಿತ ಜನರಂತೆ ಕಾಣುತ್ತೀರಿ.” | إِذْ دَخَلُوا۟ عَلَيْهِ فَقَالُوا۟ سَلَٰمًۭا ۖ قَالَ سَلَٰمٌۭ قَوْمٌۭ مُّنكَرُونَ. ﴿25﴾ |
| 26 ನಂತರ ಅವರು ಆತುರದಿಂದ ತಮ್ಮ ಮನೆಯವರ ಕಡೆಗೆ ತೆರಳಿ ಒಂದು ಕೊಬ್ಬಿದ ಕರುವನ್ನು (ಬೇಯಿಸಿ) ತಂದರು. | فَرَاغَ إِلَىٰٓ أَهْلِهِۦ فَجَآءَ بِعِجْلٍۢ سَمِينٍۢ. ﴿26﴾ |
| 27 ಅದನ್ನು ಅವರ ಮುಂದೆ ಇಟ್ಟರು. ನಂತರ ಕೇಳಿದರು: “ನೀವೇಕೆ ತಿನ್ನುವುದಿಲ್ಲ?” | فَقَرَّبَهُۥٓ إِلَيْهِمْ قَالَ أَلَا تَأْكُلُونَ. ﴿27﴾ |
| 28 ಇಬ್ರಾಹೀಮರಿಗೆ ಅವರ ಬಗ್ಗೆ ಮನಸ್ಸಿನಲ್ಲಿ ಗಾಬರಿ ಉಂಟಾಯಿತು. ಅವರು ಹೇಳಿದರು: “ಗಾಬರಿಯಾಗಬೇಡಿ.” ಅವರು ಇಬ್ರಾಹೀಮರಿಗೆ ಜ್ಞಾನವಂತ ಮಗುವಿನ (ಜನನದ ಬಗ್ಗೆ) ಸುವಾರ್ತೆ ತಿಳಿಸಿದರು. | فَأَوْجَسَ مِنْهُمْ خِيفَةًۭ ۖ قَالُوا۟ لَا تَخَفْ ۖ وَبَشَّرُوهُ بِغُلَٰمٍ عَلِيمٍۢ. ﴿28﴾ |
| 29 ಅವರ ಪತ್ನಿ ಸದ್ದು ಮಾಡುತ್ತಾ ಮುಂದಕ್ಕೆ ಬಂದು ತನ್ನ ಮುಖಕ್ಕೆ ಬಡಿದು ಹೇಳಿದರು: “ನಾನೊಬ್ಬ ಮುದುಕಿ ಮತ್ತು ಬಂಜೆಯಾಗಿದ್ದೇನೆ.” | فَأَقْبَلَتِ ٱمْرَأَتُهُۥ فِى صَرَّةٍۢ فَصَكَّتْ وَجْهَهَا وَقَالَتْ عَجُوزٌ عَقِيمٌۭ. ﴿29﴾ |
| 30 ದೇವದೂತರುಗಳು ಹೇಳಿದರು: “ಈ ರೀತಿ ನಿಮ್ಮ ಪರಿಪಾಲಕನು (ಅಲ್ಲಾಹು) ಹೇಳಿದ್ದಾನೆ. ನಿಶ್ಚಯವಾಗಿಯೂ ಅವನು ವಿವೇಕಪೂರ್ಣನು ಮತ್ತು ಸರ್ವಜ್ಞನಾಗಿದ್ದಾನೆ.” | قَالُوا۟ كَذَٰلِكِ قَالَ رَبُّكِ ۖ إِنَّهُۥ هُوَ ٱلْحَكِيمُ ٱلْعَلِيمُ. ﴿30﴾ |
| 31 ಇಬ್ರಾಹೀಮ್ ಕೇಳಿದರು: “ಓ ದೂತರೇ! ಇಲ್ಲಿ ನಿಮಗೇನು ಕೆಲಸವಿದೆಯೆಂದು ಬಂದಿದ್ದೀರಿ?” | ۞ قَالَ فَمَا خَطْبُكُمْ أَيُّهَا ٱلْمُرْسَلُونَ. ﴿31﴾ |
| 32 ಅವರು ಉತ್ತರಿಸಿದರು: “ನಮ್ಮನ್ನು ಅಪರಾಧಿಗಳಾದ ಜನರ ಬಳಿಗೆ ಕಳುಹಿಸಲಾಗಿದೆ. | قَالُوٓا۟ إِنَّآ أُرْسِلْنَآ إِلَىٰ قَوْمٍۢ مُّجْرِمِينَ. ﴿32﴾ |
| 33 ಅವರ ಮೇಲೆ ಜೇಡಿಮಣ್ಣಿನ ಕಲ್ಲುಗಳನ್ನು ಸುರಿಸುವುದಕ್ಕಾಗಿ. | لِنُرْسِلَ عَلَيْهِمْ حِجَارَةًۭ مِّن طِينٍۢ. ﴿33﴾ |
| 34 ಅದು ಎಲ್ಲೆ ಮೀರಿದ ಜನರಿಗೆ ಅವರ ಪರಿಪಾಲಕನ (ಅಲ್ಲಾಹನ) ಬಳಿ ಗುರುತು ಹಾಕಲಾದ ಕಲ್ಲುಗಳಾಗಿವೆ.” | مُّسَوَّمَةً عِندَ رَبِّكَ لِلْمُسْرِفِينَ. ﴿34﴾ |
| 35 ನಾವು ಅಲ್ಲಿದ್ದ ಎಲ್ಲಾ ಸತ್ಯವಿಶ್ವಾಸಿಗಳನ್ನು ಹೊರತೆಗೆದೆವು (ರಕ್ಷಿಸಿದೆವು). | فَأَخْرَجْنَا مَن كَانَ فِيهَا مِنَ ٱلْمُؤْمِنِينَ. ﴿35﴾ |
| 36 ಆದರೆ ನಾವು ಅಲ್ಲಿ ಮುಸ್ಲಿಮರಿಗೆ ಸೇರಿದ ಒಂದೇ ಒಂದು ಮನೆಯನ್ನು ಮಾತ್ರ ಕಂಡೆವು. | فَمَا وَجَدْنَا فِيهَا غَيْرَ بَيْتٍۢ مِّنَ ٱلْمُسْلِمِينَ. ﴿36﴾ |
| 37 ಯಾತನಾಮಯ ಶಿಕ್ಷೆಯನ್ನು ಭಯಪಡುವವರಿಗೆ ನಾವು ಅಲ್ಲಿ ಒಂದು ದೃಷ್ಟಾಂತವನ್ನು ಉಳಿಸಿದೆವು. | وَتَرَكْنَا فِيهَآ ءَايَةًۭ لِّلَّذِينَ يَخَافُونَ ٱلْعَذَابَ ٱلْأَلِيمَ. ﴿37﴾ |
| 38 ಮೂಸಾರ ಸಮಾಚಾರದಲ್ಲೂ (ದೃಷ್ಟಾಂತಗಳಿವೆ). ನಾವು ಅವರನ್ನು ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಫರೋಹನ ಬಳಿಗೆ ಕಳುಹಿಸಿದ ಸಂದರ್ಭ. | وَفِى مُوسَىٰٓ إِذْ أَرْسَلْنَٰهُ إِلَىٰ فِرْعَوْنَ بِسُلْطَٰنٍۢ مُّبِينٍۢ. ﴿38﴾ |
| 39 ಆದರೆ ಅವನು ತನ್ನ ಶಕ್ತಿಸಾಮರ್ಥ್ಯಕ್ಕೆ ಮರುಳಾಗಿ ಮುಖ ತಿರುಗಿಸುತ್ತಾ ಹೇಳಿದನು: “ಇವನೊಬ್ಬ ಮಾಟಗಾರ ಅಥವಾ ಮಾನಸಿಕ ಅಸ್ವಸ್ಥ.” | فَتَوَلَّىٰ بِرُكْنِهِۦ وَقَالَ سَٰحِرٌ أَوْ مَجْنُونٌۭ. ﴿39﴾ |
| 40 ಆದ್ದರಿಂದ ನಾವು ಅವನನ್ನು ಮತ್ತು ಅವನ ಸೈನ್ಯಗಳನ್ನು ಹಿಡಿದು ಸಮುದ್ರಕ್ಕೆ ಎಸೆದವು. ಅವನು ಆಕ್ಷೇಪಾರ್ಹನಾಗಿದ್ದನು. | فَأَخَذْنَٰهُ وَجُنُودَهُۥ فَنَبَذْنَٰهُمْ فِى ٱلْيَمِّ وَهُوَ مُلِيمٌۭ. ﴿40﴾ |
| 41 ಆದ್ ಗೋತ್ರದಲ್ಲೂ (ದೃಷ್ಟಾಂತವಿದೆ). ನಾವು ಅವರ ವಿರುದ್ಧ ಬರಡು ಗಾಳಿಯನ್ನು ಕಳುಹಿಸಿದ ಸಂದರ್ಭ. | وَفِى عَادٍ إِذْ أَرْسَلْنَا عَلَيْهِمُ ٱلرِّيحَ ٱلْعَقِيمَ. ﴿41﴾ |
| 42 ಅದು ಯಾವೆಲ್ಲಾ ವಸ್ತುಗಳ ಮೇಲೆ ಬೀಸುತ್ತಿತ್ತೋ ಅವೆಲ್ಲವನ್ನೂ ಕೊಳೆತ ತುಣುಕುಗಳಂತೆ (ಚೂರು ಚೂರು) ಮಾಡುತ್ತಿತ್ತು. | مَا تَذَرُ مِن شَىْءٍ أَتَتْ عَلَيْهِ إِلَّا جَعَلَتْهُ كَٱلرَّمِيمِ. ﴿42﴾ |
| 43 ಸಮೂದ್ ಗೋತ್ರದಲ್ಲೂ (ದೃಷ್ಟಾಂತವಿದೆ). “ಒಂದು ಅವಧಿಯವರೆಗೆ ಆನಂದಿಸಿರಿ” ಎಂದು ಅವರೊಡನೆ ಹೇಳಲಾದ ಸಂದರ್ಭ. | وَفِى ثَمُودَ إِذْ قِيلَ لَهُمْ تَمَتَّعُوا۟ حَتَّىٰ حِينٍۢ. ﴿43﴾ |
| 44 ಆದರೆ ಅವರು ತಮ್ಮ ಪರಿಪಾಲಕನ (ಅಲ್ಲಾಹನ) ಆಜ್ಞೆಯನ್ನು ಧಿಕ್ಕರಿಸಿದರು. ಆಗ ಅವರು ನೋಡುತ್ತಿದ್ದಂತೆಯೇ ಭಯಾನಕ ಶಬ್ದವು ಅವರನ್ನು ಹಿಡಿಯಿತು. | فَعَتَوْا۟ عَنْ أَمْرِ رَبِّهِمْ فَأَخَذَتْهُمُ ٱلصَّٰعِقَةُ وَهُمْ يَنظُرُونَ. ﴿44﴾ |
| 45 ಅವರಿಗೆ ಎದ್ದು ನಿಲ್ಲಲು ಕೂಡ ಸಾಧ್ಯವಾಗಲಿಲ್ಲ. ಅವರಿಗೆ ಸ್ವಯಂ ರಕ್ಷಿಸಿಕೊಳ್ಳಲೂ ಸಾಧ್ಯವಾಗಲಿಲ್ಲ. | فَمَا ٱسْتَطَٰعُوا۟ مِن قِيَامٍۢ وَمَا كَانُوا۟ مُنتَصِرِينَ. ﴿45﴾ |
| 46 ಅದಕ್ಕಿಂತ ಮೊದಲು ನೂಹರ ಜನರಿಗೂ (ಇದೇ ಸ್ಥಿತಿ ಉಂಟಾಗಿತ್ತು). ನಿಶ್ಚಯವಾಗಿಯೂ ಅವರು ದುಷ್ಕರ್ಮಿಗಳಾದ ಜನರಾಗಿದ್ದರು. | وَقَوْمَ نُوحٍۢ مِّن قَبْلُ ۖ إِنَّهُمْ كَانُوا۟ قَوْمًۭا فَٰسِقِينَ. ﴿46﴾ |
| 47 ನಾವು ಆಕಾಶವನ್ನು ಕೈಗಳಿಂದ ನಿರ್ಮಿಸಿದ್ದೇವೆ. ನಿಶ್ಚಯವಾಗಿಯೂ ನಾವು ವಿಸ್ತರಿಸುವವರಾಗಿದ್ದೇವೆ. | وَٱلسَّمَآءَ بَنَيْنَٰهَا بِأَيْي۟دٍۢ وَإِنَّا لَمُوسِعُونَ. ﴿47﴾ |
| 48 ನಾವು ಭೂಮಿಯನ್ನು ಹಾಸಿನಂತೆ ಹರಡಿದ್ದೇವೆ. ನಾವು ಅತ್ಯುತ್ತಮವಾಗಿ ಹಾಸುವವರಾಗಿದ್ದೇವೆ. | وَٱلْأَرْضَ فَرَشْنَٰهَا فَنِعْمَ ٱلْمَٰهِدُونَ. ﴿48﴾ |
| 49 ನಾವು ಎಲ್ಲ ವಸ್ತುಗಳನ್ನೂ ಜೋಡಿಯಾಗಿ ಸೃಷ್ಟಿಸಿದ್ದೇವೆ. ನೀವು ಉಪದೇಶ ಸ್ವೀಕರಿಸುವುದಕ್ಕಾಗಿ. | وَمِن كُلِّ شَىْءٍ خَلَقْنَا زَوْجَيْنِ لَعَلَّكُمْ تَذَكَّرُونَ. ﴿49﴾ |
| 50 ಆದ್ದರಿಂದ ನೀವು ಅಲ್ಲಾಹನ ಕಡೆಗೆ (ಪಶ್ಚಾತ್ತಾಪದೊಂದಿಗೆ) ಧಾವಿಸಿರಿ. ನಿಶ್ಚಯವಾಗಿಯೂ ನಾನು ನಿಮಗೆ ಅವನ ಕಡೆಯ ಸ್ಪಷ್ಟ ಮುನ್ನೆಚ್ಚರಿಕೆಗಾರನಾಗಿದ್ದೇನೆ. | فَفِرُّوٓا۟ إِلَى ٱللَّهِ ۖ إِنِّى لَكُم مِّنْهُ نَذِيرٌۭ مُّبِينٌۭ. ﴿50﴾ |
| 51 ನೀವು ಅಲ್ಲಾಹನೊಂದಿಗೆ ಬೇರೆ ದೇವರುಗಳನ್ನು ಮಾಡಿಕೊಳ್ಳಬೇಡಿ. ನಿಶ್ಚಯವಾಗಿಯೂ ನಾನು ನಿಮಗೆ ಅವನ ಕಡೆಯ ಸ್ಪಷ್ಟ ಮುನ್ನೆಚ್ಚರಿಕೆಗಾರನಾಗಿದ್ದೇನೆ. | وَلَا تَجْعَلُوا۟ مَعَ ٱللَّهِ إِلَٰهًا ءَاخَرَ ۖ إِنِّى لَكُم مِّنْهُ نَذِيرٌۭ مُّبِينٌۭ. ﴿51﴾ |
| 52 ಈ ರೀತಿ ಇವರಿಗಿಂತ ಮೊದಲಿನವರ ಬಳಿಗೆ ಸಂದೇಶವಾಹಕರು ಬಂದಾಗಲೆಲ್ಲಾ ಅವರು ಅವರನ್ನು ಮಾಟಗಾರ ಅಥವಾ ಮಾನಸಿಕ ಅಸ್ವಸ್ಥ ಎಂದೇ ಹೇಳುತ್ತಿದ್ದರು. | كَذَٰلِكَ مَآ أَتَى ٱلَّذِينَ مِن قَبْلِهِم مِّن رَّسُولٍ إِلَّا قَالُوا۟ سَاحِرٌ أَوْ مَجْنُونٌ. ﴿52﴾ |
| 53 ಇವರು ಈ ಮಾತನ್ನು ಪರಸ್ಪರ ಉಪದೇಶ ಮಾಡಿದ್ದಾರೆಯೇ? ಅಲ್ಲ, ವಾಸ್ತವವಾಗಿ ಅವರು ಅತಿರೇಕಿಗಳಾದ ಜನರಾಗಿದ್ದಾರೆ. | أَتَوَاصَوْا۟ بِهِۦ ۚ بَلْ هُمْ قَوْمٌۭ طَاغُونَ. ﴿53﴾ |
| 54 ಆದ್ದರಿಂದ ನೀವು ಅವರನ್ನು ಬಿಟ್ಟು ವಿಮುಖರಾಗಿರಿ. ನಿಮ್ಮ ಮೇಲೆ ಯಾವುದೇ ಆಕ್ಷೇಪವಿಲ್ಲ. | فَتَوَلَّ عَنْهُمْ فَمَآ أَنتَ بِمَلُومٍۢ. ﴿54﴾ |
| 55 ನೀವು ಉಪದೇಶ ಮಾಡಿರಿ. ನಿಶ್ಚಯವಾಗಿಯೂ ಉಪದೇಶವು ಸತ್ಯವಿಶ್ವಾಸಿಗಳಿಗೆ ಪ್ರಯೋಜನ ನೀಡುತ್ತದೆ. | وَذَكِّرْ فَإِنَّ ٱلذِّكْرَىٰ تَنفَعُ ٱلْمُؤْمِنِينَ. ﴿55﴾ |
| 56 ನಾನು ಜಿನ್ನ್‌ಗಳನ್ನು ಮತ್ತು ಮನುಷ್ಯರನ್ನು ಸೃಷ್ಟಿಸಿದ್ದು ನನ್ನನ್ನು ಆರಾಧಿಸುವುದಕ್ಕಾಗಿ ಮಾತ್ರ. | وَمَا خَلَقْتُ ٱلْجِنَّ وَٱلْإِنسَ إِلَّا لِيَعْبُدُونِ. ﴿56﴾ |
| 57 ನಾನು ಅವರಿಂದ ಯಾವುದೇ ಉಪಜೀವನವನ್ನು ಬಯಸುವುದಿಲ್ಲ. ಅವರು ನನಗೆ ಆಹಾರ ನೀಡಬೇಕೆಂದೂ ನಾನು ಬಯಸುವುದಿಲ್ಲ. | مَآ أُرِيدُ مِنْهُم مِّن رِّزْقٍۢ وَمَآ أُرِيدُ أَن يُطْعِمُونِ. ﴿57﴾ |
| 58 ನಿಶ್ಚಯವಾಗಿಯೂ ಅಲ್ಲಾಹನೇ ಎಲ್ಲರಿಗೂ ಉಪಜೀವನ ನೀಡುವವನು. ಅವನು ಮಹಾಶಕ್ತಿಶಾಲಿ ಮತ್ತು ಬಲಿಷ್ಠನಾಗಿದ್ದಾನೆ. | إِنَّ ٱللَّهَ هُوَ ٱلرَّزَّاقُ ذُو ٱلْقُوَّةِ ٱلْمَتِينُ. ﴿58﴾ |
| 59 ಅಕ್ರಮವೆಸಗಿದವರಿಗೆ ಅವರ ಸಂಗಡಿಗರಿಗೆ ದೊರೆತ (ಶಿಕ್ಷೆಯ) ಪಾಲಿನಂತೆಯೇ ಒಂದು ಪಾಲು ದೊರೆಯಲಿದೆ. ಆದ್ದರಿಂದ ಅವರು ನನ್ನೊಡನೆ ತ್ವರೆ ಮಾಡದಿರಲಿ. | فَإِنَّ لِلَّذِينَ ظَلَمُوا۟ ذَنُوبًۭا مِّثْلَ ذَنُوبِ أَصْحَٰبِهِمْ فَلَا يَسْتَعْجِلُونِ. ﴿59﴾ |
| 60 ಅವರಿಗೆ ವಾಗ್ದಾನ ಮಾಡಲಾದ ಆ ದಿನದ ಕಾರಣದಿಂದ ಸತ್ಯನಿಷೇಧಿಗಳಿಗೆ ವಿನಾಶವಿದೆ. | فَوَيْلٌۭ لِّلَّذِينَ كَفَرُوا۟ مِن يَوْمِهِمُ ٱلَّذِى يُوعَدُونَ. ﴿60﴾ |