الجن
ಕನ್ನಡ Translation with Arabic Quran Text
| ಕನ್ನಡ | العربية |
|---|---|
| 1 (ಪ್ರವಾದಿಯವರೇ) ಹೇಳಿರಿ: ನಿಶ್ಚಯವಾಗಿಯೂ ಜಿನ್ನ್‌ಗಳಲ್ಲಿ ಸೇರಿದ ಒಂದು ಗುಂಪು (ಕುರ್‌ಆನನ್ನು) ಕಿವಿಗೊಟ್ಟು ಕೇಳಿದರೆಂದು ನನಗೆ ದಿವ್ಯವಾಣಿ ನೀಡಲಾಗಿದೆ. ನಂತರ ಅವರು ಹೇಳಿದರು: “ನಿಶ್ಚಯವಾಗಿಯೂ ನಾವು ಅದ್ಭುತವಾದ ಕುರ್‌ಆನನ್ನು ಕೇಳಿದೆವು. | قُلْ أُوحِىَ إِلَىَّ أَنَّهُ ٱسْتَمَعَ نَفَرٌۭ مِّنَ ٱلْجِنِّ فَقَالُوٓا۟ إِنَّا سَمِعْنَا قُرْءَانًا عَجَبًۭا. ﴿1﴾ |
| 2 ಅದು ಸನ್ಮಾರ್ಗಕ್ಕೆ ದಾರಿ ತೋರಿಸುತ್ತದೆ. ಆದ್ದರಿಂದ ನಾವು ಅದರಲ್ಲಿ ವಿಶ್ವಾಸವಿಟ್ಟೆವು. ನಾವು ನಮ್ಮ ಪರಿಪಾಲಕನೊಂದಿಗೆ (ಅಲ್ಲಾಹನೊಂದಿಗೆ) ಯಾರನ್ನೂ ಎಂದಿಗೂ ಸಹಭಾಗಿಯಾಗಿ ಮಾಡುವುದಿಲ್ಲ. | يَهْدِىٓ إِلَى ٱلرُّشْدِ فَـَٔامَنَّا بِهِۦ ۖ وَلَن نُّشْرِكَ بِرَبِّنَآ أَحَدًۭا. ﴿2﴾ |
| 3 ನಿಶ್ಚಯವಾಗಿಯೂ ನಮ್ಮ ಪರಿಪಾಲಕನ (ಅಲ್ಲಾಹನ) ಮಹಿಮೆಯು ಸರ್ವೋನ್ನತವಾಗಿದೆ. ಅವನು ಯಾರನ್ನೂ ತನ್ನ ಮಡದಿ-ಮಕ್ಕಳಾಗಿ ಮಾಡಿಕೊಂಡಿಲ್ಲ. | وَأَنَّهُۥ تَعَٰلَىٰ جَدُّ رَبِّنَا مَا ٱتَّخَذَ صَٰحِبَةًۭ وَلَا وَلَدًۭا. ﴿3﴾ |
| 4 ನಮ್ಮಲ್ಲಿನ ಒಬ್ಬ ಅವಿವೇಕಿಯು (ಇಬ್ಲೀಸ್) ಅಲ್ಲಾಹನ ಬಗ್ಗೆ ಸತ್ಯಕ್ಕೆ ವಿರುದ್ಧವಾದ ಮಾತನ್ನು ಹೇಳುತ್ತಿದ್ದನು. | وَأَنَّهُۥ كَانَ يَقُولُ سَفِيهُنَا عَلَى ٱللَّهِ شَطَطًۭا. ﴿4﴾ |
| 5 ಮನುಷ್ಯರು ಮತ್ತು ಜಿನ್ನ್‌ಗಳು ಅಲ್ಲಾಹನ ಬಗ್ಗೆ ಎಂದೂ ಸುಳ್ಳು ಹೇಳುವುದು ಸಾಧ್ಯವಿಲ್ಲವೆಂದು ನಾವು ಭಾವಿಸಿದ್ದೆವು. | وَأَنَّا ظَنَنَّآ أَن لَّن تَقُولَ ٱلْإِنسُ وَٱلْجِنُّ عَلَى ٱللَّهِ كَذِبًۭا. ﴿5﴾ |
| 6 ಮನುಷ್ಯರಲ್ಲಿ ಕೆಲವರು ಕೆಲವು ಜಿನ್ನ್‌ಗಳೊಡನೆ ಅಭಯ ಕೋರುತ್ತಿದ್ದರು. ಇದರಿಂದ ಅವರು (ಜಿನ್ನ್‌ಗಳು) ತಮ್ಮ ಅತಿರೇಕವನ್ನು ಹೆಚ್ಚಿಸಿಕೊಂಡರು. | وَأَنَّهُۥ كَانَ رِجَالٌۭ مِّنَ ٱلْإِنسِ يَعُوذُونَ بِرِجَالٍۢ مِّنَ ٱلْجِنِّ فَزَادُوهُمْ رَهَقًۭا. ﴿6﴾ |
| 7 ಅಲ್ಲಾಹು ಯಾರನ್ನೂ ಪುನಃ ಜೀವ ನೀಡಿ ಎಬ್ಬಿಸುವುದಿಲ್ಲವೆಂದು ನೀವು ಭಾವಿಸಿದಂತೆಯೇ ಮನುಷ್ಯರೂ ಭಾವಿಸಿದ್ದರು. | وَأَنَّهُمْ ظَنُّوا۟ كَمَا ظَنَنتُمْ أَن لَّن يَبْعَثَ ٱللَّهُ أَحَدًۭا. ﴿7﴾ |
| 8 ನಾವು ಆಕಾಶವನ್ನು ಮುಟ್ಟಿದೆವು. ಆಗ ಅದು ಪ್ರಬಲ ಕಾವಲುಗಾರರು ಮತ್ತು ಅಗ್ನಿಜ್ವಾಲೆಗಳಿಂದ ತುಂಬಿದ್ದಾಗಿ ಕಂಡೆವು. | وَأَنَّا لَمَسْنَا ٱلسَّمَآءَ فَوَجَدْنَٰهَا مُلِئَتْ حَرَسًۭا شَدِيدًۭا وَشُهُبًۭا. ﴿8﴾ |
| 9 ನಾವು ಇದಕ್ಕಿಂತ ಮೊದಲು (ಆಕಾಶಲೋಕದ) ಮಾತುಗಳಿಗೆ ಕಿವಿಗೊಡಲು ಆಕಾಶದ ವಿವಿಧ ಸ್ಥಳಗಳಲ್ಲಿ ಕುಳಿತುಕೊಳ್ಳುತ್ತಿದ್ದೆವು. ಆದರೆ ಈಗ ಯಾರಾದರೂ ಕಿವಿಗೊಟ್ಟು ಕೇಳಿದರೆ, ಅವನಿಗೋಸ್ಕರ ಹೊಂಚು ಹಾಕುತ್ತಿರುವ ಒಂದು ಅಗ್ನಿಜ್ವಾಲೆಯನ್ನು ಕಾಣುವನು. | وَأَنَّا كُنَّا نَقْعُدُ مِنْهَا مَقَٰعِدَ لِلسَّمْعِ ۖ فَمَن يَسْتَمِعِ ٱلْءَانَ يَجِدْ لَهُۥ شِهَابًۭا رَّصَدًۭا. ﴿9﴾ |
| 10 ಭೂಮಿಯಲ್ಲಿರುವವರಿಗೆ ಕೆಡುಕನ್ನು ಉದ್ದೇಶಿಸಲಾಗಿದೆಯೋ, ಅಥವಾ ಅವರ ಪರಿಪಾಲಕನು (ಅಲ್ಲಾಹು) ಅವರಿಗೆ ಒಳಿತನ್ನು ಉದ್ದೇಶಿಸಿದ್ದಾನೋ ಎಂದು ನಮಗೆ ತಿಳಿದಿಲ್ಲ. | وَأَنَّا لَا نَدْرِىٓ أَشَرٌّ أُرِيدَ بِمَن فِى ٱلْأَرْضِ أَمْ أَرَادَ بِهِمْ رَبُّهُمْ رَشَدًۭا. ﴿10﴾ |
| 11 ನಮ್ಮಲ್ಲಿ ನೀತಿವಂತರಿದ್ದಾರೆ ಮತ್ತು ನಮ್ಮಲ್ಲಿ ಅದಕ್ಕೆ ಹೊರತಾದವರೂ ಇದ್ದಾರೆ. ನಾವು ಹಲವಾರು ಭಿನ್ನ ಮಾರ್ಗಗಳಲ್ಲಿ ಹಂಚಿ ಹೋಗಿದ್ದೇವೆ. | وَأَنَّا مِنَّا ٱلصَّٰلِحُونَ وَمِنَّا دُونَ ذَٰلِكَ ۖ كُنَّا طَرَآئِقَ قِدَدًۭا. ﴿11﴾ |
| 12 ಭೂಮಿಯಲ್ಲಿ ಎಂದಿಗೂ ಅಲ್ಲಾಹನನ್ನು ಅಸಮರ್ಥಗೊಳಿಸಲು ಸಾಧ್ಯವಿಲ್ಲ ಮತ್ತು ಪಲಾಯನ ಮಾಡುವ ಮೂಲಕವೂ ಅವನನ್ನು ಸೋಲಿಸಲು ಸಾಧ್ಯವಿಲ್ಲವೆಂದು ನಮಗೆ ಖಾತ್ರಿಯಾಗಿದೆ. | وَأَنَّا ظَنَنَّآ أَن لَّن نُّعْجِزَ ٱللَّهَ فِى ٱلْأَرْضِ وَلَن نُّعْجِزَهُۥ هَرَبًۭا. ﴿12﴾ |
| 13 ನಾವು ಸನ್ಮಾರ್ಗವನ್ನು (ಕುರ್‌ಆನನ್ನು) ಆಲಿಸಿದಾಗ ಅದರಲ್ಲಿ ವಿಶ್ವಾಸವಿಟ್ಟೆವು. ಯಾರು ತನ್ನ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ವಿಶ್ವಾಸವಿಡುತ್ತಾನೋ ಅವನು ನಷ್ಟವನ್ನು ಅಥವಾ ಅನ್ಯಾಯವನ್ನು ಭಯಪಡಬೇಕಾಗಿಲ್ಲ. | وَأَنَّا لَمَّا سَمِعْنَا ٱلْهُدَىٰٓ ءَامَنَّا بِهِۦ ۖ فَمَن يُؤْمِنۢ بِرَبِّهِۦ فَلَا يَخَافُ بَخْسًۭا وَلَا رَهَقًۭا. ﴿13﴾ |
| 14 ನಮ್ಮಲ್ಲಿ ಮುಸ್ಲಿಮರಿದ್ದಾರೆ ಮತ್ತು ನಮ್ಮಲ್ಲಿ ಅನ್ಯಾಯ ಮಾಡುವವರೂ ಇದ್ದಾರೆ. ಯಾರು ಮುಸ್ಲಿಮನಾದನೋ ಅವನು ಸನ್ಮಾರ್ಗವನ್ನು ಗುರಿಯಾಗಿಸಿಕೊಂಡನು. | وَأَنَّا مِنَّا ٱلْمُسْلِمُونَ وَمِنَّا ٱلْقَٰسِطُونَ ۖ فَمَنْ أَسْلَمَ فَأُو۟لَٰٓئِكَ تَحَرَّوْا۟ رَشَدًۭا. ﴿14﴾ |
| 15 ಆದರೆ ಅನ್ಯಾಯ ಮಾಡಿದವರು ಯಾರೋ ಅವರು ನರಕಕ್ಕೆ ಸೌದೆಯಾಗುವರು. | وَأَمَّا ٱلْقَٰسِطُونَ فَكَانُوا۟ لِجَهَنَّمَ حَطَبًۭا. ﴿15﴾ |
| 16 ಜನರು ನೇರಮಾರ್ಗದಲ್ಲಿ ದೃಢವಾಗಿ ನಿಂತರೆ, ನಾವು ಅವರಿಗೆ ಹೇರಳವಾಗಿ ನೀರನ್ನು ಕುಡಿಯಲು ಕೊಡುತ್ತಿದ್ದೆವು. | وَأَلَّوِ ٱسْتَقَٰمُوا۟ عَلَى ٱلطَّرِيقَةِ لَأَسْقَيْنَٰهُم مَّآءً غَدَقًۭا. ﴿16﴾ |
| 17 ಅದರ ಮೂಲಕ ಅವರನ್ನು ಪರೀಕ್ಷಿಸುವುದಕ್ಕಾಗಿ. ಯಾರು ತನ್ನ ಪರಿಪಾಲಕನ (ಅಲ್ಲಾಹನ) ಸ್ಮರಣೆಯಿಂದ ವಿಮುಖನಾಗುತ್ತಾನೋ ಅವನಿಗೆ ಅಲ್ಲಾಹು ಅತಿಕಠೋರ ಶಿಕ್ಷೆಯನ್ನು ನೀಡುವನು. | لِّنَفْتِنَهُمْ فِيهِ ۚ وَمَن يُعْرِضْ عَن ذِكْرِ رَبِّهِۦ يَسْلُكْهُ عَذَابًۭا صَعَدًۭا. ﴿17﴾ |
| 18 ಮಸೀದಿಗಳೆಲ್ಲವೂ ಅಲ್ಲಾಹನಿಗೆ ಸೇರಿದ್ದು. ಆದ್ದರಿಂದ ನೀವು ಅಲ್ಲಾಹನ ಜೊತೆಗೆ ಯಾರನ್ನೂ ಕರೆದು ಪ್ರಾರ್ಥಿಸಬೇಡಿ. | وَأَنَّ ٱلْمَسَٰجِدَ لِلَّهِ فَلَا تَدْعُوا۟ مَعَ ٱللَّهِ أَحَدًۭا. ﴿18﴾ |
| 19 ಅಲ್ಲಾಹನ ದಾಸನು (ಪ್ರವಾದಿ) ಅಲ್ಲಾಹನೊಡನೆ ಪ್ರಾರ್ಥಿಸಲು ನಿಂತಾಗ ಅವರು (ಜಿನ್ನ್‌ಗಳು) ಇನ್ನೇನು ಗುಂಪು ಗುಂಪಾಗಿ ಅವರ ಮೇಲೆ ಮುಗಿಬೀಳುವಂತಿದ್ದರು.” | وَأَنَّهُۥ لَمَّا قَامَ عَبْدُ ٱللَّهِ يَدْعُوهُ كَادُوا۟ يَكُونُونَ عَلَيْهِ لِبَدًۭا. ﴿19﴾ |
| 20 ಹೇಳಿರಿ: “ನಾನು ನನ್ನ ಪರಿಪಾಲಕನನ್ನು (ಅಲ್ಲಾಹನನ್ನು) ಮಾತ್ರ ಕರೆದು ಪ್ರಾರ್ಥಿಸುತ್ತೇನೆ. ನಾನು ಅವನೊಂದಿಗೆ ಯಾರನ್ನೂ ಸಹಭಾಗಿಯಾಗಿ ಮಾಡುವುದಿಲ್ಲ.” | قُلْ إِنَّمَآ أَدْعُوا۟ رَبِّى وَلَآ أُشْرِكُ بِهِۦٓ أَحَدًۭا. ﴿20﴾ |
| 21 ಹೇಳಿರಿ: “ನಿಮಗೆ ಯಾವುದೇ ತೊಂದರೆ ಅಥವಾ ಉಪಕಾರ ಮಾಡುವುದು ನನ್ನ ಅಧೀನದಲ್ಲಿಲ್ಲ.” | قُلْ إِنِّى لَآ أَمْلِكُ لَكُمْ ضَرًّۭا وَلَا رَشَدًۭا. ﴿21﴾ |
| 22 ಹೇಳಿರಿ: “ನಿಶ್ಚಯವಾಗಿಯೂ ನನ್ನನ್ನು ಯಾರೂ ಎಂದಿಗೂ ಅಲ್ಲಾಹನಿಂದ ರಕ್ಷಿಸಲಾರರು. ನಾನು ಅವನ ಹೊರತು ಎಲ್ಲಿಯೂ ಆಶ್ರಯವನ್ನು ಪಡೆಯಲಾರೆ. | قُلْ إِنِّى لَن يُجِيرَنِى مِنَ ٱللَّهِ أَحَدٌۭ وَلَنْ أَجِدَ مِن دُونِهِۦ مُلْتَحَدًا. ﴿22﴾ |
| 23 ಅಲ್ಲಾಹನ ವಚನಗಳು ಮತ್ತು ಅವನ ಸಂದೇಶಗಳನ್ನು (ಜನರಿಗೆ) ತಲುಪಿಸುವುದು ಮಾತ್ರ ನನ್ನ ಕರ್ತವ್ಯವಾಗಿದೆ.” ಯಾರು ಅಲ್ಲಾಹು ಮತ್ತು ಅವನ ಸಂದೇಶವಾಹಕರಿಗೆ ಅವಿಧೇಯತೆ ತೋರುತ್ತಾನೋ ನಿಶ್ಚಯವಾಗಿಯೂ ಅವನಿಗೆ ನರಕಾಗ್ನಿಯಿದೆ. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. | إِلَّا بَلَٰغًۭا مِّنَ ٱللَّهِ وَرِسَٰلَٰتِهِۦ ۚ وَمَن يَعْصِ ٱللَّهَ وَرَسُولَهُۥ فَإِنَّ لَهُۥ نَارَ جَهَنَّمَ خَٰلِدِينَ فِيهَآ أَبَدًا. ﴿23﴾ |
| 24 ಎಲ್ಲಿಯವರೆಗೆಂದರೆ, ಅವರಿಗೆ ವಾಗ್ದಾನ ಮಾಡಲಾಗುವುದನ್ನು ಅವರು ಕಣ್ಣಾರೆ ನೋಡುವ ತನಕ (ಅವರ ಸತ್ಯವನ್ನು ಅಂಗೀಕರಿಸುವುದಿಲ್ಲ). ಆಗ ಅವರು ತಿಳಿದುಕೊಳ್ಳುವರು—ಯಾರ ಸಹಾಯಕ ಅತ್ಯಂತ ದುರ್ಬಲ ಮತ್ತು ಯಾರು ಅತಿ ಕಡಿಮೆ ಸಂಖ್ಯೆಯವರು ಎಂದು. | حَتَّىٰٓ إِذَا رَأَوْا۟ مَا يُوعَدُونَ فَسَيَعْلَمُونَ مَنْ أَضْعَفُ نَاصِرًۭا وَأَقَلُّ عَدَدًۭا. ﴿24﴾ |
| 25 ಹೇಳಿರಿ: “ನಿಮಗೆ ವಾಗ್ದಾನ ಮಾಡಲಾಗುತ್ತಿರುವುದು ಹತ್ತಿರದಲ್ಲಿದೆಯೋ ಅಥವಾ ನನ್ನ ಪರಿಪಾಲಕನು (ಅಲ್ಲಾಹು) ಅದಕ್ಕೆ ದೂರದ ಒಂದು ಅವಧಿಯನ್ನು ನಿಶ್ಚಯಿಸುವನೋ ಎಂದು ನನಗೆ ತಿಳಿದಿಲ್ಲ.” | قُلْ إِنْ أَدْرِىٓ أَقَرِيبٌۭ مَّا تُوعَدُونَ أَمْ يَجْعَلُ لَهُۥ رَبِّىٓ أَمَدًا. ﴿25﴾ |
| 26 ಅವನು ಅದೃಶ್ಯವನ್ನು ತಿಳಿದವನು. ಅವನು ತನ್ನ ಅದೃಶ್ಯವನ್ನು ಯಾರಿಗೂ ಪ್ರಕಟಗೊಳಿಸುವುದಿಲ್ಲ. | عَٰلِمُ ٱلْغَيْبِ فَلَا يُظْهِرُ عَلَىٰ غَيْبِهِۦٓ أَحَدًا. ﴿26﴾ |
| 27 ಅವನು ಇಷ್ಟಪಡುವ ಸಂದೇಶವಾಹಕರಿಗೆ ಹೊರತು. ಆಗಲೂ ಅವನು ಆ ಸಂದೇಶವಾಹಕರ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಪಹರೆಗಾರರನ್ನು ನಿಶ್ಚಯಿಸುವನು. | إِلَّا مَنِ ٱرْتَضَىٰ مِن رَّسُولٍۢ فَإِنَّهُۥ يَسْلُكُ مِنۢ بَيْنِ يَدَيْهِ وَمِنْ خَلْفِهِۦ رَصَدًۭا. ﴿27﴾ |
| 28 ಅವರು (ಸಂದೇಶವಾಹಕರು) ಅವರ ಪರಿಪಾಲಕನ (ಅಲ್ಲಾಹನ) ಸಂದೇಶಗಳನ್ನು ತಲುಪಿಸಿದ್ದಾರೆಂದು ಪ್ರವಾದಿಯವರು ತಿಳಿಯುವುದಕ್ಕಾಗಿ. ಅವನು ಅವರ ಬಳಿಯಿರುವುದನ್ನು ಆವರಿಸಿಕೊಂಡಿದ್ದಾನೆ ಮತ್ತು ಎಲ್ಲಾ ವಸ್ತುಗಳನ್ನು ಸರಿಯಾಗಿ ಎಣಿಸಿಟ್ಟಿದ್ದಾನೆ. | لِّيَعْلَمَ أَن قَدْ أَبْلَغُوا۟ رِسَٰلَٰتِ رَبِّهِمْ وَأَحَاطَ بِمَا لَدَيْهِمْ وَأَحْصَىٰ كُلَّ شَىْءٍ عَدَدًۢا. ﴿28﴾ |