Loading date... | Loading Hijri date... | Loading time...

القلم

ಕನ್ನಡ Translation with Arabic Quran Text

ಕನ್ನಡ العربية
1 ನೂನ್. ಲೇಖನಿ ಮತ್ತು ಅವರು (ದೇವದೂತರುಗಳು) ಬರೆಯುವುದರ ಮೇಲಾಣೆ! نٓ ۚ وَٱلْقَلَمِ وَمَا يَسْطُرُونَ. ﴿1﴾
2 ನಿಮ್ಮ ಪರಿಪಾಲಕನ (ಅಲ್ಲಾಹನ) ಅನುಗ್ರಹದಿಂದಾಗಿ ನೀವು ಮಾನಸಿಕ ಅಸ್ವಸ್ಥರಲ್ಲ. مَآ أَنتَ بِنِعْمَةِ رَبِّكَ بِمَجْنُونٍۢ. ﴿2﴾
3 ನಿಶ್ಚಯವಾಗಿಯೂ ನಿಮಗೆ ಎಂದೂ ಮುಗಿಯದ ಪ್ರತಿಫಲವಿದೆ. وَإِنَّ لَكَ لَأَجْرًا غَيْرَ مَمْنُونٍۢ. ﴿3﴾
4 ನಿಶ್ಚಯವಾಗಿಯೂ ನೀವು ಶ್ರೇಷ್ಠ ಗುಣ ನಡವಳಿಕೆಯಲ್ಲಿದ್ದೀರಿ. وَإِنَّكَ لَعَلَىٰ خُلُقٍ عَظِيمٍۢ. ﴿4﴾
5 ಆದ್ದರಿಂದ ನೀವು ನೋಡುವಿರಿ ಮತ್ತು ಅವರು ಕೂಡ ನೋಡುವರು. فَسَتُبْصِرُ وَيُبْصِرُونَ. ﴿5﴾
6 ನಿಮ್ಮಲ್ಲಿ ಕ್ಷೋಭೆಗೆ ಬಲಿಯಾದವರು ಯಾರೆಂದು. بِأَييِّكُمُ ٱلْمَفْتُونُ. ﴿6﴾
7 ನಿಶ್ಚಯವಾಗಿಯೂ ತನ್ನ ಮಾರ್ಗದಿಂದ ತಪ್ಪಿಹೋದವರ ಬಗ್ಗೆ ನಿಮ್ಮ ಪರಿಪಾಲಕನಿಗೆ (ಅಲ್ಲಾಹನಿಗೆ) ಬಹಳ ಚೆನ್ನಾಗಿ ತಿಳಿದಿದೆ. ಸನ್ಮಾರ್ಗ ಪಡೆದವರ ಬಗ್ಗೆಯೂ ಅವನಿಗೆ ಬಹಳ ಚೆನ್ನಾಗಿ ತಿಳಿದಿದೆ. إِنَّ رَبَّكَ هُوَ أَعْلَمُ بِمَن ضَلَّ عَن سَبِيلِهِۦ وَهُوَ أَعْلَمُ بِٱلْمُهْتَدِينَ. ﴿7﴾
8 ಆದ್ದರಿಂದ ನೀವು ಸತ್ಯನಿಷೇಧಿಗಳ ಮಾತನ್ನು ಕೇಳಬೇಡಿ. فَلَا تُطِعِ ٱلْمُكَذِّبِينَ. ﴿8﴾
9 ನೀವು ಸ್ವಲ್ಪ ಮೃದುವಾದರೆ ಅವರು ಕೂಡ ಮೃದುವಾಗುತ್ತಾರೆ ಎಂದು ಅವರು ಬಯಸುತ್ತಾರೆ.[1]
[1] ಅಂದರೆ ಅವರ ದೇವರುಗಳ ವಿಷಯದಲ್ಲಿ ನೀವು ಮೃದು ನಿಲುವನ್ನು ತಳೆದರೆ ಅವರು ಕೂಡ ನಿಮ್ಮ ಬಗ್ಗೆ ಮೃದು ನಿಲುವನ್ನು ತಳೆಯುತ್ತಾರೆ.
وَدُّوا۟ لَوْ تُدْهِنُ فَيُدْهِنُونَ. ﴿9﴾
10 ನೀವು ಎಲ್ಲಾ ಪದೇ ಪದೇ ಆಣೆ ಮಾಡುವ ನೀಚರ ಮಾತನ್ನು ಕೇಳಬೇಡಿ. وَلَا تُطِعْ كُلَّ حَلَّافٍۢ مَّهِينٍ. ﴿10﴾
11 (ಅಂದರೆ) ಚುಚ್ಚಿ ಮಾತನಾಡುವವನು ಮತ್ತು ಚಾಡಿಯೊಂದಿಗೆ ನಡೆಯುವವನು. هَمَّازٍۢ مَّشَّآءٍۭ بِنَمِيمٍۢ. ﴿11﴾
12 ಒಳಿತಿಗೆ ಅಡ್ಡಿಪಡಿಸುವವನು, ಎಲ್ಲೆ ಮೀರಿದವನು ಮತ್ತು ಕಡುಪಾಪಿಯಾಗಿರುವವನು. مَّنَّاعٍۢ لِّلْخَيْرِ مُعْتَدٍ أَثِيمٍ. ﴿12﴾
13 ಒರಟನು, ಮಾತ್ರವಲ್ಲದೆ ಕುಲಕ್ಕೆ ಸೇರದವನು.[1]
[1] ಇವೆಲ್ಲವೂ ಮಕ್ಕಾದ ಸತ್ಯನಿಷೇಧಿಗಳ, ವಿಶೇಷವಾಗಿ ಅವರ ಮುಖಂಡ ವಲೀದ್ ಬಿನ್ ಮುಗೀರ ವಿಷಯದಲ್ಲಿ ಅವತೀರ್ಣವಾದ ವಚನಗಳಾಗಿವೆ. ಇದು ಇಂತಹ ದುರ್ಗುಣಗಳನ್ನು ಹೊಂದಿರುವ ಎಲ್ಲರಿಗೂ ಅನ್ವಯವಾಗುತ್ತದೆ.
عُتُلٍّۭ بَعْدَ ذَٰلِكَ زَنِيمٍ. ﴿13﴾
14 ಅವನಿಗೆ ಆಸ್ತಿ ಮತ್ತು ಗಂಡು ಮಕ್ಕಳಿರುವುದೇ ಅವನ (ಈ ದುರ್ನಡತೆಗೆ) ಕಾರಣವಾಗಿದೆ. أَن كَانَ ذَا مَالٍۢ وَبَنِينَ. ﴿14﴾
15 ಅವನಿಗೆ ನಮ್ಮ ವಚನಗಳನ್ನು ಓದಿಕೊಡಲಾದರೆ, ಅದನ್ನು ಪ್ರಾಚೀನ ಕಾಲದವರ ಪುರಾಣಗಳು ಎಂದು ಹೇಳುತ್ತಾನೆ. إِذَا تُتْلَىٰ عَلَيْهِ ءَايَٰتُنَا قَالَ أَسَٰطِيرُ ٱلْأَوَّلِينَ. ﴿15﴾
16 ನಾವು ಅವನ ಮೂಗಿನ ಮೇಲೆ ಬರೆ ಹಾಕುವೆವು. سَنَسِمُهُۥ عَلَى ٱلْخُرْطُومِ. ﴿16﴾
17 ನಿಶ್ಚಯವಾಗಿಯೂ ಆ ತೋಟದ ಜನರನ್ನು ಪರೀಕ್ಷಿಸಿದಂತೆ ನಾವು ಅವರನ್ನೂ ಪರೀಕ್ಷಿಸಿದೆವು. ಬೆಳಗಾಗುತ್ತಿದ್ದಂತೆ ತೋಟದ ಹಣ್ಣುಗಳನ್ನು ನಾವು ಖಂಡಿತ ಕೊಯ್ಯುವೆವು ಎಂದು ಅವರು ಆಣೆ ಮಾಡಿ ಹೇಳಿದ ಸಂದರ್ಭ. إِنَّا بَلَوْنَٰهُمْ كَمَا بَلَوْنَآ أَصْحَٰبَ ٱلْجَنَّةِ إِذْ أَقْسَمُوا۟ لَيَصْرِمُنَّهَا مُصْبِحِينَ. ﴿17﴾
18 ಆದರೆ ಅವರು ಇನ್‌ಶಾ ಅಲ್ಲಾಹ್ (ಅಲ್ಲಾಹು ಇಚ್ಛಿಸಿದರೆ) ಎಂದು ಹೇಳಲಿಲ್ಲ. وَلَا يَسْتَثْنُونَ. ﴿18﴾
19 ಆದ್ದರಿಂದ, ಅವರು ನಿದ್ದೆಯಲ್ಲಿದ್ದಾಗಲೇ (ರಾತ್ರೋರಾತ್ರಿ) ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಒಂದು ಶಿಕ್ಷೆಯು ಆ ತೋಟವನ್ನು ನಾಲ್ಕೂ ಕಡೆಯಿಂದ ಸುತ್ತಿತು. فَطَافَ عَلَيْهَا طَآئِفٌۭ مِّن رَّبِّكَ وَهُمْ نَآئِمُونَ. ﴿19﴾
20 ಆಗ ಆ ತೋಟವು ಕಟಾವು ಮಾಡಿದ ಹೊಲದಂತಾಯಿತು. فَأَصْبَحَتْ كَٱلصَّرِيمِ. ﴿20﴾
21 ಬೆಳಗಾಗುತ್ತಿದ್ದಂತೆ ಅವರು ಒಬ್ಬರನ್ನೊಬ್ಬರು ಕೂಗಿ ಕರೆದು ಹೇಳಿದರು: فَتَنَادَوْا۟ مُصْبِحِينَ. ﴿21﴾
22 “ನಿಮಗೆ ಹಣ್ಣು ಕೊಯ್ಯಬೇಕೆಂದಿದ್ದರೆ ಬೆಳಿಗ್ಗೆಯೇ ನಿಮ್ಮ ತೋಟಕ್ಕೆ ಹೊರಡಿ.” أَنِ ٱغْدُوا۟ عَلَىٰ حَرْثِكُمْ إِن كُنتُمْ صَٰرِمِينَ. ﴿22﴾
23 ನಂತರ ಅವರು ಪರಸ್ಪರ ಗುಟ್ಟಾಗಿ ಈ ಮಾತುಗಳನ್ನು ಹೇಳುತ್ತಾ ಹೊರಟರು: فَٱنطَلَقُوا۟ وَهُمْ يَتَخَٰفَتُونَ. ﴿23﴾
24 “ಇಂದು ನಿಮ್ಮ ಬಳಿಗೆ ಯಾವುದೇ ಬಡವ ಬರುವಂತಾಗಬಾರದು.” أَن لَّا يَدْخُلَنَّهَا ٱلْيَوْمَ عَلَيْكُم مِّسْكِينٌۭ. ﴿24﴾
25 ಅವರು ಒಂದು ನಿರ್ಧಾರದೊಂದಿಗೆ (ಅದನ್ನು ಜಾರಿಗೊಳಿಸುವ) ಪೂರ್ಣ ಸಾಮರ್ಥ್ಯವಿದೆಯೆಂದು ಪರಿಗಣಿಸಿ ಬೆಳಗ್ಗೆಯೇ ಹೊರಟರು. وَغَدَوْا۟ عَلَىٰ حَرْدٍۢ قَٰدِرِينَ. ﴿25﴾
26 ಆದರೆ ಅವರು ಆ ತೋಟವನ್ನು ನೋಡಿದಾಗ ಅವರು ಹೇಳಿದರು: “ನಿಶ್ಚಯವಾಗಿಯೂ ನಮಗೆ ದಾರಿ ತಪ್ಪಿದೆ. فَلَمَّا رَأَوْهَا قَالُوٓا۟ إِنَّا لَضَآلُّونَ. ﴿26﴾
27 ಅಲ್ಲ, ನಮಗೆ ಅದೃಷ್ಟ ಕೈಕೊಟ್ಟಿದೆ.” بَلْ نَحْنُ مَحْرُومُونَ. ﴿27﴾
28 ಅವರಲ್ಲಿದ್ದ ಉತ್ತಮ ವ್ಯಕ್ತಿ ಹೇಳಿದನು: “ನೀವೇಕೆ ಅಲ್ಲಾಹನ ಪರಿಶುದ್ಧಿಯನ್ನು ಕೊಂಡಾಡುವುದಿಲ್ಲ ಎಂದು ನಾನು ನಿಮ್ಮೊಡನೆ ಕೇಳಲಿಲ್ಲವೇ?” قَالَ أَوْسَطُهُمْ أَلَمْ أَقُل لَّكُمْ لَوْلَا تُسَبِّحُونَ. ﴿28﴾
29 ಅವರು ಹೇಳಿದರು: “ನಮ್ಮ ಪರಿಪಾಲಕನ (ಅಲ್ಲಾಹನ) ಪರಿಶುದ್ಧಿಯನ್ನು ನಾವು ಕೊಂಡಾಡುತ್ತೇವೆ. ನಿಶ್ಚಯವಾಗಿಯೂ ನಾವು ಅಕ್ರಮಿಗಳಾಗಿದ್ದೇವೆ.” قَالُوا۟ سُبْحَٰنَ رَبِّنَآ إِنَّا كُنَّا ظَٰلِمِينَ. ﴿29﴾
30 ನಂತರ ಅವರು ಒಬ್ಬರಿಗೊಬ್ಬರು ಮುಖ ಮಾಡಿ ಪರಸ್ಪರ ಆರೋಪ ಹೊರಿಸತೊಡಗಿದರು. فَأَقْبَلَ بَعْضُهُمْ عَلَىٰ بَعْضٍۢ يَتَلَٰوَمُونَ. ﴿30﴾
31 ಅವರು ಹೇಳಿದರು: “ಓ ನಮ್ಮ ದುರ್ಗತಿಯೇ! ನಿಶ್ಚಯವಾಗಿಯೂ ನಾವು ಅತಿರೇಕಿಗಳಾಗಿದ್ದೆವು. قَالُوا۟ يَٰوَيْلَنَآ إِنَّا كُنَّا طَٰغِينَ. ﴿31﴾
32 ನಮ್ಮ ಪರಿಪಾಲಕನು (ಅಲ್ಲಾಹು) ನಮಗೆ ಇದಕ್ಕಿಂತಲೂ ಉತ್ತಮವಾದುದನ್ನು ಬದಲಿಯಾಗಿ ನೀಡಬಹುದು. ನಿಶ್ಚಯವಾಗಿಯೂ ನಾವು ನಮ್ಮ ಪರಿಪಾಲಕನ (ಅಲ್ಲಾಹನ) ಬಗ್ಗೆ ಆಶಾವಾದಿಗಳಾಗಿದ್ದೇವೆ.” عَسَىٰ رَبُّنَآ أَن يُبْدِلَنَا خَيْرًۭا مِّنْهَآ إِنَّآ إِلَىٰ رَبِّنَا رَٰغِبُونَ. ﴿32﴾
33 ಶಿಕ್ಷೆಯು ಹೀಗೆಯೇ ಆಗಿದೆ. ಪರಲೋಕದ ಶಿಕ್ಷೆಯು ಅತಿದೊಡ್ಡದಾಗಿದೆ. ಅವರು ಅದನ್ನು ತಿಳಿಯುತ್ತಿದ್ದರೆ! كَذَٰلِكَ ٱلْعَذَابُ ۖ وَلَعَذَابُ ٱلْءَاخِرَةِ أَكْبَرُ ۚ لَوْ كَانُوا۟ يَعْلَمُونَ. ﴿33﴾
34 ನಿಶ್ಚಯವಾಗಿಯೂ, ದೇವಭಯವುಳ್ಳವರಿಗೆ ಅವರ ಪರಿಪಾಲಕನ (ಅಲ್ಲಾಹನ) ಬಳಿ ಸುಖಾಡಂಬರಗಳಿಂದ ಕೂಡಿದ ಸ್ವರ್ಗೋದ್ಯಾನಗಳಿವೆ. إِنَّ لِلْمُتَّقِينَ عِندَ رَبِّهِمْ جَنَّٰتِ ٱلنَّعِيمِ. ﴿34﴾
35 ಹಾಗಾದರೆ ನಾವು ಮುಸ್ಲಿಮರನ್ನು ಅಪರಾಧಿಗಳಂತೆ ನಡೆಸಿಕೊಳ್ಳುವೆವೇ? أَفَنَجْعَلُ ٱلْمُسْلِمِينَ كَٱلْمُجْرِمِينَ. ﴿35﴾
36 ನಿಮಗೇನಾಗಿದೆ? ನೀವು ಹೇಗೆ ತೀರ್ಪು ನೀಡುತ್ತೀರಿ? مَا لَكُمْ كَيْفَ تَحْكُمُونَ. ﴿36﴾
37 ನಿಮ್ಮಲ್ಲಿ ಒಂದು ಗ್ರಂಥವಿದ್ದು ನೀವು ಅದರಿಂದ ಓದುತ್ತಿದ್ದೀರಾ? أَمْ لَكُمْ كِتَٰبٌۭ فِيهِ تَدْرُسُونَ. ﴿37﴾
38 ಅದರಲ್ಲಿ ನಿಮ್ಮ ಮನಸ್ಸಿಗೆ ಒಪ್ಪಿಗೆಯಾಗುವ ವಿಷಯಗಳಿವೆಯೇ? إِنَّ لَكُمْ فِيهِ لَمَا تَخَيَّرُونَ. ﴿38﴾
39 ಅಥವಾ, ನೀವು ಸ್ವಯಂ ನಿಶ್ಚಯಿಸುವುದೆಲ್ಲವೂ ನಿಮಗಿದೆಯೆಂದು ಪುನರುತ್ಥಾನ ದಿನದ ತನಕ ತಲುಪುವ ಯಾವುದಾದರೂ ಪ್ರತಿಜ್ಞೆಗಳನ್ನು ನೀವು ನಮ್ಮಿಂದ ಪಡೆದಿದ್ದೀರಾ? أَمْ لَكُمْ أَيْمَٰنٌ عَلَيْنَا بَٰلِغَةٌ إِلَىٰ يَوْمِ ٱلْقِيَٰمَةِ ۙ إِنَّ لَكُمْ لَمَا تَحْكُمُونَ. ﴿39﴾
40 ಅವರಲ್ಲಿ ಯಾರು ಇದರ ಹೊಣೆಯನ್ನು ವಹಿಸಿಕೊಳ್ಳುತ್ತಾರೆಂದು ಅವರೊಡನೆ ಕೇಳಿರಿ. سَلْهُمْ أَيُّهُم بِذَٰلِكَ زَعِيمٌ. ﴿40﴾
41 ಅವರಿಗೆ ಯಾರಾದರೂ ಸಹಭಾಗಿಗಳು ಇದ್ದಾರೆಯೇ? ಅವರು ಸತ್ಯವಂತರಾಗಿದ್ದರೆ ಅವರ ಸಹಭಾಗಿಗಳನ್ನು ಕರೆದುಕೊಂಡು ಬರಲಿ. أَمْ لَهُمْ شُرَكَآءُ فَلْيَأْتُوا۟ بِشُرَكَآئِهِمْ إِن كَانُوا۟ صَٰدِقِينَ. ﴿41﴾
42 ಕಣಕಾಲನ್ನು ಪ್ರದರ್ಶಿಸಲಾಗುವ ದಿನ. ಆಗ ಅವರನ್ನು ಸಾಷ್ಟಾಂಗ ಮಾಡಲು ಕರೆಯಲಾಗುವುದು. ಆದರೆ ಅವರಿಗೆ (ಸಾಷ್ಟಾಂಗ ಮಾಡಲು) ಸಾಧ್ಯವಾಗುವುದಿಲ್ಲ.[1]
[1] ಪುನರುತ್ಥಾನದ ದಿನ ಅಲ್ಲಾಹು ತನ್ನ ಮಹತ್ವಕ್ಕೆ ಹೊಂದಿಕೆಯಾಗುವ ವಿಧದಲ್ಲಿ ತನ್ನ ಕಣಕಾಲನ್ನು ಪ್ರದರ್ಶಿಸುತ್ತಾನೆ. ಆಗ ಸತ್ಯವಿಶ್ವಾಸಿಗಳಾದ ಪುರುಷರು ಮತ್ತು ಮಹಿಳೆಯರೆಲ್ಲರೂ ಅವನ ಮುಂದೆ ಸಾಷ್ಟಾಂಗ ಮಾಡುತ್ತಾರೆ. ಆದರೆ ಇಹಲೋಕದಲ್ಲಿ ತೋರಿಕೆಗಾಗಿ ಮತ್ತು ಜನಮನ್ನಣೆಗಾಗಿ ಸಾಷ್ಟಾಂಗ ಮಾಡುತ್ತಿದ್ದವರಿಗೆ ಅದು ಸಾಧ್ಯವಾಗವುದಿಲ್ಲ.
يَوْمَ يُكْشَفُ عَن سَاقٍۢ وَيُدْعَوْنَ إِلَى ٱلسُّجُودِ فَلَا يَسْتَطِيعُونَ. ﴿42﴾
43 ಅವರ ಕಣ್ಣುಗಳು ತಗ್ಗಿಕೊಂಡಿರುವುವು ಮತ್ತು ಅವಮಾನವು ಅವರನ್ನು ಆವರಿಸಿಕೊಂಡಿರುವುದು. ವಾಸ್ತವದಲ್ಲಿ ಅವರು ಇಹಲೋಕದಲ್ಲಿ ಸುಸ್ಥಿತಿಯಲ್ಲಿದ್ದಾಗಲೂ ಅವರನ್ನು ಸಾಷ್ಟಾಂಗ ಮಾಡಲು ಕರೆಯಲಾಗುತ್ತಿತ್ತು. خَٰشِعَةً أَبْصَٰرُهُمْ تَرْهَقُهُمْ ذِلَّةٌۭ ۖ وَقَدْ كَانُوا۟ يُدْعَوْنَ إِلَى ٱلسُّجُودِ وَهُمْ سَٰلِمُونَ. ﴿43﴾
44 ಆದ್ದರಿಂದ ನನ್ನನ್ನು ಮತ್ತು ಈ ಮಾತನ್ನು (ಕುರ್‌ಆನನ್ನು) ನಿಷೇಧಿಸುವವನನ್ನು ಬಿಟ್ಟುಬಿಡಿ.[1] ಅವರು ತಿಳಿಯದ ರೀತಿಯಲ್ಲಿ ನಾವು ಅವರನ್ನು ಹಂತ ಹಂತವಾಗಿ ಹಿಡಿಯುವೆವು.
[1] ಅಂದರೆ ಅವರ ವಿಷಯವನ್ನು ನಾನು ನೋಡಿಕೊಳ್ಳುತ್ತೇನೆ.
فَذَرْنِى وَمَن يُكَذِّبُ بِهَٰذَا ٱلْحَدِيثِ ۖ سَنَسْتَدْرِجُهُم مِّنْ حَيْثُ لَا يَعْلَمُونَ. ﴿44﴾
45 ನಾನು ಅವರಿಗೆ ಕಾಲಾವಕಾಶ ನೀಡುವೆನು. ನಿಶ್ಚಯವಾಗಿಯೂ ನನ್ನ ತಂತ್ರವು ಬಲಿಷ್ಠವಾಗಿದೆ. وَأُمْلِى لَهُمْ ۚ إِنَّ كَيْدِى مَتِينٌ. ﴿45﴾
46 ನೀವು ಅವರೊಡನೆ ಪ್ರತಿಫಲವನ್ನು ಕೇಳಿ ಅವರು (ಅದನ್ನು ನೀಡಲು ಸಾಧ್ಯವಾಗದೆ) ಸಾಲದ ಹೊರೆಯನ್ನು ಹೊರುತ್ತಿದ್ದಾರೆಯೇ? أَمْ تَسْـَٔلُهُمْ أَجْرًۭا فَهُم مِّن مَّغْرَمٍۢ مُّثْقَلُونَ. ﴿46﴾
47 ಅವರ ಬಳಿ ಅದೃಶ್ಯ ಜ್ಞಾನವಿದ್ದು ಅವರು ಅದನ್ನು ಬರೆಯುತ್ತಿದ್ದಾರೆಯೇ? أَمْ عِندَهُمُ ٱلْغَيْبُ فَهُمْ يَكْتُبُونَ. ﴿47﴾
48 ಆದ್ದರಿಂದ, ನಿಮ್ಮ ಪರಿಪಾಲಕನ (ಅಲ್ಲಾಹನ) ತೀರ್ಮಾನಕ್ಕಾಗಿ ತಾಳ್ಮೆಯಿಂದಿರಿ. ನೀವು ಮೀನಿನ ಸಂಗಡಿಗನಂತೆ (ಯೂನುಸರಂತೆ) ಆಗಬೇಡಿ. ತೀವ್ರ ದುಃಖಿತನಾಗಿದ್ದ ಸ್ಥಿತಿಯಲ್ಲಿ ಅವರು ಕರೆದು ಪ್ರಾರ್ಥಿಸಿದ ಸಂದರ್ಭ. فَٱصْبِرْ لِحُكْمِ رَبِّكَ وَلَا تَكُن كَصَاحِبِ ٱلْحُوتِ إِذْ نَادَىٰ وَهُوَ مَكْظُومٌۭ. ﴿48﴾
49 ಅವರ ಪರಿಪಾಲಕನ (ಅಲ್ಲಾಹನ) ಅನುಗ್ರಹವು ಅವರನ್ನು ತಲುಪದಿರುತ್ತಿದ್ದರೆ, ಅವರನ್ನು ಆಕ್ಷೇಪಿತ ಸ್ಥಿತಿಯಲ್ಲಿ ಬಯಲು ತೀರಕ್ಕೆ ಎಸೆಯಲಾಗುತ್ತಿತ್ತು. لَّوْلَآ أَن تَدَٰرَكَهُۥ نِعْمَةٌۭ مِّن رَّبِّهِۦ لَنُبِذَ بِٱلْعَرَآءِ وَهُوَ مَذْمُومٌۭ. ﴿49﴾
50 ಅವರ ಪರಿಪಾಲಕ (ಅಲ್ಲಾಹು) ಅವರನ್ನು ಆರಿಸಿದನು ಮತ್ತು ಅವರನ್ನು ನೀತಿವಂತರಲ್ಲಿ ಸೇರಿಸಿದನು. فَٱجْتَبَٰهُ رَبُّهُۥ فَجَعَلَهُۥ مِنَ ٱلصَّٰلِحِينَ. ﴿50﴾
51 ಸತ್ಯನಿಷೇಧಿಗಳು ಈ ಉಪದೇಶವನ್ನು (ಕುರ್‌ಆನನ್ನು) ಕೇಳಿದಾಗ, ತಮ್ಮ ಕೆಟ್ಟದೃಷ್ಟಿಗಳಿಂದ ನಿಮ್ಮನ್ನು ಇನ್ನೇನು ಜಾರುವಂತೆ ಮಾಡುವುದರಲ್ಲಿದ್ದರು.[1] ಅವರು ಹೇಳುತ್ತಿದ್ದರು: “ನಿಶ್ಚಯವಾಗಿಯೂ ಅವನೊಬ್ಬ ಮಾನಸಿಕ ಅಸ್ವಸ್ಥ.”
[1] ಅಂದರೆ ನಿಮಗೆ ಅಲ್ಲಾಹನ ಸಂರಕ್ಷಣೆಯಿಲ್ಲದಿರುತ್ತಿದ್ದರೆ ನೀವು ಸತ್ಯನಿಷೇಧಿಗಳ ಕೆಟ್ಟದೃಷ್ಟಿಗೆ ಬಲಿಯಾಗುತ್ತಿದ್ದಿರಿ.
وَإِن يَكَادُ ٱلَّذِينَ كَفَرُوا۟ لَيُزْلِقُونَكَ بِأَبْصَٰرِهِمْ لَمَّا سَمِعُوا۟ ٱلذِّكْرَ وَيَقُولُونَ إِنَّهُۥ لَمَجْنُونٌۭ. ﴿51﴾
52 ಇದು (ಕುರ್‌ಆನ್) ಸರ್ವಲೋಕಗಳ ಜನರಿಗೆ ಒಂದು ಉಪದೇಶವಲ್ಲದೆ ಇನ್ನೇನೂ ಅಲ್ಲ. وَمَا هُوَ إِلَّا ذِكْرٌۭ لِّلْعَٰلَمِينَ. ﴿52﴾